ಗೊಲ್ಲಹಳ್ಳಿ ರಸ್ತೆ ಅವ್ಯವಸ್ಥೆಗೆ ಮುಕ್ತಿ

RAILWAY GOLLAHALLY
Published on

 ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ

ನೆಲಮಂಗಲ ತಾಲೂಕು ವ್ಯಾಪ್ತಿಯ ನೆಲಮಂಗಲ-ದೊಡ್ಡಬಳ್ಳಾಪುರ ಸಂಪರ್ಕ ರಸ್ತೆಯಾಗಿರುವ ಗೊಲ್ಲಹಳ್ಳಿ ಬಳಿ ಹದಗೆಟ್ಟ ರಸ್ತೆಯಿಂದ ದಿನನಿತ್ಯ ವಾಹನ ಸವಾರರು ಎದುರಿಸುತ್ತಿದ್ದ ಸಂಕಷ್ಟಕ್ಕೆ ಮುಕ್ತಿ ಸಿಗುವ ದಿನ ಹತ್ತಿರವಾಗಿದೆ.

ಮಂಗಳವಾರ ಶಾಸಕ ಎನ್.ಶ್ರೀನಿವಾಸ್ ತಾತ್ಕಾಲಿಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಅವ್ಯವಸ್ಥೆಗೆ ಮುಕ್ತಿಕೊಡುವ ಕೆಲಸಕ್ಕೆ ಮುಂದಾಗಿದ್ದಾರೆ. ಇಲ್ಲಿನ ರಸ್ತೆ ಅವ್ಯವಸ್ಥೆಯಿಂದ ಗಂಟೆಗಟ್ಟಲೆ ಟ್ರಾಫಿಕ್‌ಜಾಮ್‌ನಲ್ಲಿ ಸಿಲುಕುವ ವಾಹನ ಸವಾರರು ನೆಲಮಂಗಲ ಅಥವಾ ದೊಡ್ಡಬಳ್ಳಾಪುರ ತಲುಪಲು ಹರಸಾಹಸ ನಡೆಸಬೇಕಾಗಿದೆ. ಹಲವು ವರ್ಷದಿಂದ ಈ ಭಾಗದಲ್ಲಿ ರಸ್ತೆ ಸಮಸ್ಯೆ ಜೀವಂತವಾಗಿದ್ದು ಶಾಶ್ವತ ಪರಿಹಾರ ಸಿಕ್ಕಿಲ್ಲ. ಗುಂಡಿಬಿದ್ದ ರಸ್ತೆಯಲ್ಲಿ ವಾಹನಗಳು ಕುಪ್ಪಳಿಸುತ್ತಾ ತೆರಳುವುದರಿಂದ ವಾಹನದಟ್ಟಣೆ ಏರ್ಪಡುತ್ತಿದೆ. ಈ ಭಾಗದಲ್ಲಿ ಯಾವುದಾದರೂ ವಾಹನ ಕೆಟ್ಟುನಿಂತರೆ ದಿನಗಟ್ಟಲೆ ವಾಹನ ಸವಾರರು ಟ್ರಾಫಿಕ್‌ಜಾಮ್‌ನಲ್ಲಿ ಸಿಲುಕು ನರಳುವಂತಾಗುತ್ತದೆ. ಇದೆಲ್ಲದಕ್ಕೂ ಪರಿಹಾರ ಸಿಗುವ ದಿನ ಹತ್ತಿರವಾಗಿರುವುದು ಸಾರ್ವಜನಿಕರಲ್ಲಿ ಸಂತಸಕ್ಕೆ ಕಾರಣವಾಗಿದೆ.

ವರದಿ ಪರಿಣಾಮ:

ರೈಲ್ವೆ ಗೊಲ್ಲಹಳ್ಳಿ ಗೇಟ್‌ನಲ್ಲಿ ಸವಾರರ ಪರದಾಟ’ ಶೀರ್ಷಿಕೆಯಡಿ ಆ.19ರಂದು ವಿಜಯವಾಣಿ ವರದಿ ಪ್ರಕಟಿಸಿತ್ತು. ಹದಗೆಟ್ಟ ರಸ್ತೆಗಳಲ್ಲಿ ಸಂಚಾರ ದುಸ್ತರವಾಗಿರುವುದು, ಗಂಟೆಗಟ್ಟಲೆ ಸಂಚಾರ ಸಿಕ್ಕು ಏರ್ಪಡುತ್ತಿರುವ ಬಗ್ಗೆ ರಿಯಾಲಿಟಿಚೆಕ್ ನಡೆಸಿ ಚಿತ್ರಗಳ ಸಹಿತ ವಿಸ್ತಾರ ವರದಿ ಮಾಡಿತ್ತು. ಈ ಸುದ್ದಿಯನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಸಮಸ್ಯೆಗಳ ಗಂಭೀರತೆ ಬಗ್ಗೆ ದನಿ ಎತ್ತಿದ್ದರು.

ಇಚ್ಛಾಶಕ್ತಿ ಇದ್ದರೆ ಅಭಿವೃದ್ಧಿ ಸಾಧ್ಯ:

ಇಚ್ಛಾಶಕ್ತಿ ಇದ್ದರೆ ಮಾತ್ರ ಜರಪರವಾಗಿ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ನೆಲಮಂಗಲ ತಾಲೂಕಿನ ಗೊಲ್ಲಹಳ್ಳಿ ಗ್ರಾಮದಲ್ಲಿ ಮಂಗಳವಾರ ತಾತ್ಕಾಲಿಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು, ಹಿಂದಿನ ಸರ್ಕಾರದ ಅವಧಿಯಲ್ಲಿ ಆರಂಭಗೊಂಡ ರಸ್ತೆ ಟೆಂಡರ್‌ನ ಹೆಚ್ಚಳ ಹಾಗೂ ವಿವಿಧ ಸಮಸ್ಯೆಯಿಂದಾಗಿ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದರು. ಅಭಿವೃದ್ಧಿ ಕಾರ್ಯ ಮಾಡಬೇಕಾದರೆ ಇಚ್ಚಾಶಕ್ತಿ ಬಹಳ ಮುಖ್ಯವಾಗಿರುತ್ತದೆ. ಹಿಂದಿನ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಕಾಮಗಾರಿ ನೆನೆಗುದ್ದಿಗೆ ಬಿದ್ದಿತ್ತು ಎಂದು ಹೇಳಿದರು. ರಾಜ್ಯ ಹೆದ್ದಾರಿ ನೆಲಮಂಗಲ ನಗರದಿಂದ ಗೌರಿಬಿದನೂರು ಮಾರ್ಗವಾಗಿ ಆಂಧ್ರಪ್ರದೇಶದ ಗಡಿಯವರೆಗೂ ಸಾಗುತ್ತದೆ. ಹೆದ್ದಾರಿಯಲ್ಲಿ ಹತ್ತಾರು ವಿಧಾನಸಭಾ ಕ್ಷೇತ್ರಗಳು ಬರಲಿವೆ. ಸರ್ಕಾರ ಅನುದಾನನಿಡುವುದಕ್ಕೂ ಮುನ್ನವೇ ಸಾರ್ವಜನಿಕರ ಅನುಕೂಲಕ್ಕಾಗಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಗುತ್ತಿಗೆದಾರ ಹಾಗೂ ಕಾಂಗ್ರೆಸ್ ಮುಖಂಡ ಸ್ಟಾರ್‌ಚಂದ್ರು ಬಳಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net