

ಉಡುಪಿ: ಕಾಪು ತಾಲೂಕಿನ ಮಲ್ಲಾರ್, ಚಂದ್ರನಗರ, ಕಳತ್ತೂರು ವ್ಯಾಪ್ತಿಯಲ್ಲಿ ರಸ್ತೆ ಬದಿ ದನಗಳನ್ನು ಮೇಯಲು ಕಟ್ಟುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ.
ಕಾಪು-ಶಿರ್ವ ಸಂಪರ್ಕ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ಮಜೂರು ಕಳೆದ ನಂತರ ರಸ್ತೆ ಬದಿ ಆಡು, ದನಗಳನ್ನು ಮೇಯಲು ಕಟ್ಟುತ್ತಿದ್ದಾರೆ. ಈ ವರ್ಷ ಮೇ ತಿಂಗಳಲ್ಲಿ ಬೇಸಿಗೆ ಮಳೆ ಶುರುವಾಗಿದ್ದರಿಂದ ರಸ್ತೆ ಬದಿ ಹುಲ್ಲು ಹುಲುಸಾಗಿ ಬೆಳೆದಿದೆ. ಇದೇ ಕಾರಣಕ್ಕೆ ಕೆಲವರು ಪೂರ್ವಾಪರ ಯೋಚಿಸದೆ ದನಗಳನ್ನು ತಂದು ಕಟ್ಟುತ್ತಿದ್ದಾರೆ. ಜತೆಗೆ ಹಗ್ಗವನ್ನು ಇಳಿಬಿಡುವುದರಿಂದ ದನ-ಕರುಗಳು ರಸ್ತೆಯಲ್ಲಿ ಆಚೆ ಈಚೆ ಹಠಾತ್ತಾಗಿ ದಾಟುತ್ತಿವೆ. ಇದರಿಂದ ಬೈಕ್ ಚಕ್ರಕ್ಕೆ ಹಗ್ಗ ಸಿಕ್ಕಿ ಸ್ಕಿಡ್ ಆಗಿ ಬಿದ್ದಿರುವ ಉದಾಹರಣೆಗಳಿವೆ. ಇತ್ತೀಚೆಗೆ ಚಂದ್ರನಗರದಲ್ಲಿ ರಸ್ತೆಗೆ ಬಂದ ಗಂಡು ಕರುವಿಗೆ ಬೈಕ್ ಡಿಕ್ಕಿ ಹೊಡೆದು ಕಳತ್ತೂರಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.
ಬೀದಿನಾಯಿ ಕಾಟ: ದನ-ಕರುಗಳ ಜತೆಗೆ ವಾಹನ ಸವಾರರಿಗೆ ಈ ಮಾರ್ಗದಲ್ಲಿ ಬೀದಿ ನಾಯಿ ಕಾಟವೂ ಜೋರಾಗಿದೆ. ಪಂಜಿತ್ತೂರು ಕಟ್ಟ ಎಂಬಲ್ಲಿ ನದಿ ಬದಿಯಲ್ಲಿ ಅನಾಗರಿಕರು ತ್ಯಾಜ್ಯ ರಾಶಿ ತಂದು ಸುರಿಯುತ್ತಿದ್ದು, ಇದನ್ನು ತಿನ್ನಲು ಬರುವ ಬೀದಿ ನಾಯಿಗಳು ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ನೀಡುತ್ತಿವೆ. ರಸ್ತೆ ತಿರುವಿನಲ್ಲಿ ಅಕಸ್ಮಾತ್ ಎದುರಾಗುವ ಬೀದಿನಾಯಿ ಹಿಂಡುಗಳಿಂದ ಪಾರಾಗುವುದೇ ಚಾಲಕರಿಗೆ ಸವಾಲಾಗಿದೆ.
ಮಳೆಗಾಲದಲ್ಲಿ ಗದ್ದೆಯಲ್ಲಿ ನೀರು ತುಂಬಿರುವುದರಿಂದ ದನ ಸಾಕುವವರು ರಸ್ತೆ ಬದಿ ಮೇಯಲು ಬಿಡುತ್ತಿದ್ದಾರೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದರೆ ಸೂಕ್ತ ಕ್ರಮ ಕೈಗೊಳ್ಳಲು ಬೀಟ್ ಪೊಲೀಸರಿಗೆ ಸೂಚನೆ ನೀಡಲಾಗುವುದು.
ಪ್ರಕಾಶ್, ವೃತ್ತ ನಿರೀಕ್ಷಕರು, ಕಾಪು
ರಸ್ತೆ ಬದಿ ದನಗಳನ್ನು ಮೇಯಲು ಬಿಡುವುದರಿಂದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಅನೇಕ ಮಂದಿ ದೂರು ನೀಡಿದ್ದಾರೆ. ಸಂಬಂಧಪಟ್ಟವರಿಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಯಥಾಸ್ಥಿತಿ ಮುಂದುವರಿದರೆ ಗ್ರಾಪಂ ಮೂಲಕ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಸಂದೀಪ್ ಗ್ರಾಪಂ ಸದಸ್ಯ, ಮಜೂರು ಗ್ರಾಪಂ