

ಪುರುಷೋತ್ತಮ ಪೆರ್ಲ ಕಾಸರಗೋಡು ನಗರಸಭಾ ವ್ಯಾಪ್ತಿಯ ರಸ್ತೆಗಳು ಅತ್ಯಂತ ಶೋಚನೀಯಾವಸ್ಥೆಯಲ್ಲಿದ್ದು, ದುರಸ್ತಿಗೆ ಮುಂದಾಗದ ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆಯ ಧೋರಣೆ ವಿರುದ್ಧ ಚಾಲಕರು ಹೋರಾಟಕ್ಕಿಳಿದಿದ್ದಾರೆ. ಅಲ್ಲಲ್ಲಿ ಹೊಂಡಗಳೆದ್ದು, ಆಟೋರಿಕ್ಷಾ, ದ್ವಿಚಕ್ರ ವಾಹನಗಳಿಗೆ ಸಂಚರಿಸಲಾಗದ ಸ್ಥಿತಿ ಎದುರಾಗಿದೆ. ಬಹುತೇಕ ಕಡೆ ರಸ್ತೆ ಮಧ್ಯೆ ಬಾಯ್ದೆರೆದುಕೊಂಡಿರುವ ಚರಂಡಿ, ಇನ್ನೊಂದೆಡೆ ಡಾಂಬರು ಕಿತ್ತು ಉಂಟಾಗಿರುವ ಹೊಂಡಗಳು ಚಾಲಕರ ಪಾಲಿಗೆ ಮರಣಗುಂಡಿಗಳಾಗಿ ಪರಿಣಮಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿ ಷಟ್ಪಥ ಯೋಜನೆಯನ್ವಯ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ನಗರಸಭಾ ವ್ಯಾಪ್ತಿಯ ಹೆದ್ದಾರಿಯಲ್ಲಿ ವಾಹನ ಸಂಚಾರವೂ ದುಸ್ತರವಾಗಿದೆ. ಹೊಸ ಬಸ್ ನಿಲ್ದಾಣ ಆಸುಪಾಸು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸಂಚಾರ ಮತ್ತಷ್ಟು ತ್ರಾಸದಾಯಕವಾಗಿದೆ. ಎಂ.ಜಿ ರಸ್ತೆ, ಕರಂದಕ್ಕಾಡ್, ಕೆಪಿಆರ್ ರಾವ್ ರಸ್ತೆ, ಮಧೂರು ರಸ್ತೆ, ಅಮೈ ರಸ್ತೆ ಸೇರಿದಂತೆ ನಗರಸಭಾ ವ್ಯಾಪ್ತಿಯ ಬಹುತೇಕ ಮಾರ್ಗಗಳು ಹೊಂಡಮಯವಾಗಿವೆ. ಮಳೆಗಾಲದಲ್ಲಿ ದುರಸ್ತಿ ಕಾರ್ಯಗಳಿಗೆ ಮಳೆ ಅಡ್ಡಿಯಾಗುವ ನೆಪವೊಡ್ಡಿದ್ದ ಅಧಿಕಾರಿಗಳು, ಮಳೆ ದೂರವಾಗಿ ತಿಂಗಳು ಸಮೀಪಿಸುತ್ತಿದ್ದರೂ, ದುರಸ್ತಿ ನಡೆಸದೆ ಪ್ರಯಾಣಿಕರು ಹಾಗೂ ಚಾಲಕರ ತಾಳ್ಮೆ ಪರೀಕ್ಷೆ ನಡೆಸುತ್ತಿದ್ದಾರೆ. ರಸ್ತೆ ಶಿಥಿಲಾವಸ್ಥೆಯಿಂದ ನಗರ ಪ್ರದೇಶದ ಆಟೋಚಾಲಕರು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಶಿಥಿಲ ರಸ್ತೆಗಳಿಂದಾಗಿ ಯಾವುದೇ ರಸ್ತೆಯಲ್ಲೂ ಬಾಡಿಗೆ ತೆರಳಲಾಗದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಬಾಡಿಗೆ ತೆರಳಿ ದರ ವಸೂಲಿ ಸಂದರ್ಭ ಪ್ರಯಾಣಿಕರಿಂದ ಬೈಗಳು ತಿನ್ನಬೇಕಾದ ಪರಿಸ್ಥಿತಿ ಎದುರಾಗುತ್ತಿದೆ ಎಂದು ಚಾಲಕರು ಅಳಲು ವ್ಯಕ್ತಪಡಿಸುತ್ತಾರೆ. ಹೆದ್ದಾರಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುವ ಕಾರಣ ಶಿಥಿಲಾವಸ್ಥೆ ಮುಂದುವರಿಯುತ್ತಿದ್ದರೆ, ನಗರಸಭಾ ಪ್ರದೇಶದಲ್ಲಿ ಅಧಿಕಾರಿಗಳ ನಿರ್ಲಕ್ಷೃ ಧೋರಣೆಯಿಂದ ರಸ್ತೆ ಹಾಳಾಗುತ್ತಿದೆ. ಸಕಾಲಿಕವಾಗಿ ದುರಸ್ತಿ ಕಾರ್ಯ ಕೈಗೆತ್ತಿಕೊಂಡಲ್ಲಿ ರಸ್ತೆ ಹೆಚ್ಚು ಹಾಳಾಗುವುದನ್ನು ತಡೆಗಟ್ಟಬಹುದಾಗಿದ್ದರೂ, ರಸ್ತೆ ಪೂರ್ತಿ ಶಿಥಿಲಗೊಳ್ಳುವವರೆಗೂ ಸುಮ್ಮನಿರುವ ಇಲಾಖೆ ನಂತರ ಭಾರಿ ವೆಚ್ಚದೊಂದಿಗೆ ಕಾಮಗಾರಿ ಕೈಗೊಳ್ಳುತ್ತಿರುವುದು ಖಜಾನೆಗೂ ನಷ್ಟವುಂಟಾಗುತ್ತಿದೆ. ಪ್ರತಿಭಟನೆಗೆ ನಿರ್ಧಾರ ನಗರಪ್ರದೇಶದ ಶಿಥಿಲಾವಸ್ಥೆಯಲ್ಲಿರುವ ರಸ್ತೆಯನ್ನು ದುರಸ್ತಿ ನಡೆಸುವಂತೆ ಆಟೋ ಚಾಲಕರ ಸಂಘಟನೆ ಎನ್.ಟಿ.ಯು.ಸಿ. ಆಗ್ರಹಿಸಿದೆ. ಕಾಸರಗೋಡು ನಗರ ಹಾಗೂ ಸುತ್ತಮುತ್ತಲಿನ ಬಹುತೇಕ ರಸ್ತೆಗಳು ವಾಹನಸಂಚಾರಕ್ಕೆ ಅಯೋಗ್ಯವಾಗಿದ್ದು, ಅಧಿಕಾರಿಗಳ ನಿರ್ಲಕ್ಷೃ ಧೋರಣೆ ಖಂಡಿಸಿ ಡಿ.21ರಂದು ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಧರಣಿ ನಡೆಸಲು ಸಂಘಟನೆ ತೀರ್ಮಾನಿಸಿದೆ.
ನಗರದ ರಸ್ತೆಗಳು ಹೊಂಡಗಳಿಂದ ತುಂಬಿದ್ದರೂ ದುರಸ್ತಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುಂದಾಗದಿರುವುದರಿಂದ ಆಟೋ ಚಾಲಕರ ಪಾಲಿಗೆ ಸಂಕಷ್ಟ ಎದುರಾಗಿದೆ. ಬೆಳಗ್ಗಿಂದ ಸಂಜೆವರೆಗೆ ದುಡಿದ ಮೊತ್ತ ವರ್ಕ್‌ಶಾಪ್ ಪಾಲಾಗುತ್ತಿದೆ. ಸಂಘಟನೆ ವತಿಯಿಂದ ಹಲವು ಬಾರಿ ನಗರಸಭೆ ಎದುರು ಧರಣಿ ನಡೆಸಿ, ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ಆಟೋಚಾಲಕರನ್ನು ಒಟ್ಟು ಸೇರಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ಸಂಘಟನೆ ತೀರ್ಮಾನಿಸಿದೆ. ದಿನೇಶ್ ಬಂಬ್ರಾಣ, ಕಾರ್ಯದರ್ಶಿ, ಬಿಎಂಎಸ್ ಕಾಸರಗೋಡು https://www.vijayavani.net/release-of-chilla-kriti-in-manjeshwar https://www.vijayavani.net/sports-event-invitation-for-janardhana-pujari