

ಪಿರಿಯಾಪಟ್ಟಣ: ಪಟ್ಟಣದ ಪುರಸಭಾ ವ್ಯಾಪ್ತಿಯ ಅಬ್ಬೂರು ಮತ್ತು ನೌಕರರ ಬಡಾವಣೆ ವ್ಯಾಪ್ತಿಯ ರಸ್ತೆಗಳು ಸೂಕ್ತ ನಿರ್ವಹಣೆ ಇಲ್ಲದ ಕಾರಣ ಅಲ್ಲಿನ ನಿವಾಸಿಗಳು ಹೈರಾಣಾಗಿದ್ದಾರೆ.
ಈ ಹಿಂದೆ ಪಂಚವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ್ದ ಅಬ್ಬೂರು ಮತ್ತು ನೌಕರರ ಬಡಾವಣೆಯನ್ನು 10 ವರ್ಷಗಳ ಹಿಂದೆ ಪಿರಿಯಾಪಟ್ಟಣ ಪುರಸಭೆ ವ್ಯಾಪ್ತಿಗೆ ಸೇರ್ಪಡೆಗೊಳಿಸಿ ವಾರ್ಡ್ ನಂ. 22 ಎಂದು ನಾಮಕರಣ ಮಾಡಲಾಗಿದೆ.
ಅಬ್ಬೂರು ಹಳೆಯ ಗ್ರಾಮವಾಗಿದ್ದು, ಅದಕ್ಕೆ ಹೊಂದಿಕೊಂಡಂತೆ ಇರುವ ನೌಕರರ ಬಡಾವಣೆಯನ್ನು ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ 20 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಯಿತು. ವಿಶಾಲವಾದ ರಸ್ತೆ ಮತ್ತು ಚರಂಡಿ ಹೊಂದಿದ್ದರೂ ಸೂಕ್ತ ನಿರ್ವಹಣೆ ಇಲ್ಲದಾಗಿದೆ. ಪರಿಣಾಮ ನಿವಾಸಿಗಳು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ. 20 ವರ್ಷಗಳ ಹಿಂದೆ ಮೆಟ್ಲಿಂಗ್ ಮಾಡಿದ ರಸ್ತೆಗೆ ಇದುವರೆಗೂ ಡಾಂಬರೀಕರಣವಾಗಿಲ್ಲ. ಈ ನಡುವೆ ಒಳಚರಂಡಿ ವ್ಯವಸ್ಥೆಗಾಗಿ ರಸ್ತೆಗಳನ್ನು ಅಗೆದು ಪೈಪ್‌ಗಳನ್ನು ಹಾಕಿ ಚೇಂಬರ್ ನಿರ್ಮಿಸಿ ರಸ್ತೆಗಳನ್ನು ಮುಚ್ಚಲಾಗಿದೆ. ಆದರೆ ಡಾಂಬರು ಹಾಕದ ಕಾರಣ ಈ ಮಾರ್ಗದಲ್ಲಿ ಸಂಚರಿಸುವವರಿಗೆ ನಿತ್ಯ ಧೂಳಿನ ಅಭಿಷೇಕವಾಗಲಿದೆ.
ಬಡಾವಣೆಯಲ್ಲಿ ಶೇ.50ಕ್ಕೂ ಹೆಚ್ಚು ನಿವೇಶನಗಳಲ್ಲಿ ಮನೆಗಳು ನಿರ್ಮಾಣಗೊಂಡಿದ್ದು, ಇಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಒಳಚರಂಡಿ ವ್ಯವಸ್ಥೆ ಆರಂಭಗೊಂಡಿದ್ದರೂ ಮನೆಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಪುರಸಭೆ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ. ರಸ್ತೆಯ ಮೆಟ್ಲಿಂಗ್ ಸಂದರ್ಭದಲ್ಲಿ ಹಾಕಿದ್ದ ಜಲ್ಲಿಗಳು ಕಿತ್ತು ಬಂದಿದ್ದು ವಾಹನಗಳ ಓಡಾಟದಿಂದ ಉಂಟಾಗುವ ಧೂಳು ಮನೆಗಳನ್ನು ಆವರಿಸಿಕೊಳ್ಳುತ್ತಿದೆ. ಇದರಿಂದ ರೋಗದ ಭೀತಿ ಎದುರಾಗಿದೆ.
ಪಟ್ಟಣದ ಪೂರ್ವ ದಿಕ್ಕಿನಲ್ಲಿ ಇರುವ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಈ ಬಡಾವಣೆಯ ರಸ್ತೆಯನ್ನೇ ಅವಲಂಬಿಸಿದ್ದಾರೆ. ಈ ನಡುವೆ ಪಕ್ಕದ ಎಸ್‌ಎಲ್ವಿ ಬಡಾವಣೆ ಮೂಲಕ ತಮ್ಮ ಕಾಲೇಜು ರಸ್ತೆಗೆ ತಲುಪಬಹುದಾಗಿದೆಯಾದರೂ ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣ ಕೆಸರುಮಯವಾಗುವುದರಿಂದ ವಿದ್ಯಾರ್ಥಿಗಳು ಮತ್ತು ಪಾಲಕರ ಗೋಳು ಹೇಳತೀರದಾಗಿದೆ.
ರಸ್ತೆಯಲ್ಲಿ ಸಂಗ್ರಹವಾಗುವ ಕಸಕಡ್ಡಿಗಳು ಚರಂಡಿಗೆ ಬಂದು ಬೀಳುವುದರಿಂದ ಅಲ್ಲಲ್ಲಿ ಚರಂಡಿ ಕಟ್ಟಿಕೊಂಡು ಕೊಳಚೆ ನೀರು ಮಡುಗಟ್ಟುತ್ತಿದೆ. ಪರಿಣಾಮ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಖಾಲಿ ನಿವೇಶನಗಳಲ್ಲಿ ಗಿಡ ಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿದ್ದು, ಹಾವು ಮತ್ತು ಇತರ ವಿಷ ಜಂತುಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ಅಬ್ಬೂರು ಬಡಾವಣೆಯಲ್ಲಿ ಕೆಲವು ರಸ್ತೆಗಳು ಕಿರಿದಾಗಿದ್ದು ಮೆಟ್ಲಿಂಗ್ ಮತ್ತು ಚರಂಡಿ ವ್ಯವಸ್ಥೆಯೂ ಆಗಿಲ್ಲ. ಇದರಿಂದ ಮತ್ತಷ್ಟು ತೊಂದರೆ ಎದುರಾಗಿದೆ.
ಈ ಮಾರ್ಗದಲ್ಲಿ ದನ ಕರುಗಳನ್ನು ರಸ್ತೆಗಳಲ್ಲಿಯೇ ಕಟ್ಟಿ ಹಾಕುವುದರಿಂದ ಸಾರ್ವಜನಿಕರ ಓಡಾಟಕ್ಕೂ ತೊಂದರೆಯಾಗುತ್ತಿದೆ. ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ರಸ್ತೆ ಮತ್ತು ಹುಣಸೇಕುಪ್ಪೆ ರಸ್ತೆಗೆ ಪ್ರಮುಖ ಸಂಪರ್ಕ ರಸ್ತೆಯಾಗಿರುವ ನೌಕರರ ಬಡಾವಣೆ ಹಾಗೂ ಅಬ್ಬೂರು ಬಡಾವಣೆಯ ಮುಖ್ಯ ರಸ್ತೆಗಳು ಸಂಪೂರ್ಣವಾಗಿ ಡಾಂಬರೀಕರಣವಾದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ವಾರ್ಡ್‌ಗೆ ಸಂಬಂಧಿಸಿದ ಪುರಸಭಾ ಸದಸ್ಯರು ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂಬುದು ಬಡಾವಣೆ ನಿವಾಸಿಗಳ ಒತ್ತಾಯ.
ಹದಿನೈದು ವರ್ಷಗಳಿಂದಲೂ ಈ ರಸ್ತೆಗಳು ಡಾಂಬರೀಕರಣ ಕಂಡಿಲ್ಲ. ಪರಿಣಾಮ ಸಂಪೂರ್ಣ ಧೂಳುಮಯ ರಸ್ತೆಗಳಾಗಿ ಮಾರ್ಪಟ್ಟಿವೆ. ರಸ್ತೆಯಲ್ಲಿ ವಾಹನಗಳು ಸಂಚರಿಸಿದಾಗ ಧೂಳು ಮೇಲೇಳಲಿದ್ದು, ಅದು ಮನೆಯೊಳಗೆ ಬರಲಿದೆ. ಇದು ಮಹಿಳೆಯರು, ಮಕ್ಕಳು ಮತ್ತು ವೃದ್ಧರಲ್ಲಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಈ ವಾರ್ಡನ್ನು ಪ್ರತಿನಿಧಿಸುವ ಪುರಸಭೆ ಸದಸ್ಯರು ನಮ್ಮ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನಹರಿಸಬೇಕಿದೆ.
ಪಾರ್ವತಮ್ಮ ನೌಕರರ ಬಡಾವಣೆ ನಿವಾಸಿ
ಸುಮಾರು 20 ವರ್ಷಗಳ ಹಿಂದೆ ಈ ರಸ್ತೆಗಳಿಗೆ ಮೆಟ್ಲಿಂಗ್ ಮಾಡಿರಬಹುದು. ಆ ಬಳಿಕ ಈವರೆಗೂ ಡಾಂಬರೀಕರಣವಾಗಿಲ್ಲ. ಅಲ್ಲದೆ ರಸ್ತೆಗೆ ಹಾಕಿದ್ದ ಜಲ್ಲಿಗಳು ಕಿತ್ತು ಬಂದಿವೆ. ಒಳಚರಂಡಿ ವ್ಯವಸ್ಥೆಗೆ ನಿರ್ಮಿಸಿರುವ ಚೇಂಬರ್‌ಗಳು ರಸ್ತೆಯಿಂದ ಅರ್ಧ ಅಡಿ ಮೇಲಕ್ಕಿದ್ದು ಈ ರಸ್ತೆಯಲ್ಲಿ ವಾಹನಗಳನ್ನು ಚಾಲನೆ ಮಾಡುವುದೇ ಒಂದು ಸಾಹಸದ ಕೆಲಸ. ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಈ ರಸ್ತೆಯಲ್ಲೇ ಹೋಗಬೇಕಿರುವುದರಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ಎಸ್.ರಮೇಶ್ ಎಸ್‌ಎಲ್ವಿ ಬಡಾವಣೆ ನಿವಾಸಿ
ಸಚಿವ ಕೆ.ವೆಂಕಟೇಶ್ ಅವರ ವಿಶೇಷ ಅನುದಾನದಲ್ಲಿ ಪುರಸಭೆಯ ಅಭಿವೃದ್ಧಿ ಕಾಮಗಾರಿಗಳಿಗೆ 12 ಕೋಟಿ ರೂ. ಮಂಜೂರಾಗಿದ್ದು ಈ ಹಣವನ್ನು ಪುರಸಭಾ ವ್ಯಾಪ್ತಿಯಲ್ಲಿನ ವಿವಿಧ ವಾರ್ಡ್‌ಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು. ಅಬ್ಬೂರು ಮತ್ತು ನೌಕರರ ಬಡಾವಣೆಯ ಪ್ರಮುಖ ರಸ್ತೆಗಳ ಡಾಂಬರೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸುವ ಕುರಿತು ಕೂಡಲೇ ಗಮನ ಹರಿಸಲಾಗುವುದು.
ಕೆ.ಯು.ಮುತ್ತಪ್ಪ ಪುರಸಭೆ ಮುಖ್ಯಾಧಿಕಾರಿ ಪಿರಿಯಾಪಟ್ಟಣ