ಮಡಿಕೇರಿಯಲ್ಲಿ ಅಮಿತ್ ಷಾ ರೋಡ್ ಶೋ

20230429142322_IMG_0186-01
Published on

ಮಡಿಕೇರಿ:

ಕೇಂದ್ರ ಗೃಹಸಚಿವ ಅಮಿತ್ ಷಾ ಶನಿವಾರ ಮಡಿಕೇರಿಯಲ್ಲಿ ರೋಡ್ ಶೋ ನಡೆಸುವ ಮೂಲಕ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಮತ್ತು ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಕೆ.ಜಿ. ಬೋಪಯ್ಯ ಪರ ಮತ ಯಾಚಿಸಿದರು. ಸುಮಾರು ೨ ಗಂಟೆಗಳಷ್ಟು ತಡವಾಗಿ ಆಗಮಿಸಿದ ಕಾರಣ ರೋಡ್‌ಶೋ ಮೊಟಕುಗೊಳಿಸಿ ಉಡುಪಿ ಕಡೆ ಪ್ರಯಾಣ ಬೆಳೆಸಿದರು. ಬಿಜೆಪಿ, ಮೋದಿ ಹಾಗೂ ಅಮಿತ್ ಷಾ ಪರ ಘೋಷಣೆಗಳು ಮಡಿಕೇರಿಯ ಬೀದಿಗಳಲ್ಲಿ ಅನುರಣಿಸಿದವು.

ಮಾರುಕಟ್ಟೆ ಬಳಿಯ ಚೌಡೇಶ್ವರಿ ದೇವಾಲಯದಿಂದ ಟೋಲ್‌ಗೇಟ್‌ನ ಜ. ತಿಮ್ಮಯ್ಯ ವೃತ್ತದ ತನಕ ಅಮಿತ್ ಷಾ ಅವರ ರೋಡ್ ಶೋ ನಿಗದಿಯಾಗಿತ್ತು. ಆದರೆ ಬೆಳಗ್ಗೆ ೧೦.೩೦ಕ್ಕೆ ಆಗಮಿಸಿಬೇಕಿದ್ದ ಅಮಿತ್ ಷಾ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ವಾಹನ ಏರುವ ವೇಳೆಗೆ ಮಧ್ಯಾಹ್ನ ೧೨.೪೦ ಆಗಿತ್ತು. ತಡವಾದರೂ ನೆಚ್ಚಿನ ನಾಯಕನನ್ನು ನೋಡಲು ಕಾದಿದ್ದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಅಮಿತ್ ಷಾ ಇದ್ದ ವಾಹನ ಹೊರಡುತ್ತಿದ್ದಂತೆಯೇ ಹೂವು ಚೆಲ್ಲಿ, ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಕೊಡವ ಸಾಂಪ್ರದಾಯಿಕ ವಾಲಗ, ಜಾನಪದ ನೃತ್ಯ ತಂಡಗಳ ರೋಡ್ ಶೋಕ್ಕೆ ಮೆರುಗು ನೀಡಿದವು. ಆರಂಭದಲ್ಲಿ ವಾಹನ ಏರುವ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ನೀಡಿದ ಕೊಡವ ಪೇಟ ಧರಿಸಿ ಅಮಿತ್ ಷಾ ಗಮನ ಸೆಳೆದರು.

ರೋಡ್ ಶೋ ಉದ್ದಕ್ಕೂ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಅಮಿತ್ ಷಾ ಜತೆಯಲ್ಲಿ ಪ್ರಚಾರ ವಾಹನದಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಜಿಲ್ಲಾ ಪ್ರಭಾರಿ ಪ್ರತಾಪ್ ಸಿಂಹ ನಾಯಕ್ ದಾರಿಯುದ್ದಕ್ಕೂ ಸಾರ್ವಜನಿಕರಿಗೆ ಕೈ ಬಿಸುತ್ತಾ, ವಿಜಯದ ಸಂಕೇತ ತೋರಿಸುತ್ತಾ ಸಾಗಿ ಬಂದರು. ರಸ್ತೆಯ ಅಕ್ಕಪಕ್ಕದ ಮನೆಗಳ ಮೇಲಿದ್ದ ಮಹಿಳೆಯರು ಅಮಿತ್ ಷಾ ಅವರಿಗೆ ಕೈ ಬೀಸಿ ಖುಷಿ ಪಟ್ಟರು.

ರೋಡ್ ಶೋ ವೇಳೆ ಅಮಿತ್ ಷಾ ಮಾತ್ರವಲ್ಲದೆ ಬಿಜೆಪಿ, ನರೇಂದ್ರ ಮೋದಿ, ಜಿಲ್ಲೆಯ ಇಬ್ಬರು ಶಾಸಕರ ಪರವಾಗಿ ಘೋಷಣೆಗಳು ಕೇಳಿಬಂದವು. ನಳೀನ್ ಕುಮಾರ್ ಕಟೀಲ್ ಮತ್ತು ಪ್ರತಾಪ್ ಸಿಂಹ ರೋಡ್ ಶೋದಲ್ಲಿ ಸಾಗುತ್ತಿದ್ದವರಿಗೆ ಹುರಿದುಂಬಿಸುತ್ತಿದ್ದ ದೃಶ್ಯ ಕಂಡು ಬಂತು. ಕಾರ್ಯಕರ್ತರು ಮತ್ತು ಅಭಿಮಾನಿಗಳು ಬಿಜೆಪಿಯ ಹಾಡುಗಳಿಗೆ ರಸ್ತೆಯಲ್ಲಿ ಕುಣಿದು ಕುಪ್ಪಳಿಸುತ್ತಾ ಸಾಗಿದರು.

ಜ. ತಿಮ್ಮಯ್ಯ ವೃತ್ತದ ತನಕ ನಡೆಯಬೇಕಿದ್ದ ರೋಡ್ ಶೋವನ್ನು ಅಮಿತ್ ಷಾ ಮಧ್ಯಾಹ್ನ ೧.೩೦ಕ್ಕೆ ಉಡುಪಿಗೆ ತೆರಳಬೇಕಿದ್ದ ಹಿನ್ನೆಲೆಯಲ್ಲಿ ಹಳೆಯ ಖಾಸಗಿ ಬಸ್ ನಿಲ್ದಾಣಕ್ಕೆ ಮೊಟಕುಗೊಳಿಸಲಾಯಿತು. ಇದರಿಂದಾಗಿ ಷಾ ಅವರನ್ನು ನೋಡಲು ಟೋಲ್ ಗೇಟ್ ಬಳಿ ಕಾದಿದ್ದ ಅಭಿಮಾನಿಗಳು, ಕಾರ್ಯಕರ್ತರು ನಿರಾಸೆ ಅನುಭವಿಸುವಂತಾಯಿತು.
ಎಂಎಲ್‌ಸಿ ಸುಜಾ ಕುಶಾಲಪ್ಪ, ಮಾಜಿ ಎಂಎಲ್‌ಸಿ ಸುನಿಲ್ ಸುಬ್ರಹ್ಮಣಿ, ಎಸ್.ಜಿ. ಮೇದಪ್ಪ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಸೇರದಿಂತೆ ಬಿಜೆಪಿಯ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net