

ಯಲ್ಲಾಪುರ: ಡಕಾಯಿತರನ್ನು ಹಿಡಿಯಲು ತೆರಳಿದ್ದ ಪೊಲೀಸರ ಮೇಲೆ ದುಷ್ಕರ್ವಿುಗಳು ತಾಲೂಕಿನ ಡೌಗಿನಾಲಾ ಬಳಿ ದಾಳಿ ನಡೆಸಿದ್ದಾರೆ. ದಾಳಿ ನಡೆಸಿದವರ ಮೇಲೆಯೂ ಪೊಲೀಸರು ಗುಂಡು ಹಾರಿಸಿದ್ದಾರೆ.
ಇತ್ತೀಚೆಗೆ ಮುಂಡಗೋಡಿನ ಜಮೀರ ಅಹ್ಮದ್ ದುರ್ಗಾವಾಲೆ ಅವರ ಅಪಹರಣವಾಗಿದ್ದು, ದುಷ್ಕರ್ವಿುಗಳು 30 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕುಟುಂಬದವರು 18 ಲಕ್ಷ ರೂ. ನೀಡಿದ ನಂತರ ಅವರನ್ನು ಬಿಡುಗಡೆಗೊಳಿಸಲಾಗಿತ್ತು.
ಪ್ರಕರಣದ ಬೆನ್ನು ಹತ್ತಿದ ಪೊಲೀಸರು, ಹಣ ಪಡೆದು ಹೋದ ಆರೋಪಿಗಳ ಕಾರನ್ನು ಹಿಂಬಾಲಿಸಿ ಚಿಕ್ಕೋಡಿಯಲ್ಲಿ ಐದು ಜನರನ್ನು ವಶಕ್ಕೆ ಪಡೆದಿದ್ದರು. ಅವರ ವಿಚಾರಣೆ ನಡೆಸಿದಾಗ ಪ್ರಕರಣದ ಸೂತ್ರಧಾರರು ಬೇರೆಯವರೆಂಬ ಮಾಹಿತಿ ತಿಳಿದು ಬಂದಿದ್ದು, ಅವರ ಪತ್ತೆಗೆ ಜಾಲ ಬೀಸಿದರು.
ಪಡೆದ ಹಣವನ್ನು ಹಂಚಿಕೊಳ್ಳಲು ಯಲ್ಲಾಪುರ ಮಾರ್ಗವಾಗಿ ಹುಬ್ಬಳ್ಳಿಗೆ ಹೋಗುತ್ತಿದ್ದ ಪ್ರಮುಖ ಆರೋಪಿಗಳನ್ನು ಪೊಲೀಸರು ಬೆನ್ನಟ್ಟಿದ್ದಾರೆ. ತಾಟವಾಳದ ಡೌಗಿನಾಳ ಬಳಿ ಆರೋಪಿಗಳ ಕಾರು ಮರವೊಂದಕ್ಕೆ ಡಿಕ್ಕಿಯಾಗಿದೆ. ಐದು ಜನರಿಗೂ ಶರಣಾಗುವಂತೆ ಪೊಲೀಸರು ತಾಕೀತು ಮಾಡಿದರು. ಇದಕ್ಕೆ ಒಪ್ಪದ ದುಷ್ಕರ್ವಿುಗಳು ಪೊಲೀಸರ ಕಡೆ ಕಲ್ಲು ಬೀಸಿದರು. ಚಾಕು, ಕಾರದಪುಡಿಗಳಿಂದ ದಾಳಿ ನಡೆಸಿದರು. ಘಟನೆಯಲ್ಲಿ ಮುಂಡಗೋಡ ಸಿಪಿಐ ರಂಗನಾಥ ನೀಲಮ್ಮನವರ್, ಪಿಎಸ್ಐ ಪರಶುರಾಮ ಹಾಗೂ ಯಲ್ಲಾಪುರ ಠಾಣೆಯ ಕ್ರೖೆಂ ವಿಭಾಗದ ಸಿಬ್ಬಂದಿ ಮಹಮ್ಮದ್ ಶಫಿ ಗಾಯಗೊಂಡಿದ್ದಾರೆ.
ಪ್ರತಿಯಾಗಿ ಪೊಲೀಸರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹೊಡೆದು ಬೆದರಿಸಿದರು. ಅದಕ್ಕೂ ಬಗ್ಗದಿದ್ದಾಗ ರಹೀಮ್ ಜಾಫರ ಸಾಬ ಹಾಗೂ ಅಜಯ ಫಕೀರಪ್ಪ ಕಾಲಿಗೆ ಗುಂಡು ಹಾರಿಸಿದರು. ಅವರೊಂದಿಗೆ ಕಾರಿನಲ್ಲಿದ್ದ ದಾದಾಪೀರ್ ಅಲ್ಲಾಭಕ್ಷ, ಸಾಗರ ಕಲಾಲ ಹಾಗೂ ಹಾಸೀಂ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದರು.
ಗಾಯಾಳು ಪೊಲೀಸರಿಗೆ ಯಲ್ಲಾಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಗುಂಡೇಟಿನಿಂದ ಗಾಯಗೊಂಡ ಆರೋಪಿಗಳನ್ನು ಕಾರವಾರಕ್ಕೆ ಸಾಗಿಸಲಾಗಿದೆ.
ಶ್ರೀಮಂತಿಕೆ ಕಂಡು ದರ್ಗಾವಾಲೆ ಅಪಹರಣ: ಅಪಹರಣಕ್ಕೊಳಗಾದ ಮುಂಡಗೋಡಿನ ಜಮೀರ್ ಅಹ್ಮದ್ ದರ್ಗಾವಾಲೆ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿ. ಆತನ ವಿರುದ್ಧ ಅಕ್ರಮ ಮರಳುಗಾರಿಕೆ, ಬೆಟ್ಟಿಂಗ್ ಸೇರಿ ಅನೇಕ ಪ್ರಕರಣಗಳಿವೆ. ಮುಂಡಗೋಡಿನಲ್ಲಿ ಒಂದಷ್ಟು ಹುಡುಗರನ್ನು ಇರಿಸಿಕೊಂಡು ಲೇವಾದೇವಿ ವ್ಯವಹಾರ ಮಾಡುತ್ತಿದ್ದ. ಜೈಲಿನಿಂದ ಬಿಡುಗಡೆಯಾಗುವ ಕ್ರಿಮಿನಲ್ಗಳನ್ನು ಸಂರ್ಪಸಿ ಅವರೊಂದಿಗೆ ಸ್ನೇಹ ಬೆಳೆಸುವ, ತನ್ನ ವ್ಯವಹಾರಕ್ಕೆ ಸೇರಿಸಿಕೊಳ್ಳುವ ಶೋಕಿ ಇತ್ತು. ಅದರಂತೆಯೇ ಧಾರವಾಡದಲ್ಲಿ ಕೊಲೆ ಮಾಡಿ ಜೈಲು ಸೇರಿದ್ದ ರಹೀಮ್ ಹಾಗೂ ಅಜಯರನ್ನೂ ಪರಿಚಯ ಮಾಡಿಕೊಂಡಿದ್ದ. ಅವರಿಬ್ಬರೂ ಕಳೆದ ಡಿಸೆಂಬರ್ 3ರಂದು ಜಮೀರ್ ಮನೆಗೆ ಬಂದಾಗ ಅವನ ಶ್ರೀಮಂತಿಕೆ ನೋಡಿದ್ದರು. ಮುಂಡಗೋಡಿನ ಖಾಜಾ ಎಂಬಾತ ಜಮೀರ್ನನ್ನು ಅಪಹರಣ ಮಾಡಿ ಹಣ ಗಳಿಸುವ ಉಪಾಯ ಮಾಡಿದ್ದಾನೆ. ಅದರಂತೆ ಅಪಹರಣ ಕಾರ್ಯಾಚರಣೆಗಿಳಿದು, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.