

ಹುಬ್ಬಳ್ಳಿ : ರಸ್ತೆ ಅಪಘಾತದಿಂದ ತಲೆಗೆ ಪೆಟ್ಟಾಗಿ ಮಿದುಳಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಮುಂದುವರೆದ ದೇಶಗಳಿಗೆ ಹೋಲಿಸಿದರೆ ರಸ್ತೆ ಅಪಘಾತ ಮತ್ತು ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ಸಾವಿಗೀಡಾಗುವವರ ಸಂಖ್ಯೆ ಭಾರತದಲ್ಲೇ ಹೆಚ್ಚಿದೆ ಎಂದು ಶ್ರೀ ಬಾಲಾಜಿ ಆಸ್ಪತ್ರೆ ಚೇರ್ಮನ್ ಹಾಗೂ ಖ್ಯಾತ ನರರೋಗ ತಜ್ಞ ಡಾ. ಕ್ರಾಂತಿಕಿರಣ ಹೇಳಿದರು.
ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರದ ವತಿಯಿಂದ "ವಿಶ್ವ ತಲೆ ಗಾಯ ಜಾಗೃತಿ ದಿನ'ದ ಅಂಗವಾಗಿ ಗುರುವಾರದಂದು ಇಲ್ಲಿನ ಬಿವಿಬಿ ಕಾಲೇಜಿನ ಬಯೋಟೆಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಕ್ರಮ ಹಾಗೂ ವಿದ್ಯಾಥಿರ್ಗಳೊಂದಿಗಿನ ಸಂವಾದದಲ್ಲಿ ಅವರು ಮಾತನಾಡಿದರು.
2023ರ ಇಂಡಿಯನ್ ಹೆಡ್ ಇಂಜುರಿ ಫೌಂಡೇಶನ್ ವರದಿ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 1.5 ಮಿಲಿಯನಷ್ಟು ಮೆದುಳಿನ ಗಾಯದ ವರದಿಗಳು ದಾಖಲಾಗುತ್ತಿದ್ದು, 2 ಲಕ್ಷಕ್ಕೂ ಅಧಿಕ ಸಾವು ಸಂಭವಿಸುತ್ತಿವೆ. ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸರಾಸರಿ 15 ರಿಂದ 44 ವರ್ಷ ವಯಸ್ಸಿನವರೆ ಹೆಚ್ಚಾಗಿ ಸಾವೀಗೀಡಾಗುತ್ತಿದ್ದಾರೆ. ಭಾರತದಲ್ಲಿ ರಸ್ತೆ ಅಪಘಾತದಿಂದ ಪ್ರತಿ 6 ನಿಮಿಷಕ್ಕೆ ಒಂದರಂತೆ ಸಾವು ಸಂಭವಿಸುತ್ತಿದೆ. ಮುಂದುವರೆದ ದೇಶಗಳಿಗೆ ಹೋಲಿಸಿದರೆ ರಸ್ತೆ ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ಸಾವನ್ನಪ್ಪುತ್ತಿರುವವರ ಪ್ರಮಾಣ ಭಾರತದಲ್ಲೇ ಹೆಚ್ಚಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಹದಲ್ಲಿ ಲಿವರ್, ಕರಳು ಸೇರಿದಂತೆ ಕೆಲವು ಭಾಗಗಳಿಗೆ ತೊಂದರೆಯಾದರೆ ಕೆಲಕಾಲದ ಚಿಕಿತ್ಸೆ ಬಳಿಕ ಅವು ಮತ್ತೆ ಪುನಶ್ಚೇತನಗೊಳ್ಳುತ್ತವೆ. ಆದರೆ, ಮಿದುಳಿಗೆ ಪರ್ಯಾಯ ಎಂಬುದೇ ಇಲ್ಲವಾದ್ದರಿಂದ ಮಿದುಳಿನ ಯಾವುದೇ ಭಾಗಕ್ಕೆ ಪೆಟ್ಟಾದರೂ ಅದನ್ನು ಮತ್ತೆ ಸರಿಪಡಿಸಲಾಗದು. ಆದ್ದರಿಂದ ವಾಹನ ಚಲಾಯಿಸುವ ಪ್ರತಿಯೊಬ್ಬರೂ ರಸ್ತೆಯಲ್ಲಿ ಸಂಚರಿಸುವಾಗ ಅತ್ಯಂತ ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದರು.
2023ರ ಅಂಕಿ ಅಂಶಗಳ ಪ್ರಕಾರ ಹುಬ್ಬಳ್ಳಿ- ಧಾರವಾಡದಲ್ಲಿ ಸಂಭವಿಸಿದ 185 ರಸ್ತೆ ಅಪಘಾತಗಳ ಪೈಕಿ 156 ಜನ ಸಾವನ್ನಪ್ಪಿದ್ದಾರೆ. ಹೆಲ್ಮೆಟ್, ಸೀಟ್ ಬೆಲ್ಟ್ ರಹಿತ ಪ್ರಯಾಣವೇ ಇದಕ್ಕೆಲ್ಲ ಮುಖ್ಯ ಕಾರಣವಾಗಿದೆ. ಆದ್ದರಿಂದ ಪ್ರತಿ ಸವಾರರು ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.
ಉದ್ಘಾಟಿಸಿ ಮಾತನಾಡಿದ ಕೆಎಲ್ಇ ತಾಂತ್ರಿಕ ವಿವಿಯ ಉಪ ಕುಲಪತಿ ಡಾ. ಅಶೋಕ ಶೆಟ್ಟರ, ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವು, -ನೋವುಗಳ ಪ್ರಮಾಣ ಆತಂಕ ತರಿಸುವಂತದ್ದಾಗಿದೆ ಎಂದರು.
ನಂತರ ವಿದ್ಯಾಥಿರ್ಗಳೊಂದಿಗೆ ಸಂವಾದ ನಡೆಯಿತು. ಇದೇ ಸಂದರ್ಭದಲ್ಲಿ ಲಕ್ಕಿಡಿಪ್ ಮೂಲಕ ಐವರು ಅದೃಷ್ಟಶಾಲಿ ವಿದ್ಯಾಥಿರ್ಗಳಿಗೆ ಹೆಲ್ಮೆಟ್ ವಿತರಿಸಲಾಯಿತು.
ಬಿವಿಬಿ ಕಾಲೇಜಿನ ವಿಭಾಗದ ಮುಖ್ಯಸ್ಥರಾದ ಎಂ.ಆರ್. ಪಾಟೀಲ, ಸಂಜೀವ ಕೊಟಬಾಗಿ, ಕನಕದಾಸ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸಂದೀಪ ಬೂದಿಹಾಳ, ಬಾಲಾಜಿ ಆಸ್ಪತ್ರೆ ವೈದ್ಯರಾದ ಡಾ. ವಿಶ್ವನಾಥ ಕಮತಗಿ, ಡಾ. ಆದಿತ್ಯ ಬಿಸ್ವಾಸ್ ಹಾಗೂ ಇತರರು ಇದ್ದರು.