ರಸ್ತೆ ಅಪಘಾತ ತಡೆಯಲು ಕ್ರಮಕೈಗೊಳ್ಳಬೇಕು

dc meeting
ದೇವನಹಳ್ಳಿ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಡಿಸಿ ಡಾ.ಎನ್.ಶಿವಶಂಕರ್ ಮಾತನಾಡಿದರು. ಎಡಿಸಿ ಅಮರೇಶ್, ಎಸ್‌ಪಿ ಸಿ.ಕೆ.ಬಾಬಾ ಹಾಗೂ ಸಾರಿಗೆ ಇಲಾಖೆ ಸಿಬ್ಬಂದಿ ಇದ್ದರು.
Published on

* ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಸೂಚನೆ

ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ಜಾಗಗಳನ್ನು ಗುರುತಿಸಿ ಅಪಘಾತಗಳನ್ನು ತಪ್ಪಿಸಲು ವೈಜ್ಞಾನಿಕವಾಗಿ ರೂಪುರೇಷೆ ಸಿದ್ಧಪಡಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಸೂಚಿಸಿದರು.
ದೇವನಹಳ್ಳಿ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲೂಕುಗಳ ವ್ಯಾಪ್ತಿಯಲ್ಲಿ ಕೆಲವೊಂದು ರಸ್ತೆಗಳು ಅಪಾಯಕಾರಿ ಎಂಬ ಮಾಹಿತಿ ಇದೆ, ಈ ಭಾಗಗಳಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಗಾಯಗೊಳ್ಳುವ ಪ್ರಕರಣ ವರದಿಯಾಗುತ್ತಿದೆ ಹಲವು ಪ್ರಕರಣಗಳಲ್ಲಿ ಪ್ರಾಣಹಾನಿಯಾಗಿರುವ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಇಂಥ ಜಾಗಗಳನ್ನು ಗುರುತಿಸಿ ಅಪಘಾತ ಸಂಭವಿಸದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರೂಪುರೇಷೆ ಸಿದ್ದಪಡಿಸಬೇಕು ಎಂದು ತಾಕೀತು ಮಾಡಿದರು.
ಅಪಘಾತ ಮುಕ್ತ ವಲಯವಾಗಬೇಕು: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಮತ್ತು ಇತರೆ ಎಲ್ಲೆಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎಂಬ ಅಂಕಿ ಅಂಶಗಳನ್ನು ಸಂಗ್ರಹಿಸಿ ಪದೇ ಪದೇ ಅಪಘಾತವಾಗಿದ್ದಲ್ಲಿ ಆ ಸ್ಥಳವನ್ನು ಜಂಟಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಿ ಅಪಘಾತ ವಲಯದಿಂದ ಮುಕ್ತವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ವೇಗದ ಚಾಲನೆಗೆ ಕಡಿವಾಣ ಹಾಕಿ: ಜಿಲ್ಲೆಯಲ್ಲಿ ಹೊಸದಾಗಿ ನೆಲಮಂಗಲದ ಡಾಬಸ್‌ಪೇಟೆಯಿಂದ ಹೊಸಕೋಟೆವರೆಗೂ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಚೆನೈ ಎಕ್ಸ್‌ಪ್ರೆಸ್ ಹೈವೇ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಗಳಲ್ಲಿ ವಾಹನಗಳು ನಿಗದಿತ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸುವುದಕ್ಕೆ ಕಡಿವಾಣ ಹಾಕಬೇಕು. ವೇಗವಾಗಿ ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತಗಳು ಉಂಟಾಗುವ ಸಂಭವ ಹೆಚ್ಚಾಗಿದ್ದು, ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಅಪಘಾತ ತಡೆಗೆ ಕ್ರಮ ವಹಿಸಬೇಕು ಎಂದರು. ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ರಸ್ತೆ ದಾಟುವ ಪ್ರದೇಶಗಳಲ್ಲಿ ಸೂಚನಾ ಫಲಕ ಅಳವಡಿಸುವ ಜತೆಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ 648 ರಲ್ಲಿ ಕೆಲವು ಕಡೆ ಸರ್ವಿಸ್ ರಸ್ತೆ ಹಾಗೂ ಕೆಳ ಸೇತುವೆ(ಅಂಡರ್‌ಪಾಸ್) ಬೇಕೆಂದು ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಕಡ್ಡಾಯವಾಗಿ ಅವಶ್ಯಕತೆ ಇರುವ ರಸ್ತೆ ಭಾಗಗಳಲ್ಲಿ ಸೂಚನಾ ಫಲಕಗಳು(ಸೈನ್ ಬೋರ್ಡ್, ಹಂಪ್‌ಗಳ ನಿರ್ಮಾಣವಾಗಬೇಕು, ರಸ್ತೆ ದುರಸ್ತಿ ಕಾಮಗಾರಿಗಳ ಸ್ಥಳಗಳಲ್ಲಿ ಸೂಚನಾಲಕ ಅಳವಡಿಕೆ ಕಡ್ಡಾಯವಾಗಿರಬೇಕು, ಇತರೆ ಇಲಾಖೆಗಳು ನಡೆಸುವ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ, ಗುಂಡಿಗಳನ್ನು ತೆಗೆದಾಗ ಅಲ್ಲಿ ಕಡ್ಡಾಯವಾಗಿ ಸುತ್ತಲೂ ಸೂಚನಾ ಫಲಕಗಳನ್ನು ಅಳವಡಿಸಿ ಬ್ಯಾರಿಕೇಡ್ ಅಳವಡಿಸಬೇಕು ಎಂದು ಸೂಚಿಸಿದರು.

-------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net