

ಮುದ್ದೇಬಿಹಾಳ: ಕಳಪೆ ಕಾಮಗಾರಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಗುಣಮಟ್ಟ ಪರಿಶೀಲಿಸಲು ಲೋಕೋಪಯೋಗಿ ಇಲಾಖೆಯ ಧಾರವಾಡದ ಮುಖ್ಯ ಇಂಜಿನಿಯರ್ ಎಚ್. ಸುರೇಶ, ಬೆಳಗಾವಿಯ ಅಧೀಕ್ಷಕ ಇಂಜಿನಿಯರ್ ಅರುಣಕುಮಾರ ಪಾಟೀಲ ಅವರ ತಂಡ ಬುಧವಾರ ಸಂಜೆ ಶಿರಾಡೋಣ-ಲಿಂಗಸುಗೂರ ರಾಜ್ಯ ಹೆದ್ದಾರಿಯ ಹಿರೇಮುರಾಳ ಗ್ರಾಮದಲ್ಲಿ ಹಾಯ್ದು ಹೋಗಿರುವ ರಸ್ತೆಯನ್ನು ಪರಿಶೀಲಿಸಿದರು.
ನರಸರಡ್ಡಿ ಎನ್ನುವ ಗುತ್ತಿಗೆದಾರರು ಈ ಕಾಮಗಾರಿಯ ಟೆಂಡರ್ ಹಿಡಿದಿದ್ದರು. ಇವರು ಡೆಂಗಿ ಎನ್ನುವ ಎರಡನೇ ವ್ಯಕ್ತಿಗೆ ಕಾಮಗಾರಿ ನಡೆಸಲು ನೀಡಿದ್ದರು. ನಂತರ ವೆಂಕಟೇಶ ರಾಠೋಡ ಎನ್ನುವ ಮೂರನೇ ವ್ಯಕ್ತಿ ರಸ್ತೆ, ಚರಂಡಿ ಮತ್ತಿತರ ಕಾಮಗಾರಿಗಳನ್ನು ಮಾಡಿದ್ದಾರೆ. ಆರಂಭದಲ್ಲೇ ಕಳಪೆ ಕಾಮಗಾರಿ ನಡೆಸುತ್ತಿರುವುದನ್ನು ತಡೆಯುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರೂ ಪರಿಗಣಿಸದೆ ತರಾತುರಿಯಲ್ಲಿ ಇಲಾಖೆಯ ಇಂಜಿನಿಯರ್ ಅನುಪಸ್ಥಿತಿಯಲ್ಲಿ ಮನಸ್ಸಿಗೆ ತೋಚಿದಂತೆ ಕಾಮಗಾರಿ ಮಾಡಿ ಮುಗಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಗ್ರಾಮಸ್ಥರು ಲಿಖಿತ ದೂರನ್ನೂ ನೀಡಿದ್ದರು.
ಮೊದಲ ಹಂತದಲ್ಲಿ ಮೆಟ್ಲಿಂಗ್ ಸರಿಯಾಗಿ ಮಾಡಿಲ್ಲ. ಕಡಿಮೆ ಪ್ರಮಾಣದಲ್ಲಿ ಡಾಂಬರ್ ಬಳಸಿದ್ದಾರೆ. ಸರಿಯಾಗಿ ರೋಲಿಂಗ್ ಮಾಡದ ಕಾರಣ ರಸ್ತೆ ಹದಗೆಟ್ಟು ಹೋಗಿದೆ. ರಸ್ತೆ ಪಕ್ಕದ ಚರಂಡಿಯನ್ನು ಕಳಪೆ ಗುಣಮಟ್ಟದಲ್ಲಿ ನಿರ್ಮಿಸಿದ್ದು ಮರಳು ಬಳಸುವ ಬದಲು ಕಡಿಮೆ ಗುಣಮಟ್ಟದ ಎಂ-ಸ್ಯಾಂಡ್ ಬಳಸಿದ್ದಾರೆ. ರಸ್ತೆಯ ಸಿಡಿ ಕೆಳಗೆ ಬೆಡ್ ಹಾಕದೆ ಎನ್‌ಪಿ-3 ಪೈಪ್ ಹಾಕಿ ಕಾಂಕ್ರಿಟ್ ಮಾಡಿದ್ದರೂ ಕ್ಯೂರಿಂಗ್ ಸರಿಯಾಗಿ ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದರು.
ಮುಖ್ಯ ಇಂಜಿನೀಯರ್ ಸುರೇಶ ಅವರು ಕೆಲ ಕಡೆ ಖುದ್ದು ತಾವೇ ಪರಿಶೀಲನೆ ನಡೆಸಿ ಗುಣಮಟ್ಟದಲ್ಲಿ ಕೊರತೆ ಇರುವುದನ್ನು ಮನಗಂಡು ಈ ಕುರಿತು ಥರ್ಡ್ ಪಾರ್ಟಿ ಇನ್ಸಪೆಕ್ಷನ್ ನಡೆಸುವಂತೆ ತಮ್ಮ ಜೊತೆಗಿದ್ದ ಕಿರಿಯ ಇಂಜಿನಿಯರ್‌ಗಳಿಗೆ ಸೂಚಿಸಿದರು.
ಪಿಡಬ್ಲುೃಡಿ ಎಇಇ ಸಂಗಮೇಶ ಶಿವನಗುತ್ತಿ, ಎಇ ರಾಜು ಚವ್ಹಾಣ, ಗ್ರಾಮಸ್ಥರಾದ ಸಂಗಣ್ಣ ಹಿರೇಗೌಡರ, ಈರಣ್ಣ ಬೋಗಾಪುರ, ಪೀರಸಾಬ ಮುಲ್ಲಾ, ಅಶೋಕ ತಾಳಿಕೋಟಿ, ಮಂಜುನಾಥ ನಾಡಗೌಡ, ಇಮಾಮಸಾಬ ಮುಲ್ಲಾ, ಈರಯ್ಯ ಹಿರೇಮಠ ಮತ್ತಿತರರು ಇದ್ದರು.