ರಸ್ತೆ ಬದಿ ಕುಸಿತ ಸ್ಥಳ ಶಾಸಕಿ ಪರಿಶೀಲನೆ : ಕೊಲ್ಲಮೊಗ್ರುವಿಗೆ ಸರ್ವಋತು ಸೇತುವೆ ಭರವಸೆ

2-male hani
Published on

ಸುಬ್ರಹ್ಮಣ್ಯ: ತಾಲೂಕಿನ ಕೊಲ್ಲಮೊಗ್ರು ಗ್ರಾಪಂ ವ್ಯಾಪ್ತಿಯ ಕೊಲ್ಲಮೊಗ್ರು-ಕಲ್ಮಕಾರು ಸಂಪರ್ಕ ರಸ್ತೆಯ ಗಡಿಕಲ್ಲು ಎಂಬಲ್ಲಿ ಮಳೆಗೆ ರಸ್ತೆ ಬದಿ ಕುಸಿದಿದ್ದು, ಘಟನಾ ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದರು.

ಗಡಿಕಲ್ಲು ಎಂಬಲ್ಲಿ ರಸ್ತೆ ಬದಿ ಕೆಳ ಭಾಗದ ಹೊಳೆಯ ಭಾಗದಲ್ಲಿ ಮಣ್ಣು ಕುಸಿದು ರಸ್ತೆ ಅಪಾಯದಲ್ಲಿದ್ದು, ಭಾರಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸಮಸ್ಯೆ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದರು. ರಸ್ತೆ ಬದಿ ಕುಸಿತ ಉಂಟಾಗಿರುವ ಪರಿಹಾರವಾಗಿ ಕೆಳಭಾಗದಿಂದ ತಡೆಗೋಡೆ ನಿರ್ಮಾಣ ಬಗ್ಗೆ ಇಂಜಿನಿಯರ್‌ಗಳು ಪ್ರಸ್ತಾವನೆ ಸಲ್ಲಿಸಲಿದ್ದಾರೆ. ಮಳೆ ಕಡಿಮೆಯಾದ ಕೂಡಲೇ ತುರ್ತು ಪರಿಹಾರ ಕ್ರಮವಾಗಿ ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ. ಬಳಿಕ ಸರ್ಕಾರದ ಅನುದಾನ ತರಿಸಿಕೊಂಡು ತಡೆಗೋಡೆ ಕಾಮಗಾರಿ ನಡೆಸುವ ಬಗ್ಗೆ ಶಾಸಕರು ಭರವಸೆ ನೀಡಿದ್ದಾರೆ.

ಬಳಿಕ ಶಾಸಕರು ಕೊಲ್ಲಮೊಗ್ರು ಪೇಟೆಯಲ್ಲಿನ ಮುಳುಗು ಸೇತುವೆ ವೀಕ್ಷಣೆ ನಡೆಸಿದರು. ಸ್ಥಳೀಯರು ಸೇತುವೆ ಮುಳುಗಡೆ ಆಗುತ್ತಿರುವುದರಿಂದ ಸಮಸ್ಯೆ ಆಗುತ್ತಿರುವ ಬಗ್ಗೆ ಶಾಸಕರ ಗಮನಕ್ಕೆ ತಂದರು. ಶಾಸಕರು ಸರ್ವಋತು ಸೇತುವೆ ನಿರ್ಮಾಣದ ಭರವಸೆ ನೀಡಿದರು. ಪನ್ನೆ ಎಂಬಲ್ಲಿ ಕಾಲು ಸಂಕ ಬೇಡಿಕೆಯಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ಥಳೀಯರ ಅಹವಾಲು ಆಲಿಸಿದರು.

ಕೊಲ್ಲಮೊಗ್ರು ಗ್ರಾಪಂ ಉಪಾಧ್ಯಕ್ಷ ಯಶ್ವತ್ ಯಳದಾಳು, ಸದಸ್ಯ ಮಾಧವ ಚಾಂತಾಳ, ಪ್ರಮುಖರಾದ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಎಸ್.ಎನ್.ಮನ್ಮಥ, ಪ್ರಸಾದ್ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net