ಸೂಲಿಬೆಲೆಯಲ್ಲಿ ರಸ್ತೆ ಪಕ್ಕ ತ್ಯಾಜ್ಯ ವಿಲೇವಾರಿ, ಬೀದಿನಾಯಿಗಳ ಕಾಟಕ್ಕೆ ಬೇಸತ್ತ ವಾಯುವಿಹಾರಿಗಳು, ವಾಹನ ಸವಾರರು

08 Sulibele 001
Published on

ರವಿ ಎಂ. ಸೂಲಿಬೆಲೆ

ಸೂಲಿಬೆಲೆಯಿಂದ ಜಂಗಮಕೋಟೆಗೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 207ರಲ್ಲಿ ರಸ್ತೆ ಬದಿಯೇ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದ್ದು, ಬೀದಿನಾಯಿಗಳ ಹಿಂಡೇ ಜಮಾಯಿಸುತ್ತಿವೆ.

ಈ ಮಾರ್ಗದಲ್ಲಿ ಓಡಾಡುವ ವಿಹಾರಿಗಳು ಹಾಗೂ ವಾಹನ ಸವಾರರ ಮೇಲೆ ನಾಯಿಗಳು ದಾಳಿ ಮಾಡುತ್ತಿದ್ದು, ಜನರು ಜೀವವನ್ನು ಕೈಯಲ್ಲೇ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸಮಸ್ಯೆ ಪರಿಹರಿಸುವಂತೆ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಆಡಳಿತಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಯಾರೊಬ್ಬರೂ ಕ್ರಮ ಕೈಗೊಳ್ಳದೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೋಟೆಲ್ ತ್ಯಾಜ್ಯವೇ ಹೆಚ್ಚು: ಸೂಲಿಬೆಲೆಯ ಮಾಂಸದ ಅಂಗಡಿ, ಹೋಟೆಲ್‌ಗಳ ತ್ಯಾಜ್ಯದ ಜತೆಗೆ ಹಳೇ ಕಟ್ಟಡಗಳ ತ್ಯಾಜ್ಯವನ್ನೂ ತಂದು ರಸ್ತೆ ಬದಿ ಸುರಿಯಲಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಅಲ್ಲದೆ, ಇಲ್ಲಿನ ಕಲುಷಿತ ವಾತಾವರಣ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಸ್ಥಳೀಯರಿಗೆ ರೋಗದ ಭೀತಿ ಎದುರಾಗಿದೆ.

ಈ ರಸ್ತೆಯಲ್ಲಿ ಹೊಲಿಗೆ ತರಬೇತಿ ಕೇಂದ್ರದ ಮಹಿಳೆಯರು, ರೇಷ್ಮೆ ಇಲಾಖೆ ಸಿಬ್ಬಂದಿ, ಸ್ವತಂತ್ರ ಪದವಿ ಕಾಲೇಜು ವಿದ್ಯಾರ್ಥಿಗಳು ಓಡಾಡುತ್ತಾರೆ. ಬೀದಿನಾಯಿಗಳ ದಾಳಿ ಮಾಡುತ್ತವೆ. ಇದರಿಂದ ಹಲವರು ಮಾರಣಾಂತಿಕವಾಗಿ ಗಾಯಗೊಂಡಿರುವ ನಿದರ್ಶನವೂ ಇದೆ.

ಹಳೇ ಬಸ್ ನಿಲ್ದಾಣದಲ್ಲಿ ದಿನೇದಿನೆ ಕಬಾಬ್, ಎಗ್‌ರೈಸ್ ಅಂಗಡಿಗಳು ಹೆಚ್ಚಾಗುತ್ತಿವೆ. ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಇಲ್ಲಿ ಹಾಕಲಾಗುತ್ತಿದೆ. ಇದನ್ನು ತಿನ್ನಲು ಬರುವ ಬೀದಿನಾಯಿಗಳ ಕಾಟ ವಿಪರೀತವಾಗಿದೆ. ಶಾಲೆ ಮುಂಭಾಗದಲ್ಲಿ ಅಂಗಡಿಗಳು ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಆಡಳಿತಾಧಿಕಾರಿಗಳು ಮುಂದಾಗಬೇಕಿದೆ. ಎಂ.ಆರ್. ಉಮೇಶ್, ಸೂಲಿಬೆಲೆ ಗ್ರಾಮದ ಹಲವು ಸಮಸ್ಯೆಗಳು ನನ್ನ ಗಮನಕ್ಕೆ ಬರುತ್ತವೆ. ಈ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಪಿಡಿಒ ಅಥವಾ ಆಡಳಿತಾಧಿಕಾರಿಗಳು ಇದಕ್ಕೆ ಸ್ಪಂದಿಸುತ್ತಿಲ್ಲ. ಜನಪ್ರತಿನಿಧಿಗಳ ಮಾತನ್ನು ಕಿವಿಮೇಲೆ ಹಾಕಿಕೊಳ್ಳುತ್ತಿಲ್ಲ. ಮರವೆ ಕೃಷ್ಣಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ರಸ್ತೆ ಪಕ್ಕದಲ್ಲೇ ಕಸ ವಿಲೇವಾರಿ ಮಾಡುತ್ತಿರುವುದು, ವಾಹನ ಸವಾರರಿಗೆ ತೊಂದರೆ ಆಗುತ್ತಿರುವ ವಿಷಯಗಳು ಗಮನಕ್ಕೆ ಬಂದಿಲ್ಲ. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುತ್ತೇನೆ. ಚೈತ್ರಾ, ಸೂಲಿಬೆಲೆ ಗ್ರಾಪಂ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net