

ಮಂಡ್ಯ: ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವೇಳೆ ನಿಯಮ ಉಲ್ಲಂಘಿಸುವವರಿಂದ ದಂಡ ವಸೂಲಿ ಮಾಡಲು ಹೊಸ ವಿಧಾನ ರೂಪಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಂ-ಮೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸುಮಾರು 4 ರಿಂದ 5 ಕೋಟಿ ರೂವರೆಗೆ ದಂಡ ವಿಧಿಸಲಾಗಿದೆ. ಅಂದರೆ ದಿನಕ್ಕೆ 60 ರಿಂದ 70 ಸಾವಿರ ರೂ ಮಾತ್ರ ಸಂಗ್ರಹಣೆ ಮಾಡಲಾಗಿದೆ. ದಂಡ ಸಂಗ್ರಹಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಷ್ಟಕರ. ಆದ್ದರಿಂದ ಹೊಸ ವಿಧಾನಗಳ ಬಗ್ಗೆ ಚಿಂತಿಸಿ ವಸೂಲಿ ಮಾಡಬೇಕು ಎಂದರು.
ನಿಯಮ ಉಲ್ಲಂಘನೆ ಮಾಡುವವರಿಗೆ ಆನ್‌ಲೈನ್‌ನಲ್ಲಿಯೇ ದಂಡ ವಿಧಿಸಲಾಗುತ್ತಿದೆ. ಆದರೆ ವಸೂಲಿ ಆಗುತ್ತಿಲ್ಲ. ಬೇರೆ ರಾಜ್ಯದ ವಾಹನಗಳು ನಿಯಮ ಉಲ್ಲಂಘಿಸಿದಾಗ ದಂಡ ವಿಧಿಸಿದರೂ ವಸೂಲಿ ಮಾಡುವುದು ಕಷ್ಟ. ಆದ್ದರಿಂದ ಆರ್‌ಟಿಒ ಅಥವಾ ಸಂಚಾರ ಪೊಲೀಸರ ಮೂಲಕ ಸಾಧ್ಯವಾದಷ್ಟು ವಸೂಲಿಗೆ ಕ್ರಮ ವಹಿಸಬೇಕು. ಇದರಿಂದಾಗಿ ನಿಯಮ ಪಾಲನೆ ಬಗ್ಗೆ ವಾಹನ ಚಾಲಕರು ನಿಗಾ ವಹಿಸುತ್ತಾರೆ ಎಂದು ಹೇಳಿದರು.
ಇನ್ನು ಸಂಚಾರ ನಿಯಮ ಉಲ್ಲಂಘನೆಯಿಂದ ಸಂಗ್ರಹವಾಗುವ ದಂಡದ ಹಣವನ್ನು ರಸ್ತೆ ಸುರಕ್ಷತಾ ಸಮಿತಿ ರೂಪಿಸುವ ಕಾಮಗಾರಿಗಳಿಗೆ ವೆಚ್ಚ ಮಾಡಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಿದೆ. ಈ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆಯ ನಡಾವಳಿಯನ್ನು ಕೇಂದ್ರ ಕಚೇರಿ ಅಥವಾ ಸರ್ಕಾರಕ್ಕೆ ಕಳುಹಿಸುವಾಗ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಂಡರ್‌ಪಾಸ್ ನಿರ್ಮಾಣ, ಸರ್ವೀಸ್ ರಸ್ತೆಯಲ್ಲಿ ಒಳಚರಂಡಿ ನಿರ್ಮಾಣದ ಉಳಿದ ಕೆಲಸ, ರಸ್ತೆಯಲ್ಲಿ ಬೇಕಿರುವ ಹೆಚ್ಚುವರಿ ಸಂಚಾರ ನಿಯಮ ಫಲಕಗಳ ಬಗ್ಗೆ ನಮೂದಿಸಿ ಕಳುಹಿಸುವಂತೆ ಸೂಚನೆ ನೀಡಿದರು.
ಮುಖ್ಯವಾಗಿ ಜಿಲ್ಲೆಯಲ್ಲಿ ಅಪಘಾತ ಸಂಭವಿಸುವ ವಲಯಗಳಲ್ಲಿ ಸಂಚಾರ ನಿಯಮದ ಬೋರ್ಡ್‌ಗಳ ಅಳವಡಿಕೆ, ಸಿಗ್ನಲ್ ಲೈಟ್ ಗಳ ದುರಸ್ತಿ, ನಿರ್ವಹಣೆ ಹಾಗೂ ಅಳವಡಿಕೆ, ಸಿ.ಸಿ ಕ್ಯಾಮೆರಾ ಅಳವಡಿಕೆಗೆ ಸಂಬಂಧಿಸಿದಂತೆ ಯೋಜನೆ ಸಿದ್ಧಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಸ್ತಾಪವನ್ನು ಸರ್ಕಾರಕ್ಕೆ ಕಳುಹಿಸಿಕೊಡಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಹರ್ಷ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಕೆಎಸ್‌ಆರ್‌ಟಿಸಿ ಜಿಲ್ಲಾ ನಿಯಂತ್ರಕ ನಾಗರಾಜು, ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್ ಇತರರಿದ್ದರು.