

ರಾಯಚೂರು: ತಾಲೂಕಿನಾದ್ಯಂತ ಗುರುವಾರ ರಾತ್ರಿ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರೆ, ಹಲವೆಡೆ ರಸ್ತೆಗಳ ಮೇಲೆ ನೀರು ಹರಿದು ಸಂಚಾರಕ್ಕೆ ಸಮಸ್ಯೆಯುಂಟಾದ ಘಟನೆಗಳು ಜರುಗಿವೆ.
ನಗರದ ಹತ್ತಿ ಮಾರುಕಟ್ಟೆ ಹತ್ತಿರದ ರೈಲ್ವೆ ಸೇತುವೆ ಕೆಳಗೆ ನೀರು ನಿಂತು ವಾಹನಗಳ ಓಡಾಟಕ್ಕೆ ತೊಂದರೆಯಾಗಿತ್ತು. ಸೇತುವೆ ಕೆಳಭಾಗದಲ್ಲಿ ದೊಡ್ಡ ತಗ್ಗು ನಿರ್ಮಾಣವಾಗಿ ಭಾರಿ ವಾಹನಗಳು ಓಡಾಡದಂತಾಗಿತ್ತು. ಇದರಿಂದಾಗಿ ರಸ್ತೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿತ್ತು.
ಎಸ್ಪಿ ಕಚೇರಿ ಹತ್ತಿರದ ಶಂಶಾಲಂ ದರ್ಗಾ ಮುಂಭಾಗದ ರಸ್ತೆಯಲ್ಲಿನ ತಗ್ಗುಗಳಲ್ಲಿ ನೀರು ನಿಂತು ವಾಹನ ಸವಾರರು ಸಂಚಾರಕ್ಕೆ ಸಮಸ್ಯೆ ಎದುರಿಸುವಂತಾಗಿತ್ತು. ದೊಡ್ಡ ತಗ್ಗುಗಳಿಗೆ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನ ಸವಾರರಿಗೆ ಎಚ್ಚರಿಕೆ ನೀಡುವುದರ ಜತೆಗೆ ಮರಂ ತರಿಸಿ ತಗ್ಗುಗಳನ್ನು ಮುಚ್ಚಿ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.
ತಾಲೂಕಿನ ಬಿ.ಯದ್ಲಾಪುರ ಗ್ರಾಮಕ್ಕೆ ಹೋಗುವ ರಸ್ತೆಯ ಮೇಲೆ ಹಳ್ಳದ ನೀರು ಹರಿದು ರಸ್ತೆ ನೀರಿಗೆ ಕೊಚ್ಚಿ ಕೊಂಡು ಹೋಗಿದ್ದು, ಗ್ರಾಮಸ್ಥರು, ವಿದ್ಯಾರ್ಥಿಗಳು ಸಂಚಾರಕ್ಕೆ ಸಂಕಷ್ಟ ಎದುರಿಸುವಂತಾಗಿತ್ತು. ಸಂಚಾರ ಸ್ಥಗಿತಗೊಂಡು ಜನರು ಅಗತ್ಯ ಕೆಲಸಗಳಿಗೆ ತೆರಳಲು ಅನಾನುಕೂಲವಾಗಿತ್ತು.
ರಾಯಚೂರು ತಾಲೂಕು ಜತೆಗೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟ ಎದುರಿಸುವಂತಾಗಿತ್ತು. ಜತೆಗೆ ಗಾಳಿಗೆ ಮನೆಗಳ ಟಿನ್‌ಗಳು ಹಾರಿಹೋಗಿ ಜನರು ಜಾಗರಣೆ ಮಾಡುವಂತಾಗಿತ್ತು.