

ಕೊಕ್ಕರ್ಣೆ: ನಾಲ್ಕೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಕಜ್ಕೆ, ಕೊಂಬೆ, ಕಜ್ಕೆಬೈಲು, ಮುದ್ದೂರುಬೈಲು ರಸ್ತೆ ಸಂಪೂರ್ಣ ಹಾಳಾಗಿದ್ದು, ಮಳೆಗಾಲದಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ. ಈ ರಸ್ತೆ ನಿರ್ಮಾಣಗೊಂಡು 50 ವರ್ಷ ಕಳೆದರೂ ಇನ್ನೂ ಡಾಂಬರು ಭಾಗ್ಯ ಕೂಡಿ ಬಂದಿಲ್ಲ. ಪ್ರಸ್ತುತ ರಸ್ತೆ ಹೊಂಡ, ಕೆಸರಿನಿಂದ ಕೂಡಿದೆ. ಪೇಟೆಗೆ ಹೋಗಲು ಸವಾರರು ಮತ್ತು ಪಾದಚಾರಿಗಳು ಹರಸಾಹಸ ಪಡಬೇಕಾಗಿದೆ.
ನಾಲ್ಕೂರು ಗ್ರಾಮದ ಕಜ್ಕೆ, ಮುದ್ದೂರುಬೈಲು, ಕೊಂಬೆ ಈ ಭಾಗಗಳಲ್ಲಿ 60ಕ್ಕೂ ಅಧಿಕ ಮನೆಗಳಿದ್ದು, ಅಧಿಕವಾಗಿ ಕುಡುಬಿ ಜನಾಂಗದವರಿದ್ದು, ಹೆಚ್ಚಿನವರು ಕೃಷಿ ಕಾರ್ಯ ಮಾಡುತ್ತಿದ್ದಾರೆ. ದಶಕದ ಹಿಂದೆ ಅರ್ಧ ಕಿ.ಮೀ.ಡಾಂಬರು ನಡೆದಿದ್ದು, ಈಗ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ಅಲ್ಲದೆ ಈ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ತುರ್ತು ಸಂದರ್ಭ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ಜತೆಗೆ ಹೊಂಡಗುಂಡಿ ರಸ್ತೆಯಲ್ಲಿ ರೋಗಿಗಳನ್ನು ಕರೆದುಕೊಂಡು ಹೋಗುವುದು ತ್ರಾಸದಾಯಕ. ಈ ಭಾಗದ ಜನರು ಕೃಷಿ ಉಪಕರಣ, ಅಗತ್ಯ ಸಾಮಗ್ರಿಗಳನ್ನು ಸಾಗಿಸಲು ತ್ರಾಸಪಡಬೇಕಾಗುತ್ತದೆ. ರಸ್ತೆ ಅವ್ಯವಸ್ಥೆಯಿಂದ ಬಾಡಿಗೆ ವಾಹನದವರು ಬರಲು ಒಪ್ಪುವುದಿಲ್ಲ. ಶೀಘ್ರದಲ್ಲಿ ಇಲ್ಲಿನ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಗ್ರಾಪಂ ಬಗೆಹರಿಸುವಂತೆ ಈ ಭಾಗದ ಜನತೆ ಮನವಿ ಮಾಡಿದ್ದಾರೆ.
ಇಲ್ಲಿನ ರಸ್ತೆ ಅಭಿವೃದ್ಧಿ ಕುರಿತಂತೆ ಪ್ರತಿವರ್ಷ ಪಂಚಾಯಿತಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ನೀಡುತ್ತಾ ಬಂದಿದ್ದೇವೆ. ಈವರೆಗೆ ಯಾವುದೇ ದುರಸ್ತಿಯಾಗಿಲ್ಲ. ಇದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಶೀಘ್ರದಲ್ಲಿ ದುರಸ್ತಿ ನಡೆಸಬೇಕಿದೆ.
ಕಜ್ಕೆಬೈಲು ಮತ್ತು ಮುದ್ದೂರುಬೈಲು ಗ್ರಾಮಸ್ಥರು
ನಾಲ್ಕೂರು ಗ್ರಾಪಂ ವ್ಯಾಪ್ತಿಯ ಕಜ್ಕೆಬೈಲು, ಮುದ್ದೂರುಬೈಲು ರಸ್ತೆಗಳಿಗೆ ಕಾಂಕ್ರೀಟ್ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಮುಂದಿನ ಮಳೆಗಾಲದೊಳಗೆ ಕಾಮಗಾರಿ ಮುಗಿಯಲಿದೆ.
ಪ್ರತಾಪ್ ಹೆಗ್ಡೆ ಮಾರಾಳಿ, ಜಿಪಂ ಸದಸ್ಯ