

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಬಹುತೇಕ ಅವೈಜ್ಞಾನಿಕ ಚರಂಡಿ ಅವ್ಯವಸ್ಥೆಯ ಕಿರಿಕಿರಿ ನಡುವೆ ಲಕ್ಷಾಂತರ ರೂ ವೆಚ್ಚದಲ್ಲಿ ನಿರ್ಮಿಸಿರುವ ಹೊಸ ರಸ್ತೆಗಳಲ್ಲಿ ಗುಂಡಿ ಅಗೆಯುವಿಕೆ ನಿರ್ಲಕ್ಷ್ಯ ಧೋರಣೆಯು ದೂರವಾಗಿಲ್ಲ.
ಹೌದು! ರಸ್ತೆ ಕಾಮಗಾರಿ ಮುಗಿದು ಕಳೆದ ಎರಡ್ಮೂರು ತಿಂಗಳಾಗುವಷ್ಟರಲ್ಲಿ ಒಳಚರಂಡಿ ನಿರ್ಮಾಣ ಮತ್ತು ಕೇಬಲ್ ವೈರ್ ಅಳವಡಿಕೆ ಸೇರಿದಂತೆ ನಾನಾ ನೆಪದಲ್ಲಿ ಸುಸ್ಥಿತಿಯಲ್ಲಿರುವುದನ್ನು ಹಾಳು ಮಾಡಲಾಗುತ್ತಿದೆ. ಇದರಿಂದ ಹೊಸ ರಸ್ತೆಗಳಲ್ಲಿ ಸಂಚರಿಸಲು ತೊಂದರೆ ಅನುಭವಿಸುವಂತಾಗಿದೆ. ಮತ್ತೊಂದೆಡೆ ಅನುದಾನವು ವ್ಯರ್ಥವಾಗುತ್ತಿದೆ.
ಚಿಕ್ಕಬಳ್ಳಾಪುರ ನಗರದ ಮುನ್ಸಿಪಲ್ ಲೇಔಟ್, ಐಡಿಎಂಸ್‌ಟಿ ಬಡಾವಣೆ, ಬಾಪೂಜಿ ನಗರ ಸೇರಿದಂತೆ ಯಾವುದೇ ಬಡಾವಣೆಗಳಿಗೆ ತೆರಳಿದರೂ ಹೊಸ ರಸ್ತೆಗಳನ್ನು ಅಗೆದ ಕುರುಹುಗಳು ಕಂಡು ಬರುತ್ತವೆ. ಇದಕ್ಕೆ ಮೊದಲಿನಿಂದಲೂ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದರೂ ಸಹ ಈಗಲೂ ಅಲ್ಲಲ್ಲಿ ಕೂಲಿ ಕಾರ್ಮಿಕರು ಯಂತ್ರೋಪಕರಣಗಳ ಸಹಾಯದಿಂದ ಗುಂಡಿಗಳನ್ನು ಅಗೆಯುತ್ತಿರುತ್ತಾರೆ. ಇದಕ್ಕೆ ಸಂಬಂಧಪಟ್ಟ ನಗರಸಭೆಯಿಂದ ಅನುಮತಿ ಪಡೆದುಕೊಂಡಿರುವುದಿಲ್ಲ. ಇದರ ಬಗ್ಗೆ ಅರಿವಿದ್ದರೂ ಆಯಾ ವಾರ್ಡಿನ ಸದಸ್ಯರು, ಮತಗಳನ್ನು ಕಳೆದುಕೊಳ್ಳುವ ಲೆಕ್ಕಾಚಾರದಲ್ಲಿ ಪ್ರಶ್ನಿಸುವುದಿಲ್ಲ.
* ಹದಗೆಟ್ಟ ರಸ್ತೆಗಳು
ನಗರಸಭಾ ಕಚೇರಿ ಮುಂಭಾಗದ ರಸ್ತೆ, ಕಂದವಾರ ರಸ್ತೆ, ಮುನ್ಸಿಪಲ್ ಲೇಔಟ್ ಸಾಯಿಬಾಬಾ ಮಂದಿರ ರಸ್ತೆ, ಜೈ ಭೀಮ್ ಬಡಾವಣೆ ರಸ್ತೆಗಳು ಹದಗೆಟ್ಟಿರುವುದಕ್ಕೆ ಪ್ರಮುಖ ನಿದರ್ಶನ. ಇಲ್ಲಿ ಡಾಂಬರು ಕಿತ್ತು ಬಂದು, ಜಲ್ಲಿ ಕಲ್ಲುಗಳು ಕಾಣುತ್ತಿರುತ್ತವೆ. ದೊಡ್ಡ ಗುಂಡಿಗಳು ಬಿದ್ದಿರುತ್ತವೆ. ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಎಂ.ಜಿ.ರಸ್ತೆಯಲ್ಲಿ ಒಳಚರಂಡಿ ಮ್ಯಾನುಹೋಲ್‌ಗಳನ್ನು ನಿರ್ಮಿಸಿದ್ದು ಇವುಗಳನ್ನು ವಾಹನಗಳು ತಪ್ಪಿಸಿಕೊಂಡು ಸಂಚರಿಸುವಂತಾಗಿದೆ.
* ಅವೈಜ್ಞಾನಿಕ ಚರಂಡಿಗಳು
ಅಲ್ಲಲ್ಲಿ ಏರು ತಗ್ಗು, ಸರಾಗವಾಗಿ ಹರಿಯದ ನೀರು, ವಾರ್ಡುಗಳಲ್ಲಿ ಪರಸ್ಪರ ಒಂದಕ್ಕೊಂದು ಲಿಂಕ್ ಇಲ್ಲದಿರುವಿಕೆ, ತುಂಬಿ ತುಳುಕಾಡುವ ತ್ಯಾಜ್ಯ. ಇದು ನಾನಾ ಕಡೆ ಚರಂಡಿಗಳ ದುಸ್ಥಿತಿಯ ಪರಿಸ್ಥಿತಿ. ಪ್ರಸ್ತುತ ಮುಂಗಾರಿನಲ್ಲಿ ಆಗಾಗ ಮಳೆ ಸುರಿಯುತ್ತಿದೆ. ಇದೇ ವೇಳೆ ಚರಂಡಿಗಳ ಬದಲಿಗೆ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ದೊಡ್ಡ ದೊಡ್ಡ ಚರಂಡಿಗಳು ನಿಂತುಕೊಂಡಿರುವ ಕೊಳಚೆ ನೀರಿನಿಂದ ತುಂಬಿವೆ. ಇದರ ನಡುವೆ ಇಂದಿರಾನಗರದಿಂದ ವಾಪಸಂದ್ರದ ಬೈಪಾಸ್ ಕಡೆಗೆ ಹೋಗುವ, ಎಂ.ಜಿ.ರಸ್ತೆಯಲ್ಲಿ ಬಾಲಕಿಯರ ಹಾಸ್ಟೆಲ್- ನಗರ ಪೊಲೀಸ್ ಠಾಣೆಯ ಮಾರ್ಗದ ದೊಡ್ಡ ಚರಂಡಿಯಲ್ಲಿ ವಾರ್ಡಿನ ಸದಸ್ಯರು ಮುಂಜಾಗ್ರತಾ ಕ್ರಮವಾಗಿ ತ್ಯಾಜ್ಯವನ್ನು ತೆರವುಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ. ಉಳಿದಂತೆ ಲಕ್ಕಮ್ಮ ದೊಡ್ಡ ಮುನಿಯಪ್ಪ ಕಲ್ಯಾಣ ಮಂಟಪ, ಕೊರಚರಪೇಟೆ, ಸಾಧುಮಠ ರಸ್ತೆಯಲ್ಲಿ ಚರಂಡಿಗಳು ಮತ್ತು ವಾಪಸಂದ್ರ ಹಾಲಿನ ಡೈರಿ ಸಮೀಪದ ರಾಜಕಾಲುವೆಯಲ್ಲಿನ ತುಂಬಿ ತುಳುಕಾಡುವ ತ್ಯಾಜ್ಯ, ಕೊಳಚೆ ನೀರಿನಿಂದ ದುರ್ವಾಸನೆ ಹರಡುತ್ತಿರುತ್ತದೆ.
*ಚರಂಡಿಗೆ ಯುಜಿಡಿ ಸಂಪರ್ಕ ಈ ಭಾಗದಲ್ಲಿ ಯುಜಿಡಿ ಕಿರಿಕಿರಿ ದೊಡ್ಡ ಸಮಸ್ಯೆಯಾಗಿದೆ. ಆಗಾಗ ನಗರದ ಬಹುತೇಕ ಕಡೆ ನೀರು ಬ್ಲಾಕ್ ಆಗುತ್ತಿರುತ್ತದೆ. ರಸ್ತೆಯ ಮೇಲೆ ದಿನಗಟ್ಟಲೇ ನೀರು ಹರಿದು ಹೋಗುತ್ತಿರುತ್ತದೆ. ದೂರುಗಳು ಹೆಚ್ಚಾದ ಸಿಬ್ಬಂದಿ ಸಕ್ಕಿಂಗ್ ಯಂತ್ರವನ್ನು ತಂದು ನೀರು ಖಾಲಿ ಮಾಡುತ್ತಾರೆ. ಆದರೆ, ಕೆಲವೇ ದಿನಗಳಲ್ಲಿ ಸಮಸ್ಯೆ ಪುನಃ ಕಂಡು ಬರುತ್ತದೆ. ಇದಕ್ಕೆ ಅಲ್ಲಲ್ಲಿ ಅವೈಜ್ಞಾನಿಕ ಒಳಚರಂಡಿಯ ನಿರ್ಮಾಣ, ಕಳಪೆ ಕಾಮಗಾರಿ, ಪೈಪು ಹೊಡೆದಿರುವುದು ಸೇರಿ ನಾನಾ ನೆಪಗಳು ಕೇಳಿ ಬರುತ್ತವೆ. ಕೋಟ್ಯಂತರ ಅನುದಾನವನ್ನು ನುಂಗಿರುವ ಯುಜಿಡಿಗೆ ವಾರ್ಡಿನಲ್ಲಿನ ಚರಂಡಿಗಳ ಸಂಪರ್ಕ ಕಲ್ಪಿಸಿದ್ದು ಮಲ ಮೂತ್ರ, ಶೌಚಗೃಹ ನೀರು ಚರಂಡಿಯ ನೀರಿನಲ್ಲಿ ಮಿಶ್ರಣಗೊಳ್ಳುತ್ತಿವೆ.
ವಿ.ರವಿಕುಮಾರ್, ಕನ್ನಡಸೇನೆ ಜಿಲ್ಲಾಧ್ಯಕ್ಷ, ಚಿಕ್ಕಬಳ್ಳಾಪುರ