ಎಡೆಬಿಡದೆ ಸುರಿದ ಮಳೆಯಿಂದ ಗುಂಡಿ ಬಿದ್ದ ರಸ್ತೆಗಳು

04 HANUR 1 A
ಹನೂರಿನ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲಕ್ಕೆ ತೆರಳುವ ರಸ್ತೆಯ ಗುಂಡಿಯಲ್ಲಿ ನೀರು ನಿಂತು ಕೆರೆಯಂತಾಗಿರುವುದು.
Published on

ಹನೂರು: ಫೆಂಗಲ್ ಚಂಡಮಾರುತದ ಪರಿಣಾಮ ಕಳೆದ 2 ದಿನಗಳವರೆಗೆ ಎಡೆಬಿಡದೆ ಸುರಿದ ಮಳೆಯಿಂದಾಗಿ ಪಟ್ಟಣದ ರಸ್ತೆಯ ಗುಂಡಿಗಳಲ್ಲಿ ನೀರು ನಿಂತಿದ್ದು, ಜನರು ಸಂಚರಿಸಲು ತೊಂದರೆ ಪಡುವಂತಾಗಿದೆ.

ಪ.ಪಂ. ವ್ಯಾಪ್ತಿಯಲ್ಲಿ 13 ವಾರ್ಡ್‌ಗಳಿದ್ದು, ಪ್ರಸ್ತುತ ಸುಮಾರು 13 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಆದರೆ ಬಹುತೇಕ ಎಲ್ಲ ವಾರ್ಡ್‌ಗಳಲ್ಲೂ ರಸ್ತೆ ಸಮಸ್ಯೆ ಇದ್ದೇ ಇದೆ. ಕಳೆದ ವರ್ಷ ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ಪಪಂ ವ್ಯಾಪ್ತಿಯ ಕೆಲ ವಾರ್ಡ್‌ಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಈ ವೇಳೆ ಬೆರಳೆಣಿಕೆಯಷ್ಟು ಮಾತ್ರ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗಿತ್ತು. ಇನ್ನುಳಿದ ಗುಂಡಿ ಬಿದ್ದ ರಸ್ತೆಯನ್ನು ಹಾಗೆಯೇ ಬಿಡಲಾಗಿತ್ತು. ಹಾಗಾಗಿ ಅಗತ್ಯ ಮೂಲ ಸೌಕರ್ಯವಾದ ರಸ್ತೆ ನಿರ್ಮಿಸಿಕೊಡುವಲ್ಲಿ ಪಪಂ ಆಡಳಿತ ಮನಸ್ಸು ಮಾಡುತ್ತಿಲ್ಲ. ಇನ್ನು ಕಳೆದ ಹಲವು ವರ್ಷಗಳಿಂದ ಹದಗೆಟ್ಟಿರುವ ರಸ್ತೆಯನ್ನು ರಿಪೇರಿ ಪಡಿಸುವಲ್ಲಿ ಪಪಂ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಪರಿಣಾಮ ಮಳೆ ಬಂದ ವೇಳೆ ರಸ್ತೆಯ ಗುಂಡಿಗಳಲ್ಲಿ ಹಲವು ದಿನಗಳವರೆಗೆ ನೀರು ನಿಂತು ಚಿಕ್ಕ ಕೆರೆಯಂತಾಗುತ್ತದೆ. ಸೊಳ್ಳೆಗಳ ಅವಾಸ ಸ್ಥಾನವಾಗುತ್ತದೆ. ರೋಗ ರುಜಿನಗಳ ಭೀತಿ ಜನರನ್ನು ಕಾಡುತ್ತಲೇ ಇದೆ.

ಪರಿಸ್ಥಿತಿ ಹೀಗಿರುವಾಗ ಫೆಂಗಲ್ ಚಂಡಮಾರುತದ ಪರಿಣಾಮ ಇದೀಗ ಕಳೆದ 2 ದಿನಗಳವರೆಗೆ ನಿರಂತರವಾಗಿ ಸುರಿದ ಮಳೆಗೆ ಪಟ್ಟಣದಲ್ಲಿ ಮುಖ್ಯವಾಗಿ ತೀವ್ರ ಹದಗೆಟ್ಟಿರುವ ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ದೇಗುಲಕ್ಕೆ ತೆರಳುವ ರಸ್ತೆ, ಸಂತೆಪೇಟೆ ಬೀದಿ, ಸಂಚಾರಿ ನ್ಯಾಯಾಲಯದ ಸಮೀಪ, ಖಾಸಗಿ ಬಸ್ ನಿಲ್ದಾಣದ ಆಸುಪಾಸು, ಸರ್ಕಾರಿ ಆಸ್ಪತ್ರೆಯ ಸಮೀಪ, ಬಂಡಳ್ಳಿಗೆ ತೆರಳುವ ಮುಖ್ಯರಸ್ತೆ, ಅಂಬೇಡ್ಕರ್ ನಗರಕ್ಕೆ ತೆರಳುವ ಲೊಕ್ಕನಹಳ್ಳಿ ರಸ್ತೆಯ ಬಹುತೇಕ ಕಡೆಗಳಲ್ಲಿ, ವಿನಾಯಕನಗರ, ಆರ್.ಎಸ್.ದೊಡ್ಡಿಯ ಅಲ್ಲಲ್ಲಿ ಸೇರಿದಂತೆ ಇನ್ನಿತರ ಬಡಾವಣೆಯ ರಸ್ತೆಯ ಗುಂಡಿಗಳಲ್ಲಿ ನೀರು ನಿಂತಿದೆ. ಕೆಲವು ಕಡೆಗಳಲ್ಲಿ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಇದರಿಂದ ಪಾದಚಾರಿಗಳು ಸಂಚರಿಸಲು ತುಂಬ ತೊಂದರೆ ಅನುಭವಿಸುವಂತಾಗಿದೆ. ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಹರಸಾಹಸ ಪಡಬೇಕಿದೆ.

ಈ ಬಗ್ಗೆ ಪಪಂ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ತಿಳಿದಿದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಜತೆಗೆ ರಸ್ತೆ ನಿರ್ಮಿಸುವಂತೆ ಜನರು ಪಪಂಗೆ ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಈ ಬಗ್ಗೆ ಕಿಂಚಿತ್ತೂ ಗಮನಹರಿಸುತ್ತಿಲ್ಲ. ಇದರಿಂದ ಮಳೆ ಬಂದರೆ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ರಸ್ತೆ ಅಭಿವೃದ್ಧಿ ಪಡಿಸಬೇಕು. ಅಲ್ಲಿಯವರೆಗೆ ತಾತ್ಕಾಲಿಕವಾದರೂ ರಿಪೇರಿ ಪಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಪಟ್ಟಣದ ನಾಗರೀಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net