

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಕೆಮ್ರಾಲ್ ಗ್ರಾಪಂ 2025-26ನೇ ಸಾಲಿನ ಮೊದಲ ಹಂತದ ಗ್ರಾಮಸಭೆ ಪಂಚಾಯಿತಿ ಸಮುದಾಯ ಭವನದಲ್ಲಿ ಮಂಗಳವಾರ ನಡೆಯಿತು. ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಮಾರ್ಗ ಅಭಿವೃದ್ಧಿಗೆ ಅನುದಾನ: ಅತ್ತೂರು ಅರಸುಕುಂಜಿರಾಯ ದೈವಸ್ಥಾನ ಬಳಿ ಖಾಸಗಿಯವರು ರಸ್ತೆ ಬದಿಯ ಜಾಗ ಆಕ್ರಮಿಸುತ್ತಿದ್ದಾರೆ ಎಂದು ಪ್ರಸನ್ನ ಶೆಟ್ಟಿ ಆರೋಪಿಸಿದರು. ಈ ಬಗ್ಗೆ ಉತ್ತರಿಸಿದ ಗ್ರಾಮ ಕರಣಿಕ ಸುರೇಶ್, ಪಿಡಿಒ ಮತ್ತು ನಾನು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸುತ್ತೇವೆ ಎಂದರು. ಪಕ್ಷಿಕೆರೆಯಿಂದ ಪಂಜಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದರ ಬಗ್ಗೆ ಗಮನಹರಿಸಬೇಕು ಎಂದು ತಾರಾ ಶೆಟ್ಟಿ ಪಂಜ ಹೇಳಿದರು. ಉತ್ತರಿಸಿದ ಇಂಜಿನಿಯರ್ ಪ್ರಶಾಂತ್ ಅಳ್ವ ಇದಕ್ಕೆ 30 ಲಕ್ಷ ರೂ. ಶಾಸಕರ ಅನುದಾನ ಬಂದಿದ್ದು, ಮಳೆ ಕಡಿಮೆಯಾದ ಕೂಡಲೇ ಡಾಂಬರೀಕರಣ ಮಾಡಲಾಗುವುದು ಎಂದರು.
ಕೃಷಿ ಪರಿಹಾರ ಪ್ರಯತ್ನ: ಈ ಬಾರಿ ಬಹಳಷ್ಟು ಕೃಷಿ ಹಾನಿಯಾಗಿದೆ ಇದಕ್ಕೆ ಪರಿಹಾರ ನೀಡುತ್ತೀರಾ ಎಂದು ಸುರೇಶ್ ಪಂಜ ಕೇಳಿದರು. ಈ ಬಗ್ಗೆ ಅರ್ಜಿ ಸಲ್ಲಿಸಿ ಪರೀಶೀಲನೆ ನಡೆಸುತ್ತೇವೆ ಎಂದು ಕೃಷಿ ಅಧಿಕಾರಿ ಹೇಳಿದರು. ಹಿಂದು ರುದ್ರ ಭೂಮಿ ಅತ್ತೂರು ನವೀಕರಣ ನಡೆಯಬೇಕು, ಕಟ್ಟಿಗೆ ಹಾಕಲು ಕಟ್ಟಡ ಬೇಕು ಎಂದು ಪ್ರಸನ್ನ ಶೆಟ್ಟಿ ಅತ್ತೂರುಗುತ್ತು ಹೇಳಿದರು. ಉತ್ತರಿಸಿದ ಪಿಡಿಒ ಅರುಣ್ ಪ್ರದೀಪ್ ಡಿಸೋಜ ಇದಕ್ಕೆ ಪ್ರತ್ಯೇಕ ಅನುದಾನ ಇಲ್ಲ, ಈ ಬಗ್ಗೆ ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದು, ಜಿಪಂ ಮೂಲಕ ಶಾಸಕರಿಗೆ ಅನುದಾನ ನೀಡಲು ಸಾಧ್ಯವಿದೆ ಇದಕ್ಕೆ ಪ್ರಯತ್ನಿಸಿ, ಸಣ್ಣಪುಟ್ಟ ಕಾಮಗಾರಿ ಇದ್ದರೆ ಪ್ರಯತ್ನಿಸಲಾಗುವುದು ಎಂದರು.
ತ್ಯಾಜ್ಯ ವಿಲೇವಾರಿ ಸಮಸ್ಯೆ: ಕಾಪಿಕಾಡಿಗೆ ಕಸದ ಗಾಡಿ ಬರುವುದಿಲ್ಲ ಎಂದು ಅಶೋಕ್ ದಾದಿ ಆರೋಪಿಸಿದರು. ಈ ಬಗ್ಗೆ ಗಮನಹರಿಸಿ ಸರಿಪಡಿಸಲಾಗುವುದು ಎಂದು ಪಿಡಿಒ ಉತ್ತರಿಸಿದರು. ಪಂಚಾಯಿತಿ ವಾಹನ ಸರಿ ಇಲ್ಲದ ಕಾರಣ ಕೆಲವೊಂದು ಸಮಸ್ಯೆ ಆಗಿರಬಹುದು, ಇದನ್ನು ಸರಿಪಡಿಸಲಾಗುವುದು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶೈಲ ಕೆ. ನೋಡೆಲ್ ಅಧಿಕಾರಿಯಾಗಿದ್ದರು. ಪಂಚಾಯಿತಿ ಅಧ್ಯಕ್ಷ ಮಯ್ಯದಿ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಗ್ರಾಮಲೆಕ್ಕಿಗ ಕೇಶವ ದೇವಾಡಿಗ, ಕಾರ್ಯದರ್ಶಿ ಹರಿಶ್ಚಂದ್ರ, ಗ್ರಾಮಕರಣಿಕ ಸುರೇಶ್, ಪಂಚಾಯಿತಿ ಉಪಾಧ್ಯಕ್ಷೆ ಶೋಭಾ, ಸದಸ್ಯರಾದ ಸುರೇಶ್ ಪಂಜ, ಜಯಂತಿ ಶೆಟ್ಟಿ, ಕೇಶವ ಪೂಜಾರಿ, ಲೀಲಾ ಕೃಷ್ಣಪ್ಪ, ರೇವತಿ ಶೆಟ್ಟಿಗಾರ್, ಜಾಕ್ಸನ್, ಹರಿಪ್ರಸಾದ್, ಮಾಲತಿ ಆಚಾರ್ಯ, ನಾಗೇಶ್, ಅಮೃತ, ಸುಮಿತ್ರ, ಜಾನೆಟ್ ಮಿಲಿಟಾ, ರಾಜೇಶ್ ಶೆಟ್ಟಿ, ನವೀನ್ ಸಾಲಿಯಾನ್, ಶಶಿ ಸುರೇಶ್, ಜಿಪಂ ಇಂಜಿನೀಯರ್ ಪ್ರಶಾಂತ್ ಅಳ್ವ, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ನಿವೃತ್ತಿ ಹೊಂದಿದ ಹಿರಿಯ ಸಿಬ್ಬಂದಿ ಸುಜಾತಾ, ಆಶಾ ಕಾರ್ಯಕರ್ತೆ ಹೇಮಲತಾ, ವರ್ಗಾವಣೆಯಾದ ಕಿರಿಯ ಆರೋಗ್ಯ ಸಹಾಯಕಿ ಪೂರ್ಣಿಮಾ, ಲ್ಯಾಬ್ ಟೆಕ್ನಿಶಿಯನ್ ಶಂಕರಿ ಅವರನ್ನು ಗೌರವಿಸಲಾಯಿತು.