ಮತ್ತೆ ದುರ್ಗದ ರಸ್ತೆ ಅಗಲೀಕರಣದ ಸದ್ದು

CTD DM ROAD WIDENING MEETING-----
Published on

ಚಿತ್ರದುರ್ಗ: ಜಿಲ್ಲಾ ಕೇಂದ್ರ ಚಿತ್ರದುರ್ಗ ನಗರದ ಪ್ರಮುಖ ರಸ್ತೆ ಕಡ್ಡಾಯವಾಗಿ ವಿಸ್ತರಣೆ ಆಗಲೇಬೇಕು. ಇದಕ್ಕೆ ಪೂರ್ವಾನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದರು.

ಡಿಸಿ ಕಚೇರಿಯಲ್ಲಿ ಶನಿವಾರ ನಗರದ ಹಳೆಯ ಪುಣೆ-ಬೆಂಗಳೂರು ರಸ್ತೆ ವಿಸ್ತರಣೆ ಮತ್ತು ಅತಿಕ್ರಮ ತೆರವು ಸಂಬಂಧ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಹಾದುಹೋಗಿರುವ ಹಳೆ ಪಿಬಿ ರಸ್ತೆಯನ್ನು ಚಳ್ಳಕೆರೆ ಗೇಟ್‌ನಿಂದ ಪ್ರವಾಸಿ ಮಂದಿರ ವೃತ್ತ, ಗಾಂಧಿವೃತ್ತ, ಕನಕವೃತ್ತದವರೆಗೆ ವಿಸ್ತರಿಸಬೇಕಿದೆ. ಇದಕ್ಕಾಗಿ ವಿವಿಧ ಪ್ರಕ್ರಿಯೆಗಳಿಗೆ ಸರ್ಕಾರದಿಂದ ಪೂರ್ವಾನುಮತಿ ಪಡೆಯಬೇಕಿದೆ. ಶೀಘ್ರ ಪ್ರಸ್ತಾವನೆ ಸಲ್ಲಿಸಬೇಕು. ಸರ್ಕಾರದಿಂದ ತ್ವರಿತಗತಿಯಲ್ಲಿ ಅನುಮತಿ ಕೊಡಿಸಲು ಕ್ರಮ ವಹಿಸುತ್ತೇನೆ ಎಂದು ಹೇಳಿದರು.

ಡಿಸಿ ಟಿ. ವೆಂಕಟೇಶ್ ಮಾತನಾಡಿ, ಚಿತ್ರದುರ್ಗ ನಗರ ಬೆಳೆಯುತ್ತಿದೆ. ಚಿತ್ರದುರ್ಗ ನಗರಸಭೆಯನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ನಗರದ ಮೂಲಕ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿದ್ದು, ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಈಚೆಗೆ ಜರುಗಿದ ಸಭೆಯಲ್ಲೂ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ಹೆಚ್ಚಳಗೊಂಡಿರುವ ಬಗ್ಗೆ ಪ್ರಸ್ತಾಪವಾಗಿದೆ ಎಂದರು.

ನಗರದ ಕಿರಿದಾದ ರಸ್ತೆಗಳು, ಜನಸಂಖ್ಯೆ, ಸಂಚಾರ ಸಮಸ್ಯೆ ಮೊದಲಾದವುಗಳನ್ನು ಗಮನದಲ್ಲಿ ಇಟ್ಟುಕೊಂಡು, ಸಮಸ್ಯೆಗಳ ನಿವಾರಣೆಗೆ ಪ್ರಮುಖ ರಸ್ತೆ ವಿಸ್ತರಣೆಯಾಗಬೇಕಿದೆ. ಈ ಸಂಬಂಧ ಈಗಾಗಲೇ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಎಡಿಸಿ ಬಿ.ಟಿ. ಕುಮಾರಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಕುಡಾ ಆಯುಕ್ತ ಸೋಮಶೇಖರ್, ನಗರಸಭೆ ಪೌರಾಯುಕ್ತೆ ಎಂ. ರೇಣುಕಾ, ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯ್ಕ ಮತ್ತಿತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net