

ಲಿಂಗದಹಳ್ಳಿ: ಹೊಂಡ-ಗುಂಡಿಗಳಿಂದ ಕೂಡಿದ ಕಲ್ಲತ್ತಿಪುರ-ಲಾಲ್‌ಬಾಗ್ ರಸ್ತೆಯಲ್ಲಿರುವ ಧೂಪದ ಖಾನ್ ಗ್ರಾಮದಿಂದ ನಂದಿಗಾವೆ ಗ್ರಾಮದವರೆಗಿನ 15 ಕಿ.ಮೀ ರಸ್ತೆಯನ್ನು ಗ್ರಾಮಸ್ಥರೇ ಶ್ರಮದಾನ ಮಾಡಿ ದುರಸ್ತಿ ಮಾಡಿದ್ದಾರೆ.
ರಸ್ತೆಯಲ್ಲಿರುವ ಹೊಂಡ ಗುಂಡಿಗಳು ಹೆಚ್ಚಾಗಿರುವ ಕಾರಣ ಈ ಭಾಗದ ಜನರು 16 ಕಿ.ಮೀ ಕಾಲ್ನಡಿಗೆಯಲ್ಲಿ ಸಂಚರಿಸುವಂತಾಗಿದೆ. ಈ ರಸ್ತೆ ದುರಸ್ತಿ ಮಾಡಿಕೊಂಡುವಂತೆ ಅನೇಕ ಭಾರಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ ರಸ್ತೆ ದುರಸ್ತಿಗೆ ಮುಂದಾಗಿಲ್ಲ.
ಅಧಿಕಾರಿಗಳ ಉದಾಸೀನತೆಯಿಂದ ಬೆಸತ್ತ ಗ್ರಾಮಸ್ಥರು, ಕಾಫಿ ತೋಟಗಳ ಕೂಲಿ ಕಾರ್ಮಿಕರು ಒಟ್ಟಾಗಿ ಶ್ರಮದಾನ ಮಾಡುವ ಮೂಲಕ ಹತ್ತಾರು ಕಿ.ಮೀ ದೂರದಿಂದ ಟ್ರಾಕ್ಟರ್ ಮೂಲಕ ಮಣ್ಣನ್ನು ತಂದು ರಸ್ತೆಗೆ ಹಾಕಿ ಗುಂಡಿ ಮುಚ್ಚುವ ಕಾರ್ಯಮಾಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ದಂಡು ಬಿಡಾರ ಮತ್ತು ನಂದಿಗಾವೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿ ಮತ್ತು ಬಸ್ ವ್ಯವಸ್ಥೆ ಕಲ್ಪಿಸುವ ವರರೆಗೂ ಚುನಾವಣಾ ಬಹಿಷ್ಕಾರಿಸುವ ಎಚ್ಚರಿಕೆ ನೀಡಿದ್ದರಿಂದ ತಹಸೀಲ್ದಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮಕ್ಕೆ ಬಂದು ಗ್ರಾಮಸ್ಥರ ಮನವೊಲಿಸಿ ಚುನಾವಣೆ ನಂತರ ತಮ್ಮೆಲ್ಲರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿ ಹೋದವರು ಮತ್ತೆ ಗ್ರಾಮದ ಕಡೆ ತಿರುಗಿ ನೋಡಿಲ್ಲ. ಮುಂದಿನ ದಿನಗಳಲ್ಲಾದರೂ ರಾಜ್ಯಸರ್ಕಾರ ಇತ್ತ ಗಮನ ಹರಿಸಿ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬಿ.ಎಂ ಚಾಲುಕ್ಯ, ದಂಡು ಬಿಡಾರ ಹಾಗೂ ನಂದಿಗಾವೆ ಗ್ರಾಮಸ್ಥರು ಇದ್ದರು.