

ನರಗುಂದ: ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಸಂಪೂರ್ಣ ನನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಶನಿವಾರ ಕೆಲಕಾಲ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ತಾಲೂಕಿನ ಕೊಣ್ಣೂರ ಗ್ರಾಮದ ಮೂಲಕ ಸಾಗಿರುವ ಹುಬ್ಬಳ್ಳಿ-ವಿಜಯಪೂರ ರಾಷ್ಟ್ರೀಯ ಹೆದ್ದಾರಿ-2018ರ ಅಪೂರ್ಣ ಕಾಮಗಾರಿಯಿಂದ ಅಮಾಯಕರು ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಕೋರ್ತಿ ಕೋಲ್ಹಾರದಿಂದ ಮಮಟಗೇರಿವರೆಗೆ 50 ಕಿಮೀ ಹಾಗೂ ಮಮಟಗೇರಿಯಿಂದ ನವಲಗುಂದ ತಾಲೂಕಿನ ಬೆಳವಟಗಿವರೆಗಿನ 47 ಕಿಮೀ ಉದ್ದದ 242 ಕೋಟಿ ರೂ. ಮೊತ್ತದ ಕಾಮಗಾರಿಯನ್ನು 2016 ಪ್ರಾರಂಭಿಸಲಾಗಿದೆ. ನಿಗದಿಯಂತೆ 2018ರಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಗುತ್ತಿಗೆದಾರ, ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ವಿವಿಧ ಕಡೆಗಳಲ್ಲಿನ ರಸ್ತೆ, ಡಿವೈಡರ್, ವಿದ್ಯುತ್ ದೀಪಗಳ ಅಳವಡಿಕೆ, ಚರಂಡಿ ನಿರ್ಮಾಣ ಕಾಮಗಾರಿ ಸಂಪೂರ್ಣ ನನೆಗುದಿಗೆ ಬಿದ್ದಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕೆ ವಿಪರೀತ ತೊಂದರೆ ಉಂಟಾಗಿದೆ. ಕೊಣ್ಣೂರ ಮಾರ್ಗವಾಗಿ ಪ್ರತಿನಿತ್ಯ ಸಾವಿರಾರು ವಾಹನಗಳ ಸಂಚಾರದಿಂದ ಧೂಳಿನ ಮಜ್ಜನ ಮೀತಿಮೀರಿ ಹೋಗಿದೆ. ಅರ್ಧಬರ್ಧ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ಅನೇಕರು ಬಲಿಯಾಗಿದ್ದರೂ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳಿಸಲು ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.
ಕೊಣ್ಣೂರಿನ ಹಳೇ ಬಸ್ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣದವರೆಗಿನ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಗುತ್ತಿಗೆದಾರ ಕಳಪೆ ಕಾಮಗಾರಿ ಮಾಡಿದ್ದರಿಂದ ಪ್ರಾಥಮಿಕ ಹಂತದ ಡಾಂಬರೀಕರಣ ಸಂಪೂರ್ಣ ಕಿತ್ತು ಹೋಗಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ನಿಗಮದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಮನವಿಗೆ ಸ್ಪಂದಿಸುತ್ತಿಲ್ಲ. ಇನ್ನಾದರೂ ರಸ್ತೆ ದುರಸ್ತಿ ಪಡಿಸದಿದ್ದರೆ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಆನಂದ ನರಗುಂದ, ಅಪ್ಪಣಗೌಡ ಕೆಂಪನಗೌಡ್ರ, ಮಲ್ಲಯ್ಯ ಪರ್ವತದೇವರಮಠ, ಸಂತೋಷ ಹುರಕಡ್ಲಿ, ಕೃಷ್ಣಗೌಡ ಮುಳಗುಂದ, ಮಾಬುಸಾಬ್ ಮುತ್ತಣ್ಣವರ, ರವಿ ಪವಾರ, ವೆಂಕಣ್ಣ ಹೊರಕೇರಿ, ಬಸು ಬ್ಯಾಳಿ, ಬಸು ಕುಂಬಾರ, ಬೇಕರಿ ಕಾರ್ತಿಕ, ರಾಚಪ್ಪ ಬೀಳಗಿ ಪ್ರತಿಭಟನೆಯಲ್ಲಿದ್ದರು.