ಕೆಸರು ಗದ್ದೆಯಂತಾದ ರಸ್ತೆಗಳು

ಕೆಸರು ಗದ್ದೆಯಂತಾದ ರಸ್ತೆಗಳು
Published on

ಸತೀಶ್ ಚಿಕ್ಕಕಣಗಾಲು ಆಲೂರು

ನಿರಂತರ ಸುರಿಯುತ್ತಿರುವ ಮಳೆಯಿಂದ ಆಲೂರು ಪಟ್ಟಣದ ಅನೇಕ ಬಡಾವಣೆಗಳ ರಸ್ತೆಗಳು ಕೆಸರು ಗದ್ದೆಯಂತಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

ಆಲೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿದ 3ನೇ ವಾರ್ಡಿನ ಹೌಸಿಂಗ್ ಬೋರ್ಡ್‌ಗೆ ಹೊಂದಿಕೊಂಡಿರುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಜನರು ತಿರುಗಾಡಲು ಪ್ರಯಾಸಪಡುವಂತಾಗಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳಿಗೆ, ಆಡಳಿತ ವ್ಯವಸ್ಥೆಗೆ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.

ಮಳೆಗಾಲ ಆರಂಭಗೊಂಡರೆ ಆಲೂರು ಪಟ್ಟಣ ಪಂಚಾಯಿತಿಯ ಹಲವಾರು ವಾರ್ಡ್‌ಗಳ ರಸ್ತೆಗಳ ಸ್ಥಿತಿ ಹೇಳ ತೀರದಂತಾಗುತ್ತದೆ. ಪ್ರತಿವರ್ಷ ಇದರ ಅರಿವಿದ್ದರೂ ಸ್ಥಳೀಯ ಆಡಳಿತ ವ್ಯವಸ್ಥೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದಿಲ್ಲ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ.1ರ ಮುರಸು, ವಾರ್ಡ್ ನಂಬರ್ 2 ಮರಸು ಕೊಪ್ಪಲು, ವಾರ್ಡ್ ನಂಬರ್ 6ರ ಹಳೆ ಆಲೂರು ಕಾಲನಿ, ವಾರ್ಡ್ ನಂಬರ್ 4 ಬೇಡುಚವಳ್ಳಿ ಕಾಲನಿ ರಸ್ತೆ ಸೇರಿದಂತೆ ಇತರ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ.

ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ವೃದ್ಧರು ಹದಗೆಟ್ಟಿರುವ ರಸ್ತೆಗಳಲ್ಲಿ ಸಂಚರಿಸಲು ತೀವ್ರ ತೊಂದರೆ ಅನುಭವಿಸುತ್ತಾರೆ. ದ್ವಿಚಕ್ರ ವಾಹನ ಸವಾರರು ಬಿದ್ದು, ಗಾಯಗೊಳ್ಳುವ ಸನ್ನಿವೇಶಗಳು ಮಾಮೂಲಿಯಾಗಿದೆ.

ಕಸ ವಿಲೇವಾರಿಮಾಡಲಿ: ಹದಗೆಟ್ಟಿರುವ ರಸ್ತೆಗಳ ಸ್ಥಿತಿ ಒಂದೆಡೆಯಾದರೆ, ಇನ್ನು ಇಲ್ಲಿನ ಅನೇಕ ಜಾಗಗಳಲ್ಲಿ ಸಂಗ್ರಹಗೊಂಡಿರುವ ತ್ಯಾಜ್ಯ ವಿಲೇವಾರಿಗೂ ನಿರ್ಲಕ್ಷೃ ವಹಿಸಲಾಗಿದೆ. ಐದನೇ ವಾರ್ಡ್ ರಾಜಪ್ಪ ಬಡಾವಣೆ ಹಾಗೂ ಹಳೇ ಕೋರ್ಟ್ ಸರ್ಕಲ್ ಬಳಿ, ಹುಣಸುವಳ್ಳಿ ಮುಖ್ಯ ರಸ್ತೆ ಬದಿಯಲ್ಲಿ ಅಪಾರ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹಗೊಂಡು ಗಬ್ಬೆದ್ದು ನಾರುತ್ತಿದೆ. ಅಲ್ಲದೆ ಎಲ್ಲೆಂದರಲ್ಲಿ ಬಿದ್ದಿರುವ ಗಲೀಜು ಸ್ಥಳೀಯ ಆಡಳಿತದ ಕಾರ್ಯ ವೈಖರಿಯನ್ನು ಅಣುಕಿಸುತ್ತಿದೆ. ಮಳೆಗಾಲವಾಗಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net