ಓವರ್ ಲೋಡಿಂಗ್ ವಾಹನಕ್ಕೆ ದಂಡ ವಿಧಿಸಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸೂಚನೆ

Road Safety Committee Meeting mandya
Published on

ಮಂಡ್ಯ: ಜಲ್ಲಿ ಮುಂತಾದ ವಸ್ತುಗಳನ್ನು ಸಾಗಾಣಿಕೆ ಮಾಡುವ ಲಾರಿ, ಟಿಪ್ಪರ್‌ಗಳು ಹಿಂದೆ ಮುಚ್ಚುತ್ತಿಲ್ಲ. ಇದರಿಂದಾಗಿ ಧೂಳು ಹೊರಬರುತ್ತಿದ್ದು, ಹಿಂದೆ ಚಲಿಸುವ ವಾಹನಗಳಿಗೆ ತೊಂದರೆಯಾಗುತ್ತದೆ. ಇಂತಹ ಓವರ್ ಲೋಡಿಂಗ್ ವಾಹನಗಳನ್ನು ಪರಿಶೀಲಿಸಿ ದಂಡ ವಿಧಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದಲೂ ಸಹ ವಾಹನದ ವೇಗದ ಮಿತಿ ಬಗ್ಗೆ ತಿಳಿಯಲು ಸಿ.ಸಿ ಕ್ಯಾಮರಾ ಅಳವಡಿಸಲಾಗುವುದು. ಇದಕ್ಕೆ ಸ್ಥಳ ಗುರುತಿಸಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜಿಲ್ಲೆಯಲ್ಲಿ 34 ಅಪಘಾತ ವಲಯಗಳನ್ನು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತಾ ಸಮಿತಿ ವತಿಯಿಂದ ಅಪಘಾತ ವಲಯ ಸುಧಾರಣೆಗೆ ನಿಖರವಾಗಿ ಯೋಜನೆ ಸಿದ್ಧಪಡಿಸಿ ಕಳುಹಿಸಿದರೆ ಅನುದಾನ ದೊರೆಯಲಿದೆ. ದಿನೆ ದಿನೇ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ರಸ್ತೆ ಸುರಕ್ಷತೆ ಬಗ್ಗೆ ಗಮನಹರಿಸಿ ಸಾರ್ವಜನಿಕ ವಲಯದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿ. ಬೆಂ-ಮೈ ರಾಷ್ಟ್ರೀಯ ಹೆದ್ದಾರಿಯ ಇಂಡುವಾಳು, ನಿಡಘಟ್ಟ ಸರ್ವೀಸ್ ರಸ್ತೆಗಳಲ್ಲಿ ಒಳ ಚರಂಡಿ ಕೆಲಸಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಕೆಲ ಕಾಮಗಾರಿಗಳು ಪ್ರಾರಂಭವಾಗಿಲ್ಲ. ಮುಂದಿನ ದಿನಗಳಲ್ಲಿ ಚುನಾವಣೆ ನೀತಿ ಸಂಹಿತೆ ಕೆಲಸ ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಗದಿಪಡಿಸಿರುವಂತೆ ಕಾಮಗಾರಿ ಪ್ರಾರಂಭಿಸಿ ಎಂದು ಸೂಚಿಸಿದರು.

ಹೆದ್ದಾರಿಯಲ್ಲಿ ವೇಗದ ಮಿತಿಗೆ ಕಡಿವಾಣ ಹಾಕಲು ಅಳವಡಿಸಿರುವ ಸಿ.ಸಿ ಕ್ಯಾಮರಾ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವುಗಳನ್ನು ಕೂಡಲೇ ಸರಿಪಡಿಸಿ. ಹೆದ್ದಾರಿಯಲ್ಲಿ ವಾಹನಗಳ ಆಗಮನ, ನಿರ್ಗಮನದ ಬಳಿ ಸಿಬ್ಬಂದಿ ನಿಯೋಜಿಸಿ. ಇದರಿಂದ ವಿರುದ್ಧ ದಿಕ್ಕುಗಳಲ್ಲಿ ವಾಹನ ಚಾಲನೆ ತಡೆಯಬಹುದು. ಜತೆಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬಹುದು. ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆ ಸುರಕ್ಷತಾ ನಿಯಮ ಪಾಲಿಸುತ್ತಿಲ್ಲ ಎಂದು ದೂರುಗಳು ಬರುತ್ತಿವೆ. ಆದ್ದರಿಂದ ವಾಹನ ಚಾಲಕರು ರಸ್ತೆ ನಿಯಮ ಪಾಲಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಜತೆಗೆ ಕೆಎಸ್‌ಆರ್‌ಟಿಸಿ ವಾಹನ ಚಾಲಕರಿಗೆ ರಸ್ತೆ ನಿಯಮದ ಬಗ್ಗೆ ಪೊಲೀಸ್ ಹಾಗೂ ಸಾರಿಗೆ ಇಲಾಖೆಯವರು ಒಂದು ದಿನದ ತರಬೇತಿ ಹಮ್ಮಿಕೊಂಡು ರಸ್ತೆ ನಿಯಮದ ಬಗ್ಗೆ ತಿಳಿಸಿ ಎಂದು ತಿಳಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಹರ್ಷ, ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ರಾಹುಲ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಆರೋಗ್ಯ ಇಲಾಖೆ ಡಾ.ಸೋಮಶೇಖರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net