

ಉಡುಪಿ: ನಗರವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಸೂಚನೆಗಳಿದ್ದರು ಸಹ ನಿಯಮಗಳನ್ನು ಗಾಳಿಗೆ ತೂರಿ ಪಾರ್ಕಿಂಗ್ ಸ್ಥಳಗಳನ್ನು ವಾಣಿಜ್ಯ ಉದ್ಯಮಗಳಿಗೆ ಬಳಕೆ ಮಾಡುತ್ತಿದ್ದಾರೆ. ಇದರಿಂದಾಗಿ ಗ್ರಾಹಕರು ವಾಹನಗಳನ್ನು ರಸ್ತೆಯಲ್ಲಿ ಪಾರ್ಕ್ ಮಾಡುವ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ. ಈಗಾಗಲೇ ಕೆಲವು ಮಾಲೀಕರಿಗೆ ನೋಟೀಸ್ ನೀಡಿದ್ದರೂ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ. ಅವರಿಗೆ ಅಂತಿಮ ನೋಟೀಸ್ ನೀಡಿ ನಿಯಮಾನುಸಾರ ಕಾನೂನಿನ ಅಡಿ ಕ್ರಮ ಕೈಗೊಳ್ಳಬೇಕು ಎಂದು ನಗರಸಭಾ ಆಯುಕ್ತರಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಸೂಚನೆ ನೀಡಿದರು.
ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಗುರುತಿಸಲಾಗಿರುವ ಬ್ಲಾಕ್ಸ್ಪಾಟ್ ಪ್ರದೇಶಗಳಲ್ಲಿ ವಾಹನಗಳ ಸುರಕ್ಷಿತ ಚಾಲನೆಗೆ ಅಗತ್ಯವಿರುವ ವೈಜ್ಞಾನಿಕವಾಗಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ಅವಶ್ಯವಿರುವ ಕಡೆಯಲ್ಲಿ ಹಂಪ್ಸ್ಗಳ ಅಳವಡಿಕೆ, ಸೂಚನಾ ಫಲಕಗಳು ಸೇರಿದಂತೆ ಮತ್ತಿತರ ಸುರಕ್ಷತಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಅತೀ ವೇಗವಾಗಿ ಹಾಗೂ ಅಜಾಗರುಕತೆಯಿಂದ ವಾಹನ ಚಾಲನೆ ಮಾಡಿ ರಸ್ತೆ ಅಪಘಾತ ಮಾಡಿದ 82 ಜನ ಆರೋಪಿಗಳ ಚಾಲನ ಪರವಾನಿಗೆಯನ್ನು ಆರು ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ ಎಂದ ಅವರು, ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಂಚಾರಿ ಬಸ್ಗಳನ್ನು ಅತೀ ಜೋರಾಗಿ ಚಾಲನೆ ಮಾಡುವುದರ ಜೊತೆಗೆ ಎಲ್ಲೆಂದರಲ್ಲಿ ಬಸ್ಗಳನ್ನು ನಿಲ್ಲಿಸುತ್ತಾರೆ. ಇದರಿಂದ ಅಪಘಾತ ಹಾಗೂ ಸುಗಮ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಆಟೋ ನಿಲ್ದಾಣಗಳಲ್ಲಿ ಸದಸ್ಯತ್ವ ಪಡೆಯಲು 1.40 ಲಕ್ಷ ರೂ.ವರೆಗೆ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಆಟೋ ನಿಲ್ದಾಣದ ಸ್ಥಳಗಳು ಸರ್ಕಾರದ ಸ್ವತ್ತಾಗಿದ್ದು, ಪ್ರಸ್ತುತ ನಗರಸಭಾ ವ್ಯಾಪ್ತಿಯಲ್ಲಿದೆ. ಆಟೋ ನಿಲ್ದಾಣಗಳಲ್ಲಿ ಯಾವುದೇ ಆಟೋಗಳು ಸರತಿಯ ಆಧಾರದ ಮೇಲೆ ನಿಂತು ಪ್ರಯಾಣಿಸಲು ಅವಕಾಶ ಮಾಡಿ ಕೊಡಬೇಕು. ಈ ಬಗ್ಗೆ ನಗರಸಭಾ ಆಯುಕ್ತರು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ರಸ್ತೆ ಅಪಘಾತದ ಹಿಟ್ ಅಂಡ್ ರನ್ ಕೇಸ್ಗಳಲ್ಲಿ ಮೃತಪಟ್ಟ ಕುಟುಂಬದ ಅವಲಂಬಿತರು ಹಾಗೂ ಗಾಯಗೊಂಡವವರು ಸೊಲೊಟಿಯಂ ಪರಿಹಾರ ಪಡೆಯಲು ಅರ್ಹರಿದ್ದು, ಎಲ್ಲಾ ಪ್ರಕರಣಗಳಲ್ಲಿಯೂ ಪರಿಹಾರವನ್ನು ಕೂಡಲೇ ನಿಯಮಾನುಸಾರ ಮಂಜೂರು ಮಾಡುವಂತೆ ತಾಲೂಕು ತಹಶೀಲ್ದಾರರಿಗೆ ಸೂಚನೆ ನೀಡಿದರು.
ಸಿಗ್ನಲ್ ಅಳವಡಿಕೆ ವಿಳಂಬಕ್ಕೆ ಡಿಸಿ ತರಾಟೆ
ನಗರಸಭಾ ವ್ಯಾಪ್ತಿಯ ಐದು ಜಂಕ್ಷನ್ಗಳಲ್ಲಿ ಸಿಗ್ನಲ್ಲೈಟ್ಗಳು ಅಳವಡಿಸಲು ಕಳೆದ ಆರ್ಟಿಎ ಸಭೆಯಲ್ಲಿಯೇ ತೀಮಾರ್ನಿಸಲಾಗಿದ್ದರೂ ಈ ಬಗ್ಗೆ ಕ್ರಮವಹಿಸಿಲ್ಲ ಎಂಬುದಾಗಿ ಆಕ್ಷೇಪವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಕೂಡಲೇ ಕಲ್ಸಂಕ ಹಾಗೂ ಅಂಬಲ್ಪಾಡಿ ಜಂಕ್ಷನ್ಗಳಲ್ಲಿ ಸಿಗ್ನಲ್ಲೈಟ್ ಅಳವಡಿಸುವಂತೆ ತಿಳಿಸಿದರು. ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಕ್ರಿಯಾ ಯೋಜನೆಯಡಿ ರಸ್ತೆ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿತ್ತು. ಆದರೆ ಕಾಮಗಾರಿಗಳ ಅನುಷ್ಠಾನವಾಗಿಲ್ಲ. ಈ ಬಗ್ಗೆ ಕ್ರಮ ವಹಿಸುವಂತೆ ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಎ.ಎಸ್.ಪಿ ಪರಮೇಶ್ವರ್ ಹೆಗಡೆ, ಡಿ. ಎಫ್. ಒ ಗಣಪತಿ, ಕಾರ್ಯಪಾಲಕ ಅಭಿಯಂತರ ಕಿರಣ್ ಎಸ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ ಮತ್ತಿತರರು ಉಪಸ್ಥಿತರಿದ್ದರು.