

ಮೊಳಕಾಲ್ಮೂರು: ಪಟ್ಟಣದ ಮುಖ್ಯರಸ್ತೆ ವಿಸ್ತರಣೆ, ಅಭಿವೃದ್ಧಿ ಕಾರ್ಯ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಿರ್ವಹಿಸದೆ ಅವೈಜ್ಞಾನಿಕವಾಗಿ ಮಾಡಲಾಗುತ್ತಿದೆ. ಬಡವರ ಮನೆಗಳನ್ನು ತೆರವುಗೊಳಿಸಿದ್ದು, ಉಳ್ಳವರ ಅಂಗಡಿ-ಮುಂಗಟ್ಟು ಹಾಗೂ ಮನೆಗಳನ್ನು ಹಾಗೇ ಬಿಡಲಾಗಿದೆ. ಇದು ಯಾವ ಕಾನೂನು…?
ರಸ್ತೆ ಅಭಿವೃದ್ಧಿ ಹಿನ್ನೆಲೆಯಲ್ಲಿ ತಹಸೀಲ್ದಾರ್ ರೂಪಾ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತ ಸೌಧದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ರೈತ, ದಲಿತ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರಡ್ಡಿಹಳ್ಳಿ ಬಸವರಡ್ಡಿ ಮಾತನಾಡಿ, ನಗರ-ಪಟ್ಟಣಗಳ ಮಧ್ಯೆ ಪ್ರಮುಖ ರಸ್ತೆಗಳ ವಿಸ್ತರನೆ 80 ಮೀಟರ್ ಇರಬೇಕು. ಫುಟ್‌ಪಾತ್, ಬೀದಿ ಬದಿ ವಿದ್ಯುತ್ ದೀಪ, ಚರಂಡಿ ಸೇರಿ ಅಗತ್ಯ ಸೌಲಭ್ಯ ಕಡ್ಡಾಯ ಎಂದು ಕೋರ್ಟ್ ಸೂಚಿಸಿದೆ. ಆದರೂ ಇದನ್ನು ಪಟ್ಟಣದ ರಸ್ತೆ ಅಭಿವೃದ್ಧಿ ವಿಷಯದಲ್ಲಿ ಪಾಲಿಸುತ್ತಿಲ್ಲ ಎಂದು ಬೇಸರಿಸಿದರು.
ಜನ ಸೇವೆಗೆ ಸಮರ್ಪಕ ವ್ಯವಸ್ಥೆ ಇಲ್ಲದೆ 29 ಕೋಟಿ ರೂ. ಹಣ ವೆಚ್ಚ ಮಾಡಲಾಗುತ್ತಿದೆ. ಇಂತಹ ಅವೈಜ್ಞಾನಿಕ ಕೆಲಸ ಯಾವ ಕಾರಣಕ್ಕೆ ತಿಳಿಯುತ್ತಿಲ್ಲ. ಇದರ ಸಾಧಕ-ಬಾಧಕ ಕುರಿತು ಚರ್ಚಿಸಿ ಉತ್ತಮ ನಿರ್ಧಾರ ತಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೊಂಡಾಪುರ ಪರಮೇಶಿ ಮಾತನಾಡಿ, ರಸ್ತೆ ಕಾಮಗಾರಿ ಹೆಸರಿನಲ್ಲಿ ಅಧಿಕಾರಿಗಳು-ಗುತ್ತಿಗೆದಾರರು ಕಳೆಪೆ ಕೆಲಸ ಮಾಡಿ ದುಡ್ಡು ಮಾಡುವ ವ್ಯವಸ್ಥಿತ ಸಂಚು ರೂಪಿಸಿದಂತಿದೆ ಎಂದು ದೂರಿದರು.
ರಸ್ತೆ ವಿಸ್ತರಣೆಗಾಗಿ 20ಕ್ಕೂ ಹೆಚ್ಚು ದಲಿತ ಕುಟುಂಬಗಳು ಮನೆ ಕಳಕೊಂಡು ಬೀದಿ ಬಿದ್ದಿವೆ. ಆದರೆ, ಉಳ್ಳುವರ ಮನೆ, ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸುವಲ್ಲಿ ನಿರ್ಲಕ್ಷೃ ವಹಿಸಲಾಗಿದೆ. ಇದರ ಹಿಂದಿನ ಮರ್ಮವೇನು. ಇದು ತಾರತಮ್ಯ ನೀತಿ ಅಲ್ಲವೆ ಎಂದು ಪ್ರಶ್ನೀಸಿದರು.
ಪಪಂ ಮುಖ್ಯಾಧಿಕಾರಿ ಇ.ಲೀಲಾವತಿ, ಇಂಜಿನಿಯರ್ ಶ್ರೀನಿವಾಸ, ದಸಂಸ ತಾಲೂಕು ಸಂಚಾಲಕ ಎಂ.ಗಂಗಾಧರ, ರೈತ ಸಂಘದ ತಾಲೂಕಾಧ್ಯಕ್ಷ ರವಿಕುಮಾರ, ಸಂಜೀವಮೂರ್ತಿ, ಉಮೇಶ, ಎಚ್.ಟಿ.ಚಂದ್ರಣ್ಣ, ಮಂಜುನಾಥ, ಕನಕ ಶಿವಮೂರ್ತಿ, ಬೊಮ್ಮಣ್ಣ, ಕೃಷ್ಣಮೂರ್ತಿ ಇದ್ದರು.