ರಸ್ತೆ ಸುರಕ್ಷತೆ ವಿದ್ಯಾರ್ಥಿಗಳಿಗೆ ಜಾಗೃತಿ: ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜನೆ

Road Safety Week Mandya
Published on

ಮಂಡ್ಯ: ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹ ಜಾಥಾದಲ್ಲಿ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಪ್ರಾರಂಭವಾದ ಜಾಥಾ, ಆರ್.ಪಿ ರಸ್ತೆ, ನೂರಡಿ ರಸ್ತೆ, ವಿ.ವಿ ರಸ್ತೆ ಮೂಲಕ ಸಂಚರಿಸಿತು. ನೀವು ರಸ್ತೆ ದಾಟುವಾಗ ಎರಡೂ ಕಡೆ ನೋಡಿ, ವಾಹನ ಚಾಲನೆ ಮಾಡುವಾಗ ಅಧಿಕ ವೇಗ ಬೇಡ, ಸೀಟ್ ಬೆಲ್ಟ್ ಧರಿಸಿ ವಾಹನ ಚಲಾಯಿಸಿ, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬೇಡಿ, ಜೀಬ್ರಾ ಕ್ರಾಸಿಂಗ್‌ನಲ್ಲಿ ಪಾದಚಾರಿಗಳಿಗೆ ಆದ್ಯತೆ ನೀಡಿ ಎಂಬ ಫಲಕಗಳನ್ನು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

ಇದಕ್ಕೂ ಮೊದಲು ಜಾಥಾಕ್ಕೆ ಚಾಲನೆ ನೀಡಿದ ಅಪರ ಪೊಲೀಸ್ ವರಿಷ್ಠಾಧಿಕಾರಿ-1 ತಿಮ್ಮಯ್ಯ ಮಾತನಾಡಿ, ದೇಶಾದ್ಯಂತ ಜ.11ರಿಂದ 18 ರವರೆಗೆ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ನಡೆಸಲಾಗುತ್ತದೆ. ಅದರಂತೆ ವಿವಿಧ ಶಾಲೆಯ ವಿದ್ಯಾರ್ಥಿಗಳು, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಹಕಾರದೊಂದಿಗೆ ನಗರದ ಜಾಗೃತಿ ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಚಾರ ನಿಯಮ ಅನುಷ್ಠಾನವನ್ನು ಪೊಲೀಸ್ ಇಲಾಖೆ ತೀವ್ರಗೊಳಿಸಲಿದೆ. ನಿಯಮ ಉಲ್ಲಂಘಿಸಿದರೆ ದಂಡ ಹಾಗೂ ಶಿಸ್ತು ಬದ್ಧ ಕ್ರಮ ಕೈಗೊಳ್ಳುತ್ತೇವೆ. ಮಂಡ್ಯದ ಮುಖ್ಯರಸ್ತೆಗಳಲ್ಲಿ 24 ಕ್ಯಾಮೆರಾ ಅಳವಡಿಸಲು ನಗರಸಭೆಯಿಂದ ಅನುಮೋದನೆ ದೊರೆತಿದೆ. ಅದರಂತೆ ಶೀಘ್ರವೇ ಕ್ಯಾಮೆರಾ ಅಳವಡಿಸಲಾಗುವುದು ಎಂದರು.

ಅಪರ ಪೊಲೀಸ್ ವರಿಷ್ಠಾಧಿಕಾರಿ-2 ಗಂಗಾಧರಸ್ವಾಮಿ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಜಿ.ಪಿ.ಭಕ್ತವತ್ಸಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net