

ತುಮಕೂರು: 5.15 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಿರುವ ಕದುರನಹಳ್ಳಿ ಮತ್ತು ಕಾಗ್ಗೆರೆ ರಸ್ತೆಗೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಮಂಗಳವಾರ ಚಾಲನೆ ನೀಡಿದರು.
ಕದುರನಹಳ್ಳಿಯಲ್ಲಿ ಮೈದಾಳ ಕ್ರಾಸ್‌ನಿಂದ ಲಕ್ಷ್ಮೀತಾಂಡ್ಯದವರೆಗೆ ಹೊಸಹಳ್ಳಿ, ಗೊಲ್ಲರಹಟ್ಟಿ ಮಾರ್ಗವಾಗಿ ಸುಮಾರು 2.25 ಕೋಟಿ ರೂ.ವೆಚ್ಚದಲ್ಲಿ 3 ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ಪಡಿಸಲಾಗಿದ್ದು, ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದರು.
ದೇವರಾಯನ ದುರ್ಗಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಸುವ ಕನಸಿದೆ, ಇದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದರು. ಗ್ರಾಮಗಳಿಗೆ ಹೊರಗಿನವರು ಬಂದರೆ ಕೂಡಲೇ ತಾಲೂಕು ಆಡಳಿತದ ಗಮನಕ್ಕೆ ತನ್ನಿ ಸಂಬಂಧಿಕರೇ ಇರಲಿ ಸ್ನೇಹಿತರೇ ಇರಲಿ, ಅವರಿಗೆ ಕರೊನಾ ಟೆಸ್ಟ್ ಮಾಡಿಸಿದ ಮೇಲೆ ನೆಗೆಟಿವ್ ಇದ್ದರೆ ಮಾತ್ರ ಊರಿಗೆ ಸೇರಿಸಿಕೊಳ್ಳಿ ಎಂದು ಗೌರಿಶಂಕರ್ ಸಲಹೆ ನೀಡಿದರು.
ಕಾಗ್ಗೆರೆಯಿಂದ ಟಿ.ಗೊಲ್ಲಹಳ್ಳಿ (ಅಸಲೀಪುರ-ಸಿಂಗೋಪುರ) ರಸ್ತೆ ಮತ್ತು ಮೈದಾಳ ಕ್ರಾಸ್‌ನಿಂದ ಲಕ್ಷ್ಮೀತಾಂಡ್ಯದವರೆಗೆ ಹೊಸಹಳ್ಳಿ, ಗೊಲ್ಲರಹಟ್ಟಿ ರಸ್ತೆ ಕಾಮಗಾರಿಗೂ ಚಾಲನೆ ನೀಡಿದರು. ಸ್ಥಳೀಯರಾದ ವೆಂಕಟೇಶ್, ವಿನಯ್, ಬೈರೇಗೌಡ, ಅಜಂ, ಕಲ್ಲು ಗೋವಿಂದಪ್ಪ, ಮಲ್ಲಣ್ಣ, ನಂದೀಶ್, ಕದುರನಹಳ್ಳಿ ನಾಗರಾಜು, ಪಣಗಾರಪ್ಪ, ಗಂಗಾಧರಪ್ಪ ಮತ್ತಿತರರು ಇದ್ದರು.