

ಮಂಡ್ಯ: ಮಂಡ್ಯದಿಂದ ಚಿಕ್ಕಮಂಡ್ಯ ಮಾರ್ಗವಾಗಿ ಬಸರಾಳು ಗ್ರಾಮಕ್ಕೆ ತೆರಳುವ ರಸ್ತೆ ಸ್ಥಿತಿ ಅಧ್ವಾನಗೊಂಡಿದೆ. ಡಾಂಬರು ಕಿತ್ತು ಹೋಗಿ ಗುಂಡಿಗಳ ದರ್ಬಾರು ಜೋರಾಗಿದ್ದರೂ, ಇದನ್ನು ಅಭಿವೃದ್ಧಿಪಡಿಸುವ ಕೆಲಸವಾಗಿಲ್ಲ. ಪರಿಣಾಮ ಪ್ರಯಾಣಿಕರು ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ಜಿಲ್ಲಾಕೇಂದ್ರದಿಂದ ನಾಗಮಂಗಲಕ್ಕೆ ತೆರಳಲು ಈ ಮಾರ್ಗ ಬಳಸಬೇಕಿದೆ. ಅದರಂತೆ ಗೋಪಾಲಪುರ, ಎಸ್.ಐ.ಕೋಡಹಳ್ಳಿ ಗೇಟ್, ಮಲ್ಲಿಗೆರೆ, ಹೊಸೂರು ಕಾಲನಿ ಭಾಗದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಬಗ್ಗೆ ತುರ್ತು ಕ್ರಮ ವಹಿಸುವಂತೆ ಸಾರ್ವಜನಿಕರು ಮನವಿ ಮಾಡಿಕೊಳ್ಳುತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ.
ಪ್ರಯಾಣಿಕರಿಗೆ ಗುಂಡಿ ಕಾಟ: ಮಂಡ್ಯ-ನಾಗಮಂಗಲ ಮಾರ್ಗವನ್ನು ಪ್ರತಿನಿತ್ಯ ಸಾವಿರಾರೂ ಪ್ರಯಾಣಿಕರು ಅವಲಂಬಿಸಿದ್ದಾರೆ. ಬಸರಾಳು ಭಾಗದಿಂದ ಮಂಡ್ಯಕ್ಕೆ ವಿದ್ಯಾರ್ಥಿಗಳು, ಉದ್ಯೋಗಿಗಳು, ಕೂಲಿ ಕಾರ್ಮಿಕರು ಬರುತ್ತಾರೆ. ಇದಲ್ಲದೆ ಸಾವಿರಾರೂ ವಾಹನ ಸಂಚಾರವೂ ಇರುತ್ತದೆ. ಹಲವು ವರ್ಷದಿಂದ ಡಾಂಬರೀಕರಣವಾಗದೇ ರಸ್ತೆ ಹಾಳಾಗಿದೆ. ಇದರಿಂದಾಗಿ ಇದು ರಸ್ತೆಯೋ ಅಥವಾ ಗುಂಡಿಯೋ ಎನ್ನುವುದು ಪ್ರಯಾಣಿಕರಿಗೆ ಅನುಮಾನ ಮೂಡಿಸುತ್ತದೆ.
ಇನ್ನು ಈ ಮಾರ್ಗದಲ್ಲಿ ಆಲೆಮನೆ ಸಂಖ್ಯೆ ಹೆಚ್ಚಿರುವುದರಿಂದ ಎತ್ತಿನಗಾಡಿ, ಟ್ರಾೃಕ್ಟರ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಸಂಚಾರ ಮಾಡುತ್ತವೆ. ಅದರಲ್ಲಿಯೂ ಮಲ್ಲಿಗೆರೆ, ಜೀಗುಂಡಿಪಟ್ಟಣ, ಹೊಸೂರು ಕಾಲನಿ ಭಾಗದಲ್ಲಿ ರಸ್ತೆ ಸ್ಥಿತಿ ಅಧ್ವಾನದ ಹಂತ ತಲುಪಿದೆ. ಇದರಿಂದಾಗಿ ಮಂಡ್ಯ-ನಾಗಮಂಗಲ ಪ್ರಯಾಣ ಸಾರ್ವಜನಿಕರಿಗೆ ತ್ರಾಸ ಎನಿಸುತ್ತಿದೆ. ಮಳೆ ಬಂದಾಗಲಂತೂ ಪ್ರಯಾಣಿಕರ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಿರುತ್ತದೆ. ಈ ಕಾರಣಗಳಿಂದಾಗಿ ಕೆಲವರು ಪರ್ಯಾಯ ಮಾರ್ಗವಾಗಿ ಹುಲಿವಾನ, ಸಾತನೂರು ರಸ್ತೆಯನ್ನು ಬಳಸುತ್ತಿದ್ದಾರೆ.
ಬೇಕಿದೆ ಕಾಯಕಲ್ಪ: ಸಾರ್ವಜನಿಕರಿಂದ ತೀವ್ರ ಒತ್ತಡ ಹೆಚ್ಚಾದಾಗ ಗುಂಡಿಗಳಿಗೆ ತೇಪೆ ಹಚ್ಚುವ ಕೆಲಸವನ್ನು ಪಿಡಬ್ಲುೃಡಿ ಅಧಿಕಾರಿಗಳು ಮಾಡುತ್ತಾರೆ. ಆದರೆ ಇದು ತಾತ್ಕಾಲಿಕ ಪರಿಹಾರವಷ್ಟೇ ಆಗುತ್ತಿದೆ. ಮಂಡ್ಯದಿಂದ 15 ಕಿ.ಮೀ ದೂರದಲ್ಲಿರುವ ಬಿ.ಹೊಸೂರು ಕಾಲನಿಯಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕೇಂದ್ರವಿದೆ. ಇಲ್ಲಿಗೆ ಪ್ರತಿನಿತ್ಯ ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು ಬರುತ್ತಾರೆ. ಇದಲ್ಲದೆ ಇದೇ ಗ್ರಾಮದಲ್ಲಿ ತಾಯಿ ಮತ್ತು ಮಗ ಆಸ್ಪತ್ರೆ ನಿರ್ಮಾಣವಾಗಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಆ ಕೆಲಸವೂ ಮುಗಿದರೆ ಈ ಮಾರ್ಗದಲ್ಲಿ ಸಂಚಾರ ಮಾಡುವವರ ಸಂಖ್ಯೆ ಹೆಚ್ಚಲಿದೆ.
ಇನ್ನು ಈ ಮಾರ್ಗದಲ್ಲಿ ಶಾಸಕ ರವಿಕುಮಾರ್ ಗಣಿಗ ಅವರು ಸಂಚಾರ ಮಾಡುತ್ತಿರುತ್ತಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಹಾಗೂ ಗುಣಮಟ್ಟದ ರಸ್ತೆ ಕಾಮಗಾರಿ ಮಾಡಿಸಬೇಕಿದೆ. ಇಲ್ಲದಿದ್ದರೆ ಸಾರ್ವಜನಿಕರ ಹಿಡಿಶಾಪಕ್ಕೆ ಗುರಿಯಾಗಬೇಕಾಗುತ್ತದೆ.
ಅತಿ ಹೆಚ್ಚು ಗುಂಡಿ ಬಿದ್ದಿರುವ ಜಾಗವನ್ನು ಗುರುತಿಸಲಾಗಿದೆ. ಅಂತೆಯೇ ಆ ಜಾಗಗಳಲ್ಲಿ ಹೊಸದಾಗಿ ರಸ್ತೆ ಮಾಡಲು ಯೋಜನೆ ಸಿದ್ಧವಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಒಂದು ತಿಂಗಳೊಳಗೆ ಈ ಮಾರ್ಗದ ರಸ್ತೆಯ ಎಲ್ಲ ಗುಂಡಿಗಳನ್ನು ಮುಚ್ಚಲು ವ್ಯವಸ್ಥೆ ಮಾಡಲಾಗುವುದು.ಸತೀಶ್ಎಇಇ, ಪಿಡಬ್ಲುೃಡಿ