

ಡಿ.ಪಿ.ಮಹೇಶ್ ಯಳಂದೂರು: ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಜಿಟಿಜಿಟಿ ಮಳೆ ಪ್ರಾರಂಭವಾಗಿದ್ದು, ಗ್ರಾಮೀಣ ಭಾಗದ ರಸ್ತೆಗಳ ಕೆಸರು ಗದ್ದೆಗಳಂತಾಗಿವೆ. ವಾಹನ ಸಂಚರಿಸಲು ಹಾಗೂ ಸಾರ್ವಜನಿಕರು ಓಡಾಡಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಪ್ರಮುಖ ಬಡಾವಣೆಗಳು ನಿರ್ಮಾಣಗೊಂಡು ಹಲವು ವರ್ಷಗಳೇ ಕಳೆದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಮಣ್ಣಿನ ರಸ್ತೆಯಲ್ಲೇ ಓಡಾಡಬೇಕಾದ ಅನಿವಾರ್ಯತೆ ಇದೆ. ಸಿಸಿ ರಸ್ತೆ, ಡಾಂಬರ್ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ತಾಲೂಕಿನ ದುಗ್ಗಹಟ್ಟಿ, ಹೊನ್ನೂರು, ಬೀಚಹಳ್ಳಿ, ಕೆಸ್ತೂರು, ಕೆ. ಹೊಸೂರು, ಬಸವಾಪುರ, ಯರಿಯೂರು, ಮದ್ದೂರು, ಅಗರ, ಮಾಂಬಳ್ಳಿ, ವೈ.ಕೆ.ಮೋಳೆ, ಕಂದಹಳ್ಳಿ, ಉಪ್ಪಿನಮೋಳೆ ಸೇರಿದಂತೆ ಬಹುತೇಕ ಗ್ರಾಮಗಲ್ಲಿ ರಸ್ತೆ ದುರಸ್ತಿಯಾಗಿಲ್ಲ. ಮಣ್ಣಿನ ರಸ್ತೆಯಲ್ಲೇ ಓಡಾಡಬೇಕಿದೆ. ಮಳೆ ಸುರಿದಾಗ ವಾಹನ ಸವಾರರು ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ. ಇದರಿಂದ ನಿತ್ಯ ನರಕಯಾತನೆ ಅನುಭವಿಸುವ ಸ್ಥಿತಿ ಇಲ್ಲಿನ ನಾಗರಿಕರದ್ದು. ಮಳೆಗಾಲದಲ್ಲಿ ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ.
ತಾಲೂಕಿನ ಯಾವುದೇ ಭಾಗಕ್ಕೆ ಹೋದರೂ ಹದಗೆಟ್ಟ ರಸ್ತೆಗಳಲ್ಲೇ ಸಾರ್ವಜನಿಕರು ಸಂಚರಿಸಬೇಕು. ಮಳೆ ಸುರಿದಾಗ ರಸ್ತೆಯಲ್ಲಿ ಕೆರೆಯಂತೆ ನೀರು ನಿಲ್ಲುತ್ತದೆ. ಇದರಿಂದ ಗುಂಡಿಗಳು ಎಲ್ಲಿವೆ ಎಂದು ಗೊತ್ತಾಗದೆ ಪ್ರಾಣ ಭಯದಲ್ಲಿ ವಾಹನ ಸಂಚರಿಸಬೇಕಾದ ಅನಿವಾರ್ಯತೆ ಇದೆ. ರಸ್ತೆ ಬದಿಗಳಲ್ಲಿ ಚರಂಡಿ ನಿರ್ಮಿಸದ ಕಾರಣ ತ್ಯಾಜ್ಯ, ಕೊಳಚೆ ನೀರೆಲ್ಲ ರಸ್ತೆಯಲ್ಲೇ ಹರಿಯುತ್ತದೆ. ಜೋರು ಮಳೆಗೆ ರಸ್ತೆ ಕೊರಕಲು ಉಂಟಾಗಿದೆ.
ನರೇಗಾ ಯೋಜನೆಯಲ್ಲೂ ಕಾಮಗಾರಿ ಮಾಡುತ್ತಿಲ್ಲ.
ನರೇಗಾ ಯೋಜನೆಯಲ್ಲಿ ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣ ಮಾಡಲಾಗುತ್ತದೆ. ಆದರೆ, ಇಲ್ಲಿನ ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಇದನ್ನು ಸದುಪಯೋಗ ಮಾಡಿಕೊಳ್ಳುತ್ತಿಲ್ಲ. ಕೋಟ್ಯಂತರ ರೂ. ಅಂದಾಜು ಪಟ್ಟಿ ತಯಾರಿಸಿ, ಕ್ರಿಯಾ ಯೋಜನೆ ಮಾಡಿ ಕೆಲಸ ಮಾಡಲು ಅವಕಾಶವಿದೆ. ಈ ಹಣದಿಂದ ಪ್ರತಿ ಬಡಾವಣೆಯ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಬಹುದು ಆದರೆ, ಸಿಸಿ ಚರಂಡಿ ಹಾಗೂ ಸಿ.ಸಿ.ರಸ್ತೆ ಸೇರಿದಂತೆ ಶಾಶ್ವತವಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ. ಇದರಿಂದ ಬಡಾವಣೆಗಳ ದುಸ್ಥಿತಿಗೆ ಕಾರಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳು ಹೆಚ್ಚಿನ ಗಮನಹರಿಸಬೇಕಾಗಿದೆ ಎಂಬುದು ಹೊನ್ನೂರು ಗ್ರಾಮದ ಶಿವರಾಜು ಹಾಗೂ ಗ್ರಾಮಸ್ಥರ ದೂರಾಗಿದೆ.
ನಮ್ಮ ಕೆಸ್ತೂರು ಗ್ರಾಮದಲ್ಲಿ ಮಣ್ಣಿನ ರಸ್ತೆಗಳಿವೆ. ಮಳೆಗಾಲದಲ್ಲಿ ಇವು ಕೆಸರುಮಯವಾಗುತ್ತವೆ. ಇಲ್ಲಿ ವಾಹನಗಳು ಚಲಿಸುವುದು ದುಸ್ತರವಾಗಿದೆ. ಪಾದಚಾರಿಗಳು ಓಡಾಡಲು ಸಾಧ್ಯವಾಗುತ್ತಿಲ್ಲ. ಕೆಸರಿನಲ್ಲಿ ಓಡಾಡುವ ವೇಳೆ ಹಲವರು ಬಿದ್ದು ಗಾಯಗೊಂಡಿದ್ದಾರೆ. ರಸ್ತೆ ಮಾಡಿಕೊಡಿ ಎಂಬ ಕೂಗಿಗೆ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಸಂಬಂಧಪಟ್ಟ ಪಿಡಿಒಗಳು ಈ ಬಗ್ಗೆ ಆಸಕ್ತಿವಹಿಸಬೇಕು.
ರಂಗಸ್ವಾಮಿ ಕೆಸ್ತೂರು ಗ್ರಾಮದ ನಿವಾಸಿ
ನರೇಗಾ ಯೋಜನೆಯಡಿ ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ಅವಕಾಶವಿದೆ. ಈ ಬಗ್ಗೆ ಯಾವ ಗ್ರಾಮಗಳಲ್ಲಿ ರಸ್ತೆ ನಿರ್ಮಿಸಬೇಕು ಎಂಬುದರ ಬಗ್ಗೆ ಸಂಬಂಧಪಟ್ಟ ಜೆಇ ಜತೆ ಚರ್ಚಿಸಿ ರಸ್ತೆ ನಿರ್ಮಿಸಲು ಕ್ರಮ ವಹಿಸಲಾಗುವುದು.
ಸಂತೋಷ್‌ಕುಮಾರ್ ಎಇಇ, ಜಿಲ್ಲಾ ಪಂಚಾಯಿತಿ