ದೌರ್ಜನ್ಯ ತಡೆಯುವತ್ತ ದುರ್ಗಾಪಡೆ ಚಿತ್ತ

07 CHN
Published on

ಚನ್ನಗಿರಿ: ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಹಾಗೂ ಸಾರ್ವಜನಿಕರಲ್ಲಿ ಸೈಬರ್ ಅಪರಾಧಗಳ ಅರಿವು ಮೂಡಿಸುವ ನಿಟ್ಟಿಬಲ್ಲಿ ಜಿಲ್ಲಾದ್ಯಂತ ದುರ್ಗಾಪಡೆ ಕಾರ್ಯ ನಿರ್ವಹಿಸಲಿದೆ ಎಂದು ಜಿಲ್ಲಾ ದುರ್ಗಾಪಡೆ ಪಿಎಸ್​ಐ ಪ್ರಮೀಳಾ ತಿಳಿಸಿದರು.

ತಾಲೂಕಿನ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಮಹಿಳಾ ಸಿಬ್ಬಂದಿ ಒಳಗೊಂಡ ದುರ್ಗಾಪಡೆಯು ಅಪ್ರಾಪ್ತ ಮಕ್ಕಳ ಮತ್ತು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ರಕ್ಷಣೆ ಒದಗಿಸಲಿದೆ. ಹಾಗಾಗಿ ತಪ್ಪುಗಳು ಕಂಡುಬಂದಾಗ ಕೂಡಲೇ ಸಹಾಯವಾಣಿಗೆ ಕರೆ ಮಾಡಿ ಎಂದರು.

ಲೈಂಗಿಕ ದೌರ್ಜನ್ಯ, ಮಾದಕ ವ್ಯಸನ, ಸೈಬರ್ ಅಪರಾಧ ವಿಚಾರವಾಗಿ ಜನರಲ್ಲಿ ಅರಿವು ಮೂಡಿಸಬೇಕಿದೆ, ನಿರ್ಗತಿಕ, ಅನಾಥ ಮಕ್ಕಳ ರಕ್ಷಣೆ ದಿಕ್ಕಿನಲ್ಲೂ ದುರ್ಗಾಪಡೆ ಕೆಲಸ ಮಾಡಲಿದೆ ಎಂದರು.

ಸಂಕಷ್ಟದಲ್ಲಿರುವ ಮಹಿಳೆಯರು ಈ ಪಡೆಗೆ ದೂರು ನೀಡಬಹುದು, ಅವರ ರಕ್ಷಣೆಗಾಗಿ ನಿರ್ಭಯಾ ಯೋಜನೆಯಡಿ ಮಹಿಳಾ ಸಿಬ್ಬಂದಿ ಸೇರಿ 15 ಜನ ಸದಸ್ಯರ ತಂಡ ಈ ಪಡೆಯಲ್ಲಿ ಇರುತ್ತಾರೆ ಎಂದರು.

ಶಾಲಾ ಕಾಲೇಜು ವಿದ್ಯಾರ್ಥಿಗಳು ಯಾವುದೇ ಅಕರ್ಷಣೆಗೆ ಒಳಗಾಗಬಾರದು. ಅಗತ್ಯಕ್ಕೆ ತಕ್ಕಷ್ಟು ಮೊಬೈಲ್ ಬಳಸಿ, ದುರುಪಯೋಗ ಪಡಿಸಿಕೊಳ್ಳದಿರಿ. ನಿಮ್ಮ ಗುರಿಯತ್ತ ಹೆಜ್ಜೆ ಹಾಕಿ ಎಂದು ಹೇಳಿದರು.

ಪಿಎಸ್​ಐ ರೂಪ್ಲಿಬಾಯಿ, ಮುಖ್ಯಪೇದೆ ಹೊನ್ನಮ್ಮ, ನೇತ್ರಾವತಿ, ಚೈತ್ರಾ, ಕವಿತಾ, ಆಶಾ, ಅನಿತಾ, ಶಾಲೆಯ ಉಪ ಪ್ರಾಚಾರ್ಯ ಲೋಹಿತಾಶ್ವ, ಶಿಕ್ಷಕರಾದ ರಾಜುನಾಯ್ಕ, ಅಶೋಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net