

ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
ಪಟ್ಟಣದಿಂದ ಬಿನ್ನಾಳ ಸಂಪರ್ಕಿಸುವ ಅತ್ಯಂತ ಸಮೀಪದ ಮತ್ತು ಪುರಾತನ ರಸ್ತೆ ದುರಸ್ತಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಸುತಾರಾಂ ಸ್ಪಂದಿಸಿಲ್ಲ. ಇದರಿಂದ ರೋಸಿಹೋದ ರೈತರು ತಾವೇ ಸ್ವತಃ ವಂತಿಗೆ ಸಂಗ್ರಹಿಸಿ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ.
ನರೇಗಲ್ಲದಿಂದ ಬಿನ್ನಾಳ ಗ್ರಾಮದ ವರೆಗಿನ ಸಾವಿರಾರು ಎಕರೆ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ರಸ್ತೆ ಸಂಪೂರ್ಣ ನಿರ್ಲಕ್ಷೃಕ್ಕೊಳಗಾಗಿ ಜಾಲಿ ಕಂಟಿ ಬೆಳೆದು ರಸ್ತೆ ಎಲ್ಲಿದೆ ಎಂದು ಹುಡುಕುವ ಸ್ಥಿತಿ ನಿರ್ಮಾಣವಾಗಿತ್ತು. ನರೇಗಲ್ಲದಿಂದ ಬಿನ್ನಾಳ ಒಟ್ಟು 14 ಕಿ.ಮೀ ರಸ್ತೆ ಇದಾಗಿದ್ದು, 9 ಕಿ.ಮೀ ವರೆಗೆ ನರೇಗಲ್ಲನ ರೈತರ ಜಮೀನುಗಳಿವೆ. ಸುಮಾರು 8-9 ಸಾವಿರ ಎಕರೆ ಪ್ರದೇಶಕ್ಕೆ ಇದೇ ರಸ್ತೆ ಮೂಲಕ ಸಾಗಬೇಕು. ಆದರೆ, ರಸ್ತೆ ಹದಗೆಟ್ಟ ಪರಿಣಾಮ ಸುತ್ತಿಬಳಸಿ ಜಮೀನುಗಳಿಗೆ ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ರೋಸಿಹೋದ ಈ ರಸ್ತೆಯಲ್ಲಿನ ಜಮೀನುಗಳ ರೈತರು ತಮ್ಮ ತಮ್ಮಲ್ಲಿ ವಂತಿಕೆ ಸಂಗ್ರಹಿಸಿ ಜೆಸಿಬಿ ಸಹಾಯದಿಂದ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ.
ಸಂಪೂರ್ಣ ಯರೇ ಮಣ್ಣಿನ ಜಮೀನುಗಳನ್ನು ಹೊಂದಿರುವ ಈ ರಸ್ತೆಯ ಎರಡೂ ಬದಿಯಲ್ಲಿ ಜಾಲಿ ಕಂಟಿಗಳು ಬೆಳೆದು ರಸ್ತೆಯನ್ನು ಆವರಿಸಿದ್ದು, ಚಕ್ಕಡಿ, ಟ್ರ್ಯಾಕ್ಟರ್ ಸೇರಿದಂತೆ ಯಾವುದೇ ವಾಹನಗಳು ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಮುಂಗಾರು ಮತ್ತು ಹಿಂಗಾರಿನಲ್ಲಿ ಬಿತ್ತನೆ ಮಾಡಲು ಮತ್ತು ಕಟಾವು ಮಾಡಲು ರೈತರು ಪರದಾಡುತ್ತಿದ್ದರು. ರಸ್ತೆಯ ಅಕ್ಕಪಕ್ಕದ ಜಮೀನುಗಳ ಮೂಲಕ ಹಾದು ಹೋಗುವುದು ಅನಿವಾರ್ಯವಾಗಿತ್ತು. ಇದರಿಂದ, ರೈತರಲ್ಲಿ ಜಗಳ ಸರ್ವೆ ಸಾಮಾನ್ಯ ಎನ್ನುವಂತಾಗಿತ್ತು.
ಈ ರಸ್ತೆಯ ದುರಸ್ತಿಗಾಗಿ ಈ ಮಾರ್ಗವಾಗಿ ಇರುವ ಜಮೀನುಗಳ ರೈತರು ಒಂದಾಗಿ ತಲಾ 500-1000 ರೂ.ಗಳನ್ನುನೀಡುವ ಮೂಲಕ ರಸ್ತೆಯನ್ನು ರಿಪೇರಿ ಮಾಡಿಸಲಾಗುತ್ತಿದ್ದು, ಎಲ್ಲದಕ್ಕೂ ಸರ್ಕಾರದ ಮುಂದೆ ಕೈವೊಡ್ಡಿ ನಿಲ್ಲುವ ಬದಲು ನಾವೇ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎಂಬುದನ್ನು ರೈತರು ತೊರಿಸಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ರಸ್ತೆ ದುರಸ್ತಿಗೆ ಕೈ ಜೋಡಿಸಿದ ರೈತರು: ಬಸವರಾಜ ಗೋರನವರ, ಅನೀಲ ಕಳಕೊಣ್ಣವರ, ಆನಂದ ಕಳಕೊಣ್ಣವರ, ಅಶೋಕ ಬೇವಿನಕಟ್ಟಿ, ಬಸಪ್ಪ ಗಂಗರಗೊಂಡ, ಸತೀಶ ಕುರಕುಂದಿ, ಗೌಸುಸಾಬ ನವಲಗುಂದ, ಕಾಶಪ್ಪ ಚಲವಾದಿ, ವೀರಪ್ಪ ಸಂದಿಮನಿ, ಶಿವನಗೌಡ ಧರಣೇಪ್ಪಗೌಡ್ರ, ರವಿ ಬಿಷ್ಟಕ್ಕನವರ, ನೀಲ್ಪಪ ಜೋಗಿ, ಚಿನ್ನಪ್ಪ ಧರ್ಮಾಯತ, ಶರಣಮ್ಮ ಜೋಗಿ, ವೀರಪ್ಪ ಸೇರಬಂಡಿ, ಶರಣಪ್ಪ ಕಳಕೊಣ್ಣವರ, ಪ್ರಶಾಂತ ಕುಲಕರ್ಣಿ, ಶೇಖಮ್ಮ ಧರಣೆಪ್ಪಗೌಡ್ರ, ಬಾಳಪ್ಪ ಶಿಂಧೆ, ಕಂಠೆಪ್ಪ ಜುಟ್ಲ, ಮಲ್ಲಿಕಾರ್ಜುನ ಗಂಗರಗೊಂಡ, ಶಿವಯ್ಯ ರೋಣದ, ವೀರಪ್ಪ ಕೋಂಡಿ, ರಮೇಶ ಕಳಕೊಣ್ಣವರ, ಅಶೋಕ ಕಳಕೊಣ್ಣವರ. ಎನ್‌ಕೆ. ಬೇವಿನಕಟ್ಟಿ.
ನರೇಗಲ್ಲ ಪಟ್ಟಣದಿಂದ ರೈತರ ಜಮೀನುಗಳಿಗೆ ಸಂಪರ್ಕಿಸುವ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ಜಮೀನುಗಳಿಗೆ ಹೋಗಲು ಪರದಾಡುವ ಸ್ಥಿತಿ ನಿರ್ಮಾಣವಾಗಿವೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ರೈತರೆಲ್ಲರೂ ಸೇರಿ ರಸ್ತೆ ದುರಸ್ತಿಗೆ ಮುಂದಾಗಿದ್ದೇವೆ. ಈ ರಸ್ತೆಯನ್ನು ಸರ್ವಋತು ರಸ್ತೆಯನ್ನಾಗಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕು. ಬಸವರಾಜ ಗೋರನವರ, ಆನಂದ ಕಳಕೊಣ್ಣವರ, ರಸ್ತೆ ದುರಸ್ತಿಗೆ ಮುಂದಾದ ರೈತರು. ಬಹುತೇಕ ರೈತಾಪಿ ಜನರನ್ನು ಹೊಂದಿರುವ ನರೇಗಲ್ಲ ಪಟ್ಟಣದಿಂದ ರೈತರ ಜಮೀನುಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸಮಗ್ರ ಯೋಜನಾ ವರದಿಯನ್ನು ತಯಾರಿಸಿ, ರಸ್ತೆ ಅಭಿವೃದ್ಧಿಗೆ ಮುಂದಾಗಬೇಕು. ಅಶೋಕ ಬೇವಿನಕಟ್ಟಿ, ಡಾ. ಜಿ.ಕೆ. ಕಾಳೆ, ರೈತರು ನರೇಗಲ್ಲ ನರೇಗಲ್ಲನ ಜಮೀನುಗಳಿಗೆ ಸಂಪರ್ಕಿಸುವ ರಸ್ತೆ ದುರಸ್ತಿಗಾಗಿ ರೈತರು ಇತ್ತೀಚೆಗೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಮುಂಬರುವ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು. ಮಹೇಶ ನಿಡಶೇಶಿ, ಮುಖ್ಯಾಧಿಕಾರಿ, ಪ.ಪಂ ನರೇಗಲ್ಲ