

ಶಿಗ್ಗಾಂವಿ: ಕಳೆದೊಂದು ತಿಂಗಳಿನಿಂದ ಸುರಿಯತ್ತಿರುವ ಜಡಿ ಮಳೆಯಿಂದಾಗಿ ತಾಲೂಕಿನ ಹಲವು ರಸ್ತೆಗಳು ಹದಗೆಟ್ಟು ಹೋಗಿದ್ದು, ಸಂಚರಿಸಲು ಬಾರದ ಸ್ಥಿತಿಗೆ ತಲುಪಿವೆ.
ವಿವಿಧ ಯೋಜನೆಗಳಡಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ರಸ್ತೆಗಳು ವರ್ಷದಲ್ಲಿಯೇ ಕಿತ್ತು ಹೋಗಿದ್ದು, ಕಳಪೆ ಕಾಮಗಾರಿಗೆ ಸಾಕ್ಷಿಯಾಗಿವೆ. ತಗ್ಗು, ದಿನ್ನೆಗಳಿಂದ ಕೂಡಿದ ರಸ್ತೆಗಳಲ್ಲಿ ಸಂಚರಿಸುವವರ ಸಂಕಷ್ಟ ಕೇಳುವವರಿಲ್ಲದಂತಾಗಿದೆ.
ಸಾರ್ವತ್ರಿಕ ಚುನಾವಣೆ ಪೂರ್ವದಲ್ಲಿ ತರಾತುರಿಯಲ್ಲಿ ಕಾಮಗಾರಿ ಮುಗಿಸಿ ಕೈತೊಳೆದುಕೊಂಡ ಗುತ್ತಿಗೆದಾರರು ಗುಣಮಟ್ಟದ ಸಾಮಗ್ರಿಗಳ ಬಳಕೆ ಮಾಡದ ಕಾರಣ ಕಿತ್ತು ಹೋಗಿವೆ. ಹದಗೆಟ್ಟ ರಸ್ತೆಗಳ ದುರಸ್ತಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.
ಕಾಮಗಾರಿ ಮುಗಿಸಿದ ನಂತರ ಐದು ವರ್ಷಗಳವರೆಗೆ ರಸ್ತೆಯ ಮರು ದುರಸ್ತಿ ಗುತ್ತಿಗೆದಾರನದ್ದಾಗಿರುತ್ತದೆ. ಆದ, ಕಾಟಾಚಾರಕ್ಕಾಗಿ ರಸ್ತೆಯ ಮರು ದುರಸ್ತಿ ಮಾಡುತ್ತಿರುವ ಗುತ್ತಿಗೆದಾರರ ಕಾರ್ಯವೈಖರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಾಲೂಕಿನ ಬಂಕಾಪುರ-ಅಡೂರು ಮಾರ್ಗದಲ್ಲಿನ ಕುಂದೂರು ಗ್ರಾಮದ ಬಳಿ ದೊಡ್ಡ ದೊಡ್ಡ ಗುಂಡಿಗಳಿವೆ. ಜತೆಗೆ ಕೆಸರುಮಯವಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಹಿರೇಮಲ್ಲೂರು ಗ್ರಾಮದ ಬಳಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯಲ್ಲಿ ಹಳ್ಳದ ನೀರಿನ ಹರಿವಿನಿಂದ ರಸ್ತೆ ಬದಿ ಹಾಕಲಾದ ಮಣ್ಣು ಕೊಚ್ಚಿ ಹೋಗಿದ್ದು ವಾಹನ ಸವಾರರು ಸ್ವಲ್ಪ ಯಾಮಾರಿದರೆ ಅಪಘಾತ ಕಟ್ಟಿಟ್ಟ ಬುತ್ತಿಯಾಗಿದೆ.
ಎಲ್ಲೆಲ್ಲಿ ಹದಗೆಟ್ಟ ರಸ್ತೆಗಳು?
ಶೀಲವಂತಸೋಮಪುರ, ಮಡ್ಲಿ ಮಾರ್ಗ ಮೂಲಕ ಹೆದ್ದಾರಿ ಸಂಪರ್ಕಿಸುವ ರಸ್ತೆ. ತಡಸ ಗ್ರಾಮದಲ್ಲಿನ ಕಾಂಕ್ರೀಟ್ ರಸ್ತೆ. ಬನ್ನಿಕೊಪ್ಪದಿಂದ ಹಿರೇಮಲ್ಲೂರು ರಸ್ತೆ. ಶಾಡಂಬಿ, ಕುನ್ನೂರ ಗ್ರಾಮದ ರಸ್ತೆಗಳು ಹದಗೆಟ್ಟು ಸಂಚಾರ ದುಸ್ತರವಾಗಿದೆ.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿನ ರಸ್ತೆಗಳು ಮಳೆಯಿಂದ ಹದಗೆಟ್ಟು, ಗ್ರಾಮೀಣ ಜನರ ನಿತ್ಯದ ಕೆಲಸಗಳು ಹಾಗೂ ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗಿದೆ. ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ಸರ್ಕಾರ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರಸ್ತೆಗಳ ದುರಸ್ತಿಗೆ ಮುಂದಾಗಬೇಕು. ಶಿವಾನಂದ ಮ್ಯಾಗೇರಿ. ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಮಾಜಿ ಉಪಾಧ್ಯಕ್ಷ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಪ್ರಗತಿ ಪಥ ಯೋಜನೆಯಡಿ ತಾಲೂಕಿನಲ್ಲಿ 33 ಕಿಲೋ ಮೀಟರ್ ಗ್ರಾಮೀಣ ಪ್ರದೇಶಗಳ ರಸ್ತೆಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ರಾಜ್ಯ ಸರ್ಕಾರದಿಂದ 100 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು. ಮಳೆಗಾಲ ಮುಗಿದ ತಕ್ಷಣ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ಯಾಸೀರಖಾನ್ ಪಠಾಣ, ಶಾಸಕ