

ಮೂಡಿಗೆರೆ: ಕಜ್ಜೆಹಳ್ಳಿ ಗ್ರಾಮದಿಂದ 4 ಕಿಮೀ ದೂರದ ಕಿರುಗುಂದ ಗ್ರಾಮದ ನೈಸರ್ಗಿಕ ಪ್ರವಾಸಿ ತಾಣ ಗವಿಗುಡ್ಡದವರೆಗೆ ಜೆಸಿಬಿ ಬಳಸಿ ಗ್ರಾಮಸ್ಥರೇ ರಸ್ತೆ ನಿರ್ಮಿಸಿ, ಗೋಮಾಳ ಜಾಗಕ್ಕೆ ಜಾನುವಾರು ಹೋಗಲು ಹಾಗೂ ಟ್ರಕಿಂಗ್ ತೆರಳುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿದ್ದಾರೆ.
ಕಿರುಗುಂದ ಗ್ರಾಮದಲ್ಲಿರುವ ಗವಿಗುಡ್ಡ 2 ಕಿ.ಮೀ ಎತ್ತರವಿದೆ. ಅಲ್ಲಿಗೆ ಟ್ರಕ್ಕಿಂಗ್ ತೆರಳಲು ರಸ್ತೆಯಿಲ್ಲದೆ ಕಾಡು ದಾರಿಯಲ್ಲಿ ಸಾಗಬೇಕಿತ್ತು. ಗುಡ್ಡದ ಬುಡದಿಂದ 2 ಕಿಮೀ ಸಾಗಿದರೆ ಹಿಂದಿನ ಕಾಲದಲ್ಲಿ ನಿರ್ಮಿಸಿರುವ ಕಲ್ಲಿನ ಮೆಟ್ಟಿಲುಗಳು ಸಿಗುತ್ತದೆ. ಗವಿಗುಡ್ಡದ ಹಿಂಭಾಗದಲ್ಲಿ ಬೆಟ್ಟದಮನೆ ಗ್ರಾಮದ ಕನ್ನೆಹಳ್ಳಿ ರಸ್ತೆಯಿಂದ ಹಳೆ ಕಾಲದ ಕಲ್ಲಿನ ಮೆಟ್ಟಿಲುಗಳಿವೆ. ಆ ಮೆಟ್ಟಿಲಲ್ಲ 1 ಕಿಮೀ ಎತ್ತರಕ್ಕೆ ಸಾಗಿದರೆ ಗವಿಯಜ್ಜನ ದೇವಸ್ಥಾನ ಸಿಗುತ್ತದೆ. ಅಲ್ಲಿಗೆ ಪ್ರತಿ ದಿನ ಕನ್ನೆಹಳ್ಳಿಯಿಂದ ಪುರೋಹಿತರೊಬ್ಬರು ಪೂಜೆಗಾಗಿ ದೇವಸ್ಥಾನಕ್ಕೆ ತೆರಳುತ್ತಾರೆ. ಗವಿಯಜ್ಜನ ದೇವಸ್ಥಾನದಿಂದ ಅರ್ಧ ಕಿಮೀ ಎತ್ತರಕ್ಕೆ ಬಂಡೆ ಕಲ್ಲಿನಲ್ಲಿ ಹತ್ತಿ ಹೋದರೆ ಗವಿಗುಡ್ಡದ ತುದಿ ತಲುಪಬಹುದು. ಅಲ್ಲಿಗೆ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಬಹುತೇಕ ಭೂ ಭಾಗ ಕಾಣಬಹುದಾಗಿದೆ.
ಸಂಘಟಿತರಾದ ಗ್ರಾಮಸ್ಥರು ಗವಿಗುಡ್ಡಕ್ಕೆ ರಸ್ತೆ ನಿರ್ಮಿಸುವ ಯೋಜನೆ ರೂಪಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ತಿಳಿದು ಗ್ರಾಮಸ್ಥರೇ ಒಟ್ಟಾಗಿ ರಸ್ತೆ ನಿರ್ಮಿಸೋಣ ಎಂಬ ತೀರ್ಮಾನಿಸಿ ಅವರವರ ಕೈಲಾದಷ್ಟು ಹಣ ಹಾಕಿ, 1ಲಕ್ಷ ರೂ. ಸಂಗ್ರಹಿಸಿ 4 ಕಿ.ಮೀ ಉದ್ದಕ್ಕೂ ಕಾಡು ಕಡಿದು ಜೆಸಿಬಿ ತಂದು ರಸ್ತೆ ನಿರ್ಮಿಸಿದ್ದಾರೆ. ಇದರಿಂದ ಜಾನುವಾರುಗಳು ಹಾಗೂ ಟ್ರಕಿಂಗ್ ತೆರಳುವವರು ಕಾಡು ದಾರಿ ಹಿಡಿಯಬೇಕಾಗಿಲ್ಲ. ರಸ್ತೆ ನಿರ್ಮಾಣವಾಗಿರುವುದರಿಂದ ನೈಸರ್ಗಿಕವಾದ ಪ್ರವಾಸಿ ತಾಣಕ್ಕೆ ಮತ್ತು ಅಲ್ಲಿರುವ ಗವಿಯಜ್ಜನ ದೇವಸ್ಥಾನಕ್ಕೆ ವಿಶೇಷ ಕಳೆ ಬಂದಿದೆ. ರಸ್ತೆ ನಿರ್ಮಿಸಿರುವ ಗ್ರಾಮಸ್ಥರ ಶ್ರಮಕ್ಕೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ರಸ್ತೆ ನಿರ್ಮಾಣ ಕಾರ್ಯದಲ್ಲಿ ಮಂಜುನಾಥ್, ಪುನೀತ್, ಹರಿಭಾರ್ಗವ, ಚೆನ್ನಕೇಶವ, ಕೆ.ಈ.ರಮೇಶ್, ಕೆ.ಕೆ.ಚಂದ್ರಪ್ಪ, ಜಯಪ್ಪ, ಪರಮೇಶ್ವರ್ ಇದ್ದರು.