

ಮಂಗಳೂರು: ಪ್ರತಿ ವರ್ಷ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸುಮಾರು 900ರಷ್ಟು ಅಪಘಾತಗಳು ವರದಿಯಾಗುತ್ತಿದ್ದು, 125ಕ್ಕಿಂತಲೂ ಅಧಿಕ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಾವಿರಾರು ಮಂದಿ ನೋವು ಅನುಭವಿಸುತ್ತಿದ್ದಾರೆ. ಅಪಘಾತ ಮುಕ್ತ ರಸ್ತೆಗಾಗಿ ಸಂಚಾರ ನಿಯಮ ಪಾಲಿಸುವುದು ಅತೀ ಅವಶ್ಯ ಎಂದು ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಬಿ.ಪಿ.ದಿನೇಶ್ ಕುಮಾರ್ ಹೇಳಿದರು.
ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಅಂಗವಾಗಿ ನಗರದ ಹಂಪನಕಟ್ಟೆಯ ಮಾಂಡವಿ ಮೋಟಾರ್ಸ್‌ನಲ್ಲಿ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ, ಪೊಲೀಸ್ ಇಲಾಖೆ ಮತ್ತು ಮಾಂಡವಿ ಮೋಟಾರ್ಸ್‌ನ ಸಹಯೋಗದೊಂದಿಗೆ ಸಂಚಾರಿಗಳಿಗೆ ಕೆಂಪು ಗುಲಾಬಿ ನೀಡಿ ರಸ್ತೆ ಸುರಕ್ಷಾ ಜಾಗೃತಿ ಮೂಡಿಸಲಾಯಿತು,
ರಸ್ತೆಯಲ್ಲಿ ವಾಹನ ಚಲಾಯಿಸುವಾಗ ರಸ್ತೆ ಶಿಸ್ತನ್ನು ಪಾಲಿಸಲೇಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ, ಹೆಲ್ಮೆಟ್ ಧರಿಸದಿರುವುದು, ಸೀಟು ಬೆಲ್ಟ್ ಧರಿಸದೇ ಇರುವುದು ಇವೆಲ್ಲ ಶಿಕ್ಷಾರ್ಹ ಅಪರಾಧಗಳು. ಈ ನಿಯಮಗಳು ಬರೀ ಪೊಲೀಸರಿಗಾಗಿ ಅಲ್ಲ. ನಿಮ್ಮ ಜೀವನ ರಕ್ಷಣೆಗಾಗಿ ಚಾಲಕರು ಪಾಲಿಸತಕ್ಕದ್ದು. ಎಲ್ಲರೂ ಒಟ್ಟು ಸೇರಿ ರಸ್ತೆ ಸುರಕ್ಷಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ಅಪಘಾತ ರಹಿತ ರಸ್ತೆಗಳನ್ನು ನಿರ್ಮಿಸೋಣ. ಆ ಮೂಲಕ ಬಲಿಷ್ಠ ಮತ್ತು ಆರೋಗ್ಯ ಪೂರ್ಣ ಭಾರತವನ್ನು ಕಟ್ಟೋಣ ಎಂದು ದಿನೇಶ್ ಕುಮಾರ್ ಹೇಳಿದರು.
ದ.ಕ. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಮಾತನಾಡಿ, ರಸ್ತೆ ಸಂಚಾರ ನಿಯಮಗಳನ್ನು ನಿಮಗಾಗಿ ಪಾಲಿಸಿ, ಪೊಲೀಸರಿಗಾಗಿ ಪಾಲಿಸಬೇಡಿ, ಮದ್ಯಪಾನ ಮಾಡಿ, ಡ್ರಗ್ಸ್ ಸೇವಿಸಿ ವಾಹನವನ್ನು ಚಾಲನೆಯನ್ನು ಮಾಡಬೇಡಿ, ನಿಯಮಗಳನ್ನು ದಂಡಕಟ್ಟಲು ಅಲ್ಲ, ನಮ್ಮ ಜೀವವನ್ನು ಉಳಿಸಿಕೊಳ್ಳಲು ನಿಯಮವನ್ನು ಪಾಲಿಸಿ ರಸ್ತೆ ಅಪಘಾತಗಳನ್ನು ತಡೆಯಲು ಬಹಳ ಉತ್ತಮ ಉಪಾಯ ಎಂದರೆ ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸಿ, ಸುರಕ್ಷಿತವಾಗಿ ವಾಹನ ಚಾಲನೆ ಮಾಡುವುದೊಂದೇ ದಾರಿ ಎಂದರು.
ಮಾಂಡೋವಿ ಮೋಟಾರ್ಸ್‌ನ ಉಪಾಧ್ಯಕ್ಷ ಪಾರ್ಶ್ವನಾಥ್, ಸಂಚಾರಿ ಎಸಿಪಿ ಗೀತಾ ಕುಲಕರ್ಣಿ, ಸಂಚಾರಿ ಠಾಣೆಯ ಪೊಲೀಸ್ ನಿರೀಕ್ಷಕರಾದ ಗೋಪಾಲಕೃಷ್ಣ ಭಟ್, ಮಾಂಡೋವಿ ಮೋಟಾರ್ಸ್‌ನ ಡಿಜಿಎಂ ಶಶಿಧರ್ ಕಾರಂತ್, ಸೀನಿಯರ್ ಪ್ಲಟೂನ್ ಕಮಾಂಡರ್ ಮಾರ್ಕ್ ಸೆರಾ, ಮತ್ತು ಮಾಂಡೋವಿ ಮೋಟಾರ್ಸ್‌ನ ಸಿಬ್ಬಂದಿ, ಗೃಹರಕ್ಷಕರಾದ ಸುನಿಲ್ ಕುಮಾರ್, ಜ್ಞಾನೇಶ್, ದಿವಾಕರ್, ಮಂಜುನಾಥ, ಬಬಿತಾ, ಸಂಜಯ್ ಶೆಣೈ, ರಾಜೇಶ್ ಗಟ್ಟಿ, ಮಲ್ಲಿಕಾ ಮುಂತಾದವರು ಭಾಗವಹಿಸಿದ್ದರು.