

ಬೆಳಗಾವಿ: ಮನೆಗೆ ನುಗ್ಗಿ ಆಭರಣ, ನಗದು ಸೇರಿ ಸಿಕ್ಕಿದ ವಸ್ತು ದೋಚಿ ಪರಾರಿಯಾ ಗುತ್ತಿದ್ದ ಇಬ್ಬರು ಕಳ್ಳರನ್ನು ಗುರುವಾರ ರಾತ್ರಿ ಮಾರಿಹಾಳ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಂದ 3.71 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಅನಗೋಳ ಪ್ರದೇಶದ ಜಟಪಟ ಕಾಲನಿ ನಿವಾಸಿಗಳಾದ ವೈಭವ ಮಹಾದೇವ ಸಳಕೆ (21) ಹಾಗೂ ರಿಯಾನ್ ಶೇಖ್ (21) ಬಂಧಿತರು.ಮುತಗಾ ಗ್ರಾಮದ ಶ್ರೀರಾಮ ಕಾಲನಿಯ ದೀಪಕ ಬಸವರಾಜ ಹಡಪದ ಎಂಬುವರ ಮನೆಯಲ್ಲಿ ಇತ್ತೀಚೆಗೆ ನಡೆದಿದ್ದ ಆಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರಿಹಾಳ ಠಾಣೆ ಪಿಐ ಬಿ.ಎಸ್. ಮಂಟೂರ, ಪಿಎಸ್‌ಐ ಲಕ್ಷ್ಮಣ ಕರಿಗೌಡರ ನೇತೃತ್ವದ ತಂಡ ತನಿಖೆ ಕೈಗೊಂಡಿತ್ತು.
ಈ ವೇಳೆ ಕಳ್ಳರಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕಿವಿಯೋಲೆ, ಸರ ಸೇರಿದಂತೆ ವಿವಿಧ ಚಿನ್ನಾಭರಣ, 6 ಬೈಕ್, ಲ್ಯಾಪ್‌ಟಾಪ್, ಟಿವಿ, ಮೊಬೈಲ್, ಸಿಲಿಂಡರ್ ವಶಕ್ಕೆ ಪಡೆದುಕೊಂಡು ಬಂಧಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.