

ಚಿಕ್ಕಮಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ನಗರದ ಹನುಮಂತಪ್ಪ ವೃತ್ತದಲ್ಲಿ ನಗರ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಕಡೂರು ಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆಯುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ರಾಜ್ಯ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಧಿಕ್ಕಾರ ಕೂಗುತ್ತಾ ತಾಲೂಕು ಕಚೇರಿಯಿಂದ ಮೆರವಣಿಗೆ ಮೂಲಕ ಬಂದ ಕಾರ್ಯಕರ್ತರು ರಸ್ತೆತಡೆ ನಡೆಸಿ ಕೆಲಕಾಲ ವಾಹನಗಳು ಸಂಚರಿಸದAತೆ ತಡೆದು ತೈಲ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೊಳಿಸಿ ರಾಜ್ಯಸರ್ಕಾರ ಜನಸಾಮಾನ್ಯರ ಮೇಲೆ ಬರೆ ಎಳೆದಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಗ್ಯಾರಂಟಿ ಭಾಗ್ಯಗಳನ್ನು ಉಳಿಸಲು ಈ ಪ್ರಮಾಣದಲ್ಲಿ ಬೆಲೆಏರಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಇಂಧನ ಬೆಲೆ ಏರಿಕೆಯಿಂದ ಸಮಾಜದ ಪ್ರತಿಯೊಬ್ಬ ನಾಗರೀಕರಿಗೆ ಹೊರೆಯಾಗಲಿದೆ. ಸಾಗಾಣಿಕೆ, ದಿನೋಪಯೋಗಿ ಸೇರಿದಂತೆ ಮೂಲಭೂತ ವಸ್ತುಗಳು ಗಗನಕ್ಕೇರುವ ಸಾಧ್ಯತೆಯಿದೆ. ಇವುಗಳನ್ನು ಪರಿಗಣಿಸದೇ ರಾಜ್ಯಸರ್ಕಾರ ದಿಡೀರನೇ ಇಂಧನ ಬೆಲೆಏರಿಸಿ ಜನಸಾಮಾನ್ಯರ ಬದುಕನ್ನು ದಿಕ್ಕಾಪಾಲು ಮಾಡಿದೆ ಎಂದು ದೂರಿದರು.
ಜನತೆಯ ಮತಗಳಿಸುವುದಕ್ಕಾಗಿ ಗ್ಯಾರಂಟಿ ಭಾಗ್ಯಗಳನ್ನು ಘೋಷಿಸಿ ಇದೀಗ ಅದನ್ನು ಸರಿದೂಗಿಸುವಲ್ಲಿ ರಾಜ್ಯಸರ್ಕಾರ ವಿಫಲರಾದ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಪಹಣಿ, ವಿದ್ಯುತ್, ಅಬಕಾರಿ ಸೇರಿದಂತೆ ಇನ್ನಿ ತರೆ ಸಾಮಾಗ್ರಿಗಳ ಬೆಲೆಏರಿಸಿ ಸಾಮಾನ್ಯಜನರು ಬದುಕಲಾರದ ಸ್ಥಿತಿಗೆ ತಂದೊಡ್ಡಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಬಡವರು, ಕೂಲಿಕಾರ್ಮಿಕರು ಹಾಗೂ ಮಧ್ಯಮವರ್ಗದವರೇ ಹೆಚ್ಚಿರುವ ಸಮಾಜದಲ್ಲಿ ಸರ್ಕಾರದ ಈ ರೀತಿಯ ನಿರ್ಣಯಗಳಿಂದ ತೀವ್ರ ಸಮಸ್ಯೆಗಳು ಉಂಟಾಗಲಿದೆ. ಪ್ರತಿನಿತ್ಯವು ದುಡಿದು ಕುಟುಂಬವನ್ನು ನಿರ್ವಹಿಸಬಲ್ಲರು ಬೆಲೆಏರಿಕೆ ಕಾವನ್ನು ತಡೆಯಲಾರರು. ಜನವಿರೋಧಿ ಧೋರಣೆಗಳನ್ನು ಅನುಸರಿಸುತ್ತಿರುವ ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ನೀಡಬೇಕು ಎಂದರು.
ಇದೇ ವೇಳೆ ಪ್ರತಿಭಟನೆಯಲ್ಲಿ ನಿರತರಾಗಿದ್ದ ಬಿಜೆಪಿ ಮುಖಂಡರುಗಳಾದ ಕೆ.ಎಸ್.ಪುಷ್ಪರಾಜ್, ಬಿ .ರಾಜಪ್ಪ, ಅಮೃತೇಶ್ ಚೆನ್ನಕೇಶವ, ರವೀಂದ್ರ ಬೆಳವಾಡಿ, ಪ್ರೇಮ್‌ಕುಮಾರ್, ಹಿರೇಮಗಳೂರು ಪುಟ್ಟ ಸ್ವಾಮಿ, ಕೌಶಿಕ್, ಜಿ. ಶಂಕರ್, ವೆಂಕಟೇಶ್ ರಾಜ್, ರೇವನಾಥ್, ಕಬೀರ್, ಅನ್ವರ್, ಸಾಗಾಯಿದಾಸ್, ಓಂಕಾರೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.