ರಸ್ತೆ ಕಾಮಗಾರಿ ಮುಗಿಯೋದ್ಯಾವಾಗ?

0101
Published on

ಕೊಕಟನೂರ: ಅಥಣಿ ತಾಲೂಕಿನ ಯಲ್ಲಮ್ಮನವಾಡಿಯಿಂದ ಐಗಳಿಕ್ರಾಸ್, ಕೊಕಟನೂರದಿಂದ ಕೊಡಗಾನೂರಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿ ಕಾಮಗಾರಿಗೆ ಮಂಕು ಕವಿದಿದೆ.

ಈ ರಸ್ತೆ ಡಾಂಬರೀಕರಣ ಮಾಡುವುದಕ್ಕೆ ವರ್ಷದ ಹಿಂದೆಯೇ ಅಡಿಗಲ್ಲು ಸಮಾರಂಭ ನೆರವೇರಿಸಲಾಗಿದೆ. ಆದರೆ, ಈವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಸ್ಥಳೀಯರು ಹಾಗೂ ವಾಹನ ಸವಾರರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. 2019-20ರಲ್ಲಿ ಈ ಎರಡು ರಸ್ತೆ ಕಾಮಗಾರಿಗೆ ಶಾಸಕ ಮಹೇಶ ಕುಮಠಳ್ಳಿ ಅವರು ಭೂಮಿಪೂಜೆ ನೆರವೇರಿಸಿದ್ದರು.

ಬಹು ದಿನಗಳ ಬೇಡಿಕೆಯಾಗಿದ್ದ ಈ ರಸ್ತೆಗಳ ನಿರ್ಮಾಣ ಸುದ್ದಿ ಕೇಳಿ ಈ ಭಾಗದ ರೈತರು, ಯಲ್ಲಮ್ಮದೇವಿ ಯಾತ್ರಿಕರು ಸಂತಸಗೊಂಡಿದ್ದರು. ಆದರೆ, ವರ್ಷ ಗತಿಸಿದರೂ ಈ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆ ಈಗ ಕೆಸರು ಗದ್ದೆಯಂತಾಗಿದ್ದು, ವಾಹನ ಸವಾರರು ಪ್ರಯಾಸ ಪಡುತ್ತಿದ್ದಾರೆ.

ಕೆಆರ್‌ಐಡಿಎಲ್ ಮೇಲೆ ಗರಂ: 98.44 ಲಕ್ಷ ರೂ. ವೆಚ್ಚದಲ್ಲಿ ಯಲ್ಲಮ್ಮನವಾಡಿಯಿಂದ ಐಗಳಿ ಕ್ರಾಸ್‌ವರೆಗೆ 2.3 ಕಿ.ಮೀ. ಹಾಗೂ ಕೊಕಟನೂರದಿಂದ ಕೊಡಗಾನೂರ ಗ್ರಾಮದವರೆಗೆ 1.26 ಕೋಟಿ ರೂ. ವೆಚ್ಚದಲ್ಲಿ 3.25 ಕಿ.ಮೀ. ರಸ್ತೆ ನಿರ್ಮಿಸುವುದಕ್ಕೆ ಕರ್ನಾಟಕ ಗ್ರಾಮಾಭಿವೃದ್ಧಿ ನಿಗಮ (ಕೆಆರ್‌ಐಡಿಎಲ್), ಭೂಸೇನಾ ನಿಗಮವು ಕಾಮಗಾರಿ ಕೈಗೆತ್ತಿಕೊಂಡಿದೆ. ಇಲ್ಲಿಯವರೆಗೆ ಮುರಂ ಹಾಕಿ ಕೈಬಿಟ್ಟಿದ್ದಾರೆ.

ಡಾಂಬರೀಕರಣ ಮಾಡುವ ಗೋಜಿಗೆ ಹೋಗಿಲ್ಲ. ಈಗ ಮಳೆ ಸುರಿಯುತ್ತಿರುವುದರಿಂದ ರಸ್ತೆಯೆಲ್ಲ ಕೆಸರು ಗದ್ದೆಯಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಹಲವು
ಬೈಕ್ ಸವಾರರು ಸ್ಕಿಡ್ ಆಗಿ ಬಿದ್ದು ಗಾಯಗೊಂಡ ಉದಾಹರಣೆಗಳಿವೆ. ಕೂಡಲೇ ಕಾಮಗಾರಿ ಪ್ರಾರಂಭಿಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸ್ಥಳೀಯರ ಒತ್ತಾಯದ ಮೇರೆಗೆ ಶಾಸಕರು ರಸ್ತೆ ಕಾಮಗಾರಿ ಪ್ರಾರಂಭಿಸಿದ್ದಾರೆ. ಎರಡು ಕಾಮಗಾರಿಗೆ ಮಂಜೂರಾತಿ ದೊರೆತಿದೆ. ಮಳೆಗಾಲ ಇರುವುದರಿಂದ ರಸ್ತೆ ಡಾಂಬರೀಕರಣ ಮಾಡಿಲ್ಲ. ಮಳೆ ನಿಂತ ಮೇಲೆ ಕೂಡಲೇ ಕಾಮಗಾರಿ ಪೂರ್ಣಗೊಳಿಸುತ್ತೇವೆ. ಎ.ಜಿ. ಷಣ್ಮುಗಪ್ಪ | ಸಹಾಯಕ ನಿರ್ದೇಶಕ, ಕೆಆರ್‌ಐಡಿಎಲ್, ಅಥಣಿ

ರಸ್ತೆ ಕಾಮಗಾರಿ ಭೂಮಿಪೂಜೆ ಮಾಡಿ ಒಂದು ವರ್ಷ ಪೂರ್ಣಗೊಂಡಿದೆ. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಮಣ್ಣು ಹಾಕಿ ಹಾಗೆ ಬಿಟ್ಟಿದ್ದಾರೆ. ಇದರಿಂದ ರಸ್ತೆ ಮಧ್ಯೆ ನೀರು ನಿಂತು ಕೆಸರುಮಯವಾಗಿದೆ. ಇಲ್ಲಿ ಸಂಚಾರ ಮಾಡುವ ಜನರಿಗೆ ಜಾರಿ ಬೀಳುವುದು ಸಾಮಾನ್ಯವಾಗಿದೆ. ರಸ್ತೆ ಕಾಮಗಾರಿ ಶೀಘ್ರ ಕೈಗೊಂಡು ಜನರಿಗೆ ಅನುಕೂಲ ಕಲ್ಪಿಸಿ.| ಅರ್ಜುನ ಪೂಜಾರಿ ಯಲ್ಲಮ್ಮನವಾಡಿ ನಿವಾಸಿ,

| ಮೋಹನ ಪಾಟಣಕರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net