ಉದ್ಘಾಟನೆಗೆ ಕಾಯುತ್ತಿದೆ ರಸ್ತೆ

road
Published on

ಮೂಲ್ಕಿ: ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕಾಡು ಮುಖ್ಯ ರಸ್ತೆ ಕಾಂಕ್ರೀಟ್ ಕಾಮಗಾರಿ 1.20 ಕೋಟಿ ರೂ. ವೆಚ್ಚದಲ್ಲಿ ನಡೆದಿದ್ದು, ಕಳೆದ ನಾಲ್ಕು ತಿಂಗಳಿನಿಂದ ಲೋಕಾರ್ಪಣೆಗೆ ಕಾಯುತ್ತಿದೆ.

ಕಿಲ್ಪಾಡಿ ಮತ್ತು ಪಡುಪಣಂಬೂರು ಗ್ರಾಮಗಳ ಸಂಪರ್ಕ ಕೊಂಡಿಯಾಗಿರುವ ರಸ್ತೆ ಆಸುಪಾಸಿನಲ್ಲಿ ಸುಮಾರು 500ಕ್ಕೂ ಅಧಿಕ ಮನೆಗಳಿವೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಸ್ತಾವನೆ, ಶಾಸಕ ಉಮಾನಾಥ ಕೋಟ್ಯಾನ್ ಸೂಚನೆಯಂತೆ ನೀರಾವರಿ ನಿಗಮದ ಮೂಲಕ ಎಸ್‌ಸಿಸಿ, ಟಿಎಸ್‌ಪಿ ಯೋಜನೆ, ಪರಿಶಿಷ್ಟ ಜಾತಿ ಕಾಲನಿ ಅಭಿವೃದ್ಧಿ ಯೋಜನೆಯಲ್ಲಿ ಕೆಆರ್‌ಡಿಐಎಲ್ ಸಂಸ್ಥೆ ರಸ್ತೆ ನಿರ್ಮಿಸಿದೆ. ರಸ್ತೆ ಇಕ್ಕೆಲಗಳಲ್ಲಿ ಚರಂಡಿ ನಿರ್ಮಿಸಲಾಗಿದೆ. ಪೈಪ್‌ಲೈನ್, ಇನ್ನಿತರ ಕೇಬಲ್ ಕೆಲಸಗಳಿಂದ ರಸ್ತೆ ರಕ್ಷಿಸಲು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಪಿವಿಸಿ ಪೈಪ್ ಅಳವಡಿಸಲಾಗಿದೆ. ಐದು ಕಡೆಗಳಲ್ಲಿ ಒಳ ರಸ್ತೆ ಸಂಪರ್ಕಿಸುವಲ್ಲಿ ವಾಹನಗಳ ವೇಗ ನಿಯಂತ್ರಣಕ್ಕಾಗಿ ರಸ್ತೆ ಉಬ್ಬು ಅಳವಡಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ಕಿಲ್ಪಾಡಿ ಪಂಚಾಯಿತಿ ಸದಸ್ಯೆ ದಮಯಂತಿ ಶೆಟ್ಟಿಗಾರ್, ಪಡುಪಣಂಬೂರು ಗ್ರಾಪಂ ಸದಸ್ಯರಾದ ಮೋಹನ್‌ದಾಸ್, ವಿನೋದ್ ಎಸ್.ಸಾಲ್ಯಾನ್ ಬೆಳ್ಳಾಯರು, ರಸ್ತೆ ಕಾಮಗಾರಿ ಸಮಯದಲ್ಲಿ ರಸ್ತೆ ನಿರ್ಮಾಣ ನಿಗಾ ವಹಿಸಿದ್ದರು.

ಗ್ರಾಮದ ಒಳ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಿ ಶಾಶ್ವತವಾಗಿ ಉನ್ನತಿಗೊಳಿಸುವ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಭವಿಷ್ಯದಲ್ಲಿ ರಾಜ್ಯ ಸರ್ಕಾರದ ಹಲವಾರು ವಿಶೇಷ ಯೋಜನೆಗಳನ್ನು ಕ್ಷೇತ್ರದಲ್ಲಿ ಅಳವಡಿಸಲಾಗುವುದು.

ಉಮಾನಾಥ ಕೋಟ್ಯಾನ್, ಶಾಸಕ

ಕೆರೆಕಾಡು ಮುಖ್ಯ ರಸ್ತೆಯ ಅಭಿವೃದ್ಧಿ ಮುಂದುವರಿಸಿ ಇದೇ ರಸ್ತೆಯ ಕಾಂಕ್ರೀಟ್ ಕಾಮಗಾರಿಯನ್ನು 500 ಮೀಟರ್ ದೂರದಲ್ಲಿದಲ್ಲಿರುವ ಮೂಲ್ಕಿ-ಕಿನ್ನಿಗೋಳಿ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಬಗ್ಗೆ ಶಾಸಕರಲ್ಲಿ ಈಗಾಗಲೇ ಮನವಿ ಮಾಡಿದ್ದೇವೆ ಪೂಕರವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ.

ದಮಯಂತಿ ಎಂ. ಶೆಟ್ಟಿಗಾರ್, ಕಿಲ್ಪಾಡಿ ಗ್ರಾಮ ಪಂಚಾಯಿತಿ ಸದಸ್ಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net