

ಕಲಬುರಗಿ: ಅಫಜಲಪುರ ತಾಲೂಕಿನ ದಿಕ್ಸಂಗಾ ಬಿ ಗ್ರಾಮದಿಂದ ಗಾಣಗಾಪುರಕ್ಕೆ ಬೈಕ್ ಮೇಲೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ತಡೆದು, ಬೆದರಿಸಿ ಬೈಕ್ ದೋಚಿದ್ದ ಆರೋಪಿಗಳನ್ನು ಎಂಟು ಗಂಟೆಯಲ್ಲೇ ಪತ್ತೆ ಹಚ್ಚಿ, ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದರು.
ಆಳಂದ ತಾಲೂಕಿನ ದುತ್ತರಗಾಂವದ ಸುಧಾಕರ ಮದಗುಣಕಿ(೨೬), ಭಟ್ಟರಗಾದ ರಾಹುಲ್ ತೋಳನೂರ(೧೯)ರನ್ನು ಬಂಧಿಸಿ, ದೋಚಿದ್ದ ಬೈಕ್ ಮತ್ತು ಕೃತ್ಯಕ್ಕೆ ಬಳಸಿದ್ದ ಬೈಕ್ ಸೇರಿ ೧.೫೦ ಲಕ್ಷ ರೂ. ಮೌಲ್ಯದ ಎರಡು ಬೈಕ್ ವಶಕ್ಕೆ ಪಡೆಯುವಲ್ಲಿ ರೇವೂರ ಪೊಲೀಸ್ ಠಾಣೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾ.೪ರಂದು ರಾತ್ರಿ ೯.೧೫ಕ್ಕೆ ದಿಕ್ಸಂಗಾ (ಬಿ) ಗ್ರಾಮದ ಮಲ್ಲಿನಾಥ ಹಿರೇಗೊಂಡ, ಮಲ್ಲಿನಾಥ ಪೊಲೀಸ್ ಪಾಟೀಲ್ ಸ್ಟೇಷನ್ ಗಾಣಗಾಪುರಕ್ಕೆ ಹೋಗುವಾಗ ಮಾರ್ಗ ಮಧ್ಯೆ ತಡೆದು, ಕಲ್ಲು ಹೊಡೆಯುತ್ತೇವೆ, ಕೊಲೆ ಮಾಡುತ್ತೇವೆ ಎಂದು ಬೆದರಿಸಿ, ಬೈಕ್ ದೋಚಿದ್ದರು. ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣ ಮಾಹಿತಿ ಅರಿತು ತನಿಖೆ ಆರಂಭಿಸಿ, ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಪ್ರಕರಣದಲ್ಲಿ ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್‌ಐಗಳಾದ ಸೋಮಲಿಂಗ ಒಡೆಯರ್, ರಾಹುಲ್ ಪವಾಡೆ, ಕಮಲು ರಾಠೋಡ್, ಸಿಬ್ಬಂದಿ ಯಲ್ಲಾಲಿಂಗ ಕರಜಗಿ, ಆನಂದ ಹಿರೇಮಠ, ರಾಜು ಕಲ್ಯಾಣಕರ್, ಭಗವಂತ್ರಾಯ ಬಿರಾದಾರ, ಭೀರಣ್ಣ, ವಿಶ್ವನಾx, ಚಿದಾನಂದ ಬಿರಾದಾರ, ನಿಂಗಣ್ಣ ಕಣ್ಣಿ, ಯಲ್ಲಾಲಿಂಗ ಉಡಗಿ, ಶ್ರೀಕಾಂತ ಖಾನಾಪುರ, ಶರಣಬಸಪ್ಪ, ಶಿವಯ್ಯ, ರಾಜಶೇಖರ ಅವರ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಎಂಟು ಗಂಟೆಯಲ್ಲೇ ಬಂಧನ ಮಾಡಲಾಗಿದೆ ಎಂದು ತಿಳಿಸಿದರು.
ಬಂಧಿತ ಸುಧಾಕರನ ವಿರುದ್ಧ ಕಲಬುರಗಿಯ ರಾಘವೇಂದ್ರ ಠಾಣೆ, ವಿಶ್ವವಿದ್ಯಾಲಯ ಠಾಣೆ, ನರೋಣಾ ಠಾಣೆಯಲ್ಲಿ ದರೋಡೆ ಪ್ರಕರಣಗಳಿದ್ದು, ಆಲಮೇಲ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ. ರಾಹುಲ್ ವಿರುದ್ಧ ದರೋಡೆ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
ಮಾತು ಮೂಲ ತಿಳಿಸಿತು: ದರೋಡೆಕೋರರು ಬೆದರಿಸುವ ವೇಳೆ ಸ್ಥಳೀಯ ಭಾಷೆ ಮಾತನಾಡಿದ್ದರಿಂದ ಅವರು ಸ್ಥಳೀಯರು ಎಂಬುದನ್ನು ಅರಿತು, ಕಾರ್ಯಾಚರಣೆಗೆ ಇಳಿದಿದ್ದು, ಸುತ್ತಲಿನ ಗ್ರಾಮಗಳಲ್ಲಿ ಸಿಬ್ಬಂದಿಯನ್ನು ಕ್ಷೀಪ್ರ ಕಾರ್ಯಾಚರಣೆಯನ್ನು ನಡೆಸಿ, ಪತ್ತೆ ಹಚ್ಚಲಾಗಿದೆ ಎಂದು ಎಸ್‌ಪಿ ಅಡ್ಡೂರು ತಿಳಿಸಿದರು.