

ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲೆಯಲ್ಲಿ ರಸ್ತೆ ಅಪಘಾತ ಪ್ರಕರಣಗಳಿಂದ ಅನೇಕ ಸಾವು&-ನೋವು ಉಂಟಾಗುತ್ತಿವೆ. ಅವುಗಳ ನಿಯಂತ್ರಣಕ್ಕೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಅಗತ್ಯವಿರುವ ಅಭಿವೃದ್ಧಿ ಕೆಲಸ ನಡೆಸಿ. ಅಪಘಾತ ಪ್ರಕರಣ ನಿಯಂತ್ರಿಸಿ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸೂಚನೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ರಸ್ತೆ ಅಪಘಾತ ಪ್ರಕರಣ ಪ್ರತಿ ವರ್ಷವೂ ಹೆಚ್ಚುತ್ತಿದೆ. ಕಳೆದ ವರ್ಷ 1,284 ರಸ್ತೆ ಅಪಘಾತ ಪ್ರಕರಣದಲ್ಲಿ 222 ಜನ ಮೃತಪಟ್ಟಿದ್ದು, 1,381 ಪ್ರಕರಣದಲ್ಲಿ ಸಾಮಾನ್ಯ ಹಾಗೂ ತೀವ್ರತರದ ಗಾಯಗಳು ಉಂಟಾಗಿದೆ. ಅವುಗಳಲ್ಲಿ ಹೆಚ್ಚಾಗಿ ಶೇ.90ರಷ್ಟು ಅತಿವೇಗದ ವಾಹನ ಚಾಲನೆ ಹಾಗೂ ಅಜಾಗರೂಕತೆಯಿಂದಲೇ ಉಂಟಾಗಿದೆ. ಕೆಲವು ಅವೈಜ್ಞಾನಿಕ ರಸ್ತೆ ಕಾಮಗಾರಿಗಳಿಂದಲೂ ಆಗಿವೆ ಎಂದರು.
ಪೊಲೀಸ್ ಇಲಾಖೆಯು ಈಗಾಗಲೇ 21 ಸ್ಥಳಗಳನ್ನು ಬ್ಲ್ಯಾಕ್ ಸ್ಪಾಟ್ಗಳೆಂದು ಗುರುತಿಸಿದೆ. ಕಳೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಆ ಸ್ಥಳಗಳ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಹಾಗೂ ಇತರ ಇಲಾಖೆಗಳಿಗೆ ಸೂಚಿಸಲಾಗಿತ್ತು. ಅವುಗಳಲ್ಲಿ ಬಹುತೇಕ ಕಾಮಗಾರಿ ಕೈಗೊಂಡಿರುದಾಗಿ ತಿಳಿಸಿದ್ದೀರಿ. ಪೊಲೀಸ್ ಇಲಾಖೆ ಹಾಗೂ ಎನ್ಎಚ್ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ ಶೀಘ್ರವಾಗಿ ವರದಿ ನೀಡಬೇಕು ಎಂದು ತಾಕೀತು ಮಾಡಿದರು.
ಜಿಲ್ಲೆಯ ಸಾರ್ವಜನಿಕರು ವಾಹನದಲ್ಲಿ ಸಂಚರಿಸುವಾಗ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜಿಲ್ಲಾ ಸಾರಿಗೆ ಪ್ರಾಧಿಕಾರ ಸೂಚಿಸಿರುವ ವೇಗ ಮಿತಿಯಲ್ಲಿ ಸಂಚರಿಸಬೇಕು. ಜಿಲ್ಲೆಯಲ್ಲಿ ಭಾರಿ ಮಳೆ ಬರುತ್ತಿದ್ದು, ರಸ್ತೆಗಳಲ್ಲಿ ಹೊಂಡ ಉಂಟಾಗಿದೆ. ವಿವಿಧೆಡೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಅಂತಹ ಸ್ಥಳಗಳಲ್ಲಿ ನಿಧಾನವಾಗಿ ಹಾಗೂ ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು. ಇಲ್ಲದಿದ್ದಲ್ಲಿ ಅಪಘಾತ ಸಂಭವಿಸಿ ಜೀವಹಾನಿಯಾಗಬಹುದು ಎಂದು ಡಾ. ಕೆ.ವಿದ್ಯಾಕುಮಾರಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಎಎಸ್ಪಿ ಸಿದ್ದಲಿಂಗಪ್ಪ ಟಿ., ಕಾರ್ಯಪಾಲಕ ಅಭಿಯಂತ ಕಿರಣ್ ಎಸ್., ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲ ಮೊಹಮದ್ ಅಜ್ಮಿ, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀನಾರಾಯಣ, ಪೌರಾಯುಕ್ತ ರಾಯಪ್ಪ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಗುರುತಿಸಿರುವ 21 ಬ್ಲ್ಯಾಕ್ ಸ್ಪಾಟ್ಗಳು ಬಹುತೇಕ ಜಂಕ್ಷನ್ಗಳೇ ಆಗಿದ್ದು, ಒಳ ರಸ್ತೆಯಿಂದ ಬರುವ ವಾಹನ ವೇಗವಾಗಿ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸುವುದರಿಂದ ಅಪಘಾತವಾಗುತ್ತಿವೆ. ಅಂತಹ ಸ್ಥಳಗಳಲ್ಲಿ ಪಾದಚಾರಿ ಕ್ರಾಸಿಂಗ್, ಜೀಬ್ರಾ ಕ್ರಾಸಿಂಗ್, ಸೂಚಕ ಫಲಕ ಹಾಗೂ ಅವಶ್ಯಕತೆ ಇದಲ್ಲಿ ಹಂಪ್ಸ್ ಅಳವಡಿಸಿ. ಅಪಘಾತದಿಂದ ಮರಣ ಸಂಖ್ಯೆ ಇಳಿಸಲು ಟ್ರಾಮಾ ಕೇರ್ ಸೆಂಟರ್ಗಳ ಮ್ಯಾಪಿಂಗ್ ಮತ್ತು ಸಜ್ಜುಗೊಳಿಸುವಿಕೆ ಹಾಗೂ ಆಂಬುಲೆನ್ಸ್ ಮ್ಯಾಪಿಂಗ್ ಮಾಡಬೇಕು. ಪ್ರತಿ ತಿಂಗಳು ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಡಿಸಿ ಡಾ. ಕೆ.ವಿದ್ಯಾಕುಮಾರಿ ಸೂಚಿಸಿದರು.
ರಾಜ್ಯದಲ್ಲಿ ಶೇ.2ರಷ್ಟು ಹೆದ್ದಾರಿಗಳಿದ್ದು ಶೇ.35ರಷ್ಟು ಅಪಘಾತ ಆಗುತ್ತಲಿದೆ. ಶೇ. 9ರಷ್ಟು ರಾಜ್ಯ ಹೆದ್ದಾರಿಯಲ್ಲಿ ಶೇ.28ರಷ್ಟು ಅಪಘಾತ ಆಗುತ್ತಿದೆ. ಮುನ್ಸಿಪಲ್ ರಸ್ತೆ, ಗ್ರಾಮೀಣ ರಸ್ತೆಗಳು ಶೇ. 89ರಷ್ಟಿದ್ದು, ಶೇ.37 ಅಪಘಾತ ಸಂಭವಿಸುತ್ತಿವೆ. ಮರಣ ಪ್ರಕರಣ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಹೆಚ್ಚುತ್ತಿದ್ದು, ಜಿಲ್ಲೆಯ 21 ಬ್ಲ್ಯಾಕ್ ಸ್ಪಾಟ್ಗಳಲ್ಲಿ 18 ನಮ್ಮ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿಯೇ ಇವೆ. ಡಾ.ಕೆ. ವಿದ್ಯಾಕುಮಾರಿ. ಜಿಲ್ಲಾಧಿಕಾರಿ, ಉಡುಪಿ