

ಹುಬ್ಬಳ್ಳಿ : ಜಿಲ್ಲಾಡಳಿತದ ವತಿಯಿಂದ ಇಲ್ಲಿನ ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ತಾಲೂಕಿನ ಜನರಿಂದ 20 ಅರ್ಜಿಗಳು ಸಲ್ಲಿಕೆಯಾದವು.
ಹು-ಧಾ ಮಹಾನಗರ ಪಾಲಿಕೆಗೆ ಸಂಬಂಧಿಸಿದ 9, ಕಂದಾಯ ಇಲಾಖೆಯ 5, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ 1, ತಾಲೂಕು ಪಂಚಾಯಿತಿಯ 2, ಸರ್ವೆ ಇಲಾಖೆಯ 2 ಹಾಗೂ ಸಾರಿಗೆ ಸಂಸ್ಥೆಗೆ ಸಂಬಂಧಿಸಿದ ಒಂದು ಅರ್ಜಿ ಸಲ್ಲಿಕೆಯಾಗಿವೆ.
ಸಾರ್ವಜನಿಕರ ಅಹವಾಲು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ದಿವ್ಯ ಪ್ರಭು, ತೆರಿಗೆ ಆಕರಣೆ, ಕಟ್ಟಡ ನಿಯಮ ಉಲ್ಲಂಘನೆ, ಒತ್ತುವರಿ, ಆಶ್ರಯ ಯೋಜನೆಯಡಿ ಮನೆ ಮಂಜೂರು ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದ ಅರ್ಜಿಗಳಿದ್ದು, ಒಂದು ತಿಂಗಳೊಳಗೆ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ತಿಳಿಸಿದರು.
ಸತತ ಮಳೆಯಿಂದ ರಸ್ತೆಗಳ ದುರಸ್ತಿ ಕಾಮಗಾರಿ ಸಾಧ್ಯವಾಗಿಲ್ಲ. ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಸೂಚನೆ ನೀಡಲಾಗಿದೆ. ಮಳೆ ನಿಂತ ಮೇಲೆ ಹಗಲು-ರಾತ್ರಿ ರಸ್ತೆ ದುರಸ್ತಿ ಕೆಲಸ ಮಾಡಲಾಗುವುದು. ಗಣೇಶ ಮೂರ್ತಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ರಸ್ತೆ ದುರಸ್ತಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಮಳೆಯಿಂದಾಗಿ ಹುಬ್ಬಳ್ಳಿ ನೆಹರು ಮೈದಾನ ಕೆಸರುಮಯವಾಗಿದ್ದು, ಸ್ವಾತಂತ್ರ್ಯ ದಿನಾಚರಣೆ ಪಥಸಂಚಲನದಲ್ಲಿ ಕೆಸರಿನಲ್ಲಿಯೇ ವಿದ್ಯಾರ್ಥಿಗಳು ಪರೇಡ್ ಮಾಡಿದ್ದರು. ಇಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿ ಕೈಗೊಂಡಿದ್ದ ಕಾಮಗಾರಿ ಪೂರ್ಣಗೊಂಡಿಲ್ಲವೇ ? ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ನೆಹರು ಮೈದಾನದಲ್ಲಿ ದೊಡ್ಡ ವಾಹನಗಳಿಗೆ ಪ್ರವೇಶ ನೀಡದಂತೆ ಹಾಗೂ ಮೈದಾನ ಕೆಸರಾಗದಂತೆ ಶಾಶ್ವತ ಪರಿಹಾರ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಿದರು.
ಹುಬ್ಬಳ್ಳಿ ಉಣಕಲ್ಲ ಚಂದ್ರಮೌಳೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ಡಿಪಿಆರ್ ಸಿದ್ಧಪಡಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲ್ಲಿನ 65 ಮನೆಗಳನ್ನು ಸ್ವಾಧೀನಪಡಿಸಿಕೊಂಡು, ಅಲ್ಲಿನ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಹಳೇ ಬಸ್ ನಿಲ್ದಾಣದಿಂದ ಬಸ್ಗಳ ಕಾರ್ಯಾಚರಣೆ 30ರಂದು : ಚನ್ನಮ್ಮ ವೃತ್ತದಿಂದ ಹೊಸೂರು ಹಾಗೂ ವಿಜಯಪುರ ಮಾರ್ಗದ ಫ್ಲೈ ಓವರ್ ಕಾಮಗಾರಿ ಸೆ. 10ರಂದು ಪೂರ್ಣಗೊಳ್ಳಲಿದೆ. ಈಗಾಗಲೇ ಶೇ. 90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ಶೇ. 10ರಷ್ಟು ಕಾಮಗಾರಿಯನ್ನು ಆ. 30ರೊಳಗೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹೇಳಿದ್ದಾರೆ. ಆ. 30ರಿಂದ ಹಳೇ ಬಸ್ ನಿಲ್ದಾಣದಿಂದ ಸಾರಿಗೆ ಬಸ್ಗಳ ಕಾರ್ಯಾಚರಣೆ ಪುನಃ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
ಆ. 25ರಂದು ಖುದ್ದಾಗಿ ಫ್ಲೈ ಓವರ್ ಕಾಮಗಾರಿ ಪರಿಶೀಲನೆ ನಡೆಸಿ, ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಸಭೆ ನಡೆಸಲಾಗುವುದು. ಅಕ್ಟೋಬರ್ 1ರಿಂದ ಗದಗ ರಸ್ತೆಯ ಫ್ಲೈ ಓವರ್ ಕಾಮಗಾರಿ ಪ್ರಾರಂಭಿಸಲಾಗುವುದು. ಉಪ ನಗರ ಪೊಲೀಸ್ ಠಾಣೆ, ಆಡಳಿತ ಸೌಧದ ಕೆಲ ಭಾಗಗಳು ತೆರವುಗೊಳ್ಳಲಿದೆ. ನಂತರ ಮೂರು ತಿಂಗಳಲ್ಲಿ ಈ ಭಾಗದ ಫ್ಲೈ ಓವರ್ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
96 ಮನೆಗಳಿಗೆ ಹಾನಿ: ಆ. 1ರಿಂದ 18ರವರೆಗೆ ಶೇ. 62ರಷ್ಟು ಹೆಚ್ಚು ಮಳೆ ಸುರಿದಿದೆ. ಜೂನ್ 1ರಿಂದ ಇದುವರೆಗಿನ ಮಳೆ ಪ್ರಮಾಣ ಗಮನಿಸಿದರೆ ಶೇ. 13ರಷ್ಟು ಹೆಚ್ಚು ಮಳೆಯಾಗಿದೆ. ಕಳೆದ 2-3 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡ ಜಿಲ್ಲೆಯಲ್ಲಿ 96 ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ದಾಖಲೆಗಳ ಡಿಜಿಟಲೀಕರಣ: ಭೂ ಸುರಕ್ಷಾ ಯೋಜನೆ ಮೂಲಕ ಭೂ ದಾಖಲೆಗಳನ್ನು ಡಿಜಟಲೀಕರಣ ಮಾಡಲಾಗುತ್ತಿದೆ. ಈಗಾಗಲೇ ಹುಬ್ಬಳ್ಳಿ ಮತ್ತು ಅಳ್ನಾವರ ತಾಲೂಕಿನಲ್ಲಿ ಶೇ.100ರಷ್ಟು ದಾಖಲೆಗಳನ್ನು ಡಿಜಟಲೀಕರಣ ಮಾಡಲಾಗಿದೆ. ಉಳಿದ ತಾಲೂಕುಗಳಲ್ಲಿ ಮುಂದಿನ 6 ತಿಂಗಳಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಹುಡಾ ಆಯುಕ್ತ ಡಾ. ಸಂತೋಷ ಬಿರಾದಾರ, ತಹಸೀಲ್ದಾರರಾದ ಮಹೇಶ ಗಸ್ತೆ, ಜೆ.ಬಿ.ಮಜ್ಜಗಿ, ತಾಪಂ ಇಒ ಡಾ. ರಾಮಚಂದ್ರ ಹೊಸಮನಿ, ತಾಲೂಕು ವೈದ್ಯಾಧಿಕಾರಿ ಡಾ. ಹುಲಗಣ್ಣ ಇಂಜಗನರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಉಪಸ್ಥಿತರಿದ್ದರು.