ರಸ್ತೆ ಬದಿ ಕೋಳಿ ತ್ಯಾಜ್ಯ ವಿಲೇವಾರಿ, ಚಿಕ್ಕೊಂಡಹಳ್ಳಿಯ ದಲಿತ ಕಾಲನಿ ಜನತೆಗೆ ಸಂಕಷ್ಟ, ಮಿತಿಮೀರಿದ ಬೀದಿನಾಯಿಗಳ ಕಾಟ

22 Nandagudi 1 Thyjya
Published on

ನಂದಗುಡಿ: ನೆಲವಾಗಿಲು ಗ್ರಾಪಂ ವ್ಯಾಪ್ತಿಯ ಚಿಕ್ಕೊಂಡಹಳ್ಳಿಯ ದಲಿತ ಕಾಲನಿಯ ರಸ್ತೆ ಬದಿಗಳಲ್ಲಿ ರಾತ್ರಿ ವೇಳೆ ಅಕ್ರಮವಾಗಿ ಕೋಳಿ, ಮಾಂಸ ತ್ಯಾಜ್ಯ ಸುರಿಯಲಾಗುತ್ತಿದೆ.

ಶಿಡ್ಲಘಟ್ಟ ತಾಲೂಕಿನ ಎಚ್ ಕ್ರಾಸ್‌ನಲ್ಲಿ ನಾಲ್ಕು ರಸ್ತೆಗಳು ಹಾದು ಹೋಗುತ್ತವೆ. ಎರಡು ರಸ್ತೆಗಳು ಹೊಸಕೋಟೆ ಹಾಗೂ ಶಿಡ್ಲಘಟ್ಟ ತಾಲೂಕಿನ ವ್ಯಾಪ್ತಿಗೆ ಸೇರುತ್ತವೆ. ಚಿಕ್ಕೊಂಡಹಳ್ಳಿ ದಲಿತ ಕಾಲನಿ ಗಡಿ ಭಾಗದಲ್ಲಿದೆ. ಎಚ್ ಕ್ರಾಸ್ ವ್ಯಾಪ್ತಿಯ ಕೋಳಿ ಅಂಗಡಿಗಳು ಪ್ರತಿನಿತ್ಯ ದಲಿತ ಕಾಲನಿಗೆ ಹಾದುಹೋಗುವ ರಸ್ತೆಯಲ್ಲಿ ತ್ಯಾಜ್ಯ ಸುರಿದು ಪರಿಸರ ಹಾಳು ಮಾಡುತ್ತಿದ್ದಾರೆ.

ಮಾಂಸದ ತ್ಯಾಜ್ಯ ತಿನ್ನಲು ಬೀದಿನಾಯಿಗಳ ದಂಡೇ ಸೇರುತ್ತಿವೆ. ಕಾಗೆಗಳು ಮತ್ತು ಹದ್ದುಗಳ ಹಿಂಡು ಕೂಡ ಹಾವಳಿ ಇಕ್ಕುವುದರಿಂದ ಈ ರಸ್ತೆಯಲ್ಲಿ ಜನರು ಜೀವ ಕೈಯಲ್ಲಿ ಇಡಿದುಕೊಂಡು ಓಡಾಡುವಂತಾಗಿದೆ.

ಪ್ರದೇಶ ವ್ಯಾಪಿಸಿದ ದುರ್ವಾಸನೆ: ಮಾಂಸ ತ್ಯಾಜ್ಯ ಕೊಳೆದು ಇಡೀ ಪ್ರದೇಶದಲ್ಲಿ ದುರ್ವಾಸನೆ ಹಬ್ಬಿದೆ. ಹಾಗಾಗಿ ಇಲ್ಲಿ ಮೂಗು ಮುಚ್ಚಿಕೊಂಡು ಓಡಾಡುವುದು ಅನಿವಾರ್ಯವಾಗುತ್ತಿದೆ. ಜತೆಗೆ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವೂ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಟನ್‌ಗಟ್ಟಲೆ ತ್ಯಾಜ್ಯ ಸಂಗ್ರಹ: ಈ ರಸ್ತೆಯ ಬದಿಗಳಲ್ಲಿ ಟನ್‌ಗಟ್ಟಲೆ ಮಾಂಸ ತ್ಯಾಜ್ಯ ಸಂಗ್ರಹವಾಗಿದೆ. ಇದನ್ನು ತೆರವುಗೊಳಿಸಲು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಆದ್ದರಿಂದ, ಜನರ ಬದುಕು ಹಾಳಾಗಿದೆ. ತ್ಯಾಜ್ಯ ತಿನ್ನಲು ಬರುವ ಬೀದಿನಾಯಿಗಳ ದಂಡು ಜನರ ಮೇಲೆ ಎರಗುತ್ತವೆ. ಇದರಿಂದಾಗಿ ಹಲವು ಅಪಘಾತಗಳು ಆಗಿವೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತ್ಯಾಜ್ಯ ತಂದು ಸುರಿಯುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಕೋಳಿ ಅಂಗಡಿ ಮಾಲೀಕರು ಮಾಂಸದ ತ್ಯಾಜ್ಯವನ್ನು ರಾತ್ರಿ ವೇಳೆ ತಂದು ಮನೆಯ ಪಕ್ಕದಲ್ಲೇ ಸುರಿಯುತ್ತಾರೆ. ಇದರಿಂದ ದುರ್ವಾಸನೆ ಬರುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡುವುದು ಅನಿವಾರ್ಯವಾಗಿದೆ. ಹಗಲಿನಲ್ಲಿ ಸೊಳ್ಳೆ ಮತ್ತು ನೊಣಗಳ ಕಾಟ ವಿಪರೀತವಾಗಿದೆ. ನೆಲವಾಗಿಲು ಹಾಗೂ ಕುಂಭಿಗಾನಹಳ್ಳಿ ಪಂಚಾಯಿತಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಪದ್ಮಾವತಿ, ಚಿಕ್ಕೊಂಡಹಳ್ಳಿ ದಲಿತ ಕಾಲನಿ ನಿವಾಸಿ ಕೋಳಿ ಅಂಗಡಿಗಳು ಕುಂಭಿಗಾನಹಳ್ಳಿ ಪಂಚಾಯತಿಗೆ ಸೇರುತ್ತವೆ. ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಚಿಕ್ಕೊಂಡಹಳ್ಳಿ ದಲಿತ ಕಾಲನಿಯ ಬಳಿ ಸುರಿಯುತ್ತಿರುವುದು ಗಮನಕ್ಕೆ ಬಂದಿದೆ. ಸ್ಥಳ ಪರಿಶೀಲನೆ ನಡೆಸಿ ಕೋಳಿ ಅಂಗಡಿ ಮಾಲೀಕರ ಮೇಲೆ ಕಾನೂನ ಕ್ರಮ ಕೈಗೊಳ್ಳಲಾಗುವುದು. ಮುನಿರಾಜು, ನೆಲವಾಗಿಲು ಗ್ರಾಪಂ ಪಿಡಿಒ ಪಂಚಾಯಿತಿ ವತಿಯಿಂದ ಲೈಸನ್ಸ್ ಪಡೆಯದೆ ಕೋಳಿ ಅಂಗಡಿಗಳನ್ನು ನಡೆಸಲಾಗುತ್ತಿದೆ. ರಸ್ತೆ ಬದಿಗಳಲ್ಲಿ ಕೋಳಿ ತ್ಯಾಜ್ಯವನ್ನು ಸುರಿಯುತ್ತಿರುವುದು ಗಮನಕ್ಕೆ ಬಂದಿದೆ. ಅಂಗಡಿ ಮಾಲೀಕರಿಗೆ ತುರ್ತಾಗಿ ನೋಟಿಸ್ ನೀಡಿ, ಪೊಲೀಸರಿಗೆ ದೂರು ನೀಡಲಾಗುವುದು. ನಯನಾ, ಶಿಡ್ಲಘಟ್ಟ ತಾ. ಕುಂಭಿಗಾನಹಳ್ಳಿ ಗ್ರಾಪಂ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net