ರಸ್ತೆಯಲ್ಲಿ ಸಂಚಾರ ಮಾಡಲು ತೊಂದರೆ: ದುರಸ್ತಿ ಮಾಡುವಂತೆ ಜಿಲ್ಲಾ ಪಂಚಾಯಿತಿಗೆ ಮನವಿ ಪತ್ರ ಸಲ್ಲಿಸಿದ ನೊಂದ ಗ್ರಾಮಸ್ಥರು

21_09_Mdy_01(Manavi)
Published on

ಮಂಡ್ಯ: ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಗುಂಡಿ ಬಿದ್ದ ರಸ್ತೆಗಳಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಆದ್ದರಿಂದ ತುರ್ತು ದುರಸ್ತಿ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಮತ್ತು ಮುಖಂಡರು ಬುಧವಾರ ಮನವಿ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿಗೆ ಆಗಮಿಸಿದ ತೂಬಿನಕೆರೆ ಸರ್‌ಎಂವಿ ಸ್ನಾತಕೋತ್ತರ ಕೇಂದ್ರ, ಮಂಡ್ಯ ವಿವಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವಿದ್ಯಾರ್ಥಿಗಳು, ಆಮ್ ಆದ್ಮಿ ಪಕ್ಷ, ಕನ್ನಡ ಸೇನೆ ಮುಖಂಡರು ಸೇರಿದಂತೆ ಜಿಪಂ ಉಪಕಾರ್ಯದರ್ಶಿ ಕೆ.ಪಿ.ಸಂಜೀವಪ್ಪ ಅವರಿಗೆ ಮನವಿ ಕೊಡಲಾಯಿತು.

ರಾಗಿಮುದ್ದನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಜಕ್ಕನಹಳ್ಳಿ ಮತ್ತು ತೂಬಿನಕೆರೆ ಸಂಪರ್ಕದ ಗುಂಡಿಬಿದ್ದ ರಸ್ತೆಯಿಂದ ರೈತರಿಗೆ ವಿದ್ಯಾರ್ಥಿಗಳಿಗೆ ಅಂಗವಿಕಲರಿಗೆ ಆಗುತ್ತಿರುವ ಅನಾನುಕೂಲ ಸರಿಪಡಿಸಬೇಕು. ಈ ರಸ್ತೆಯು ಗುಂಡಿಬಿದ್ದು ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಪ್ರತಿನಿತ್ಯ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಿ ಬರಲು, ಕೃಷಿ ಚಟುವಟಿಕೆಗೆಂದು ಹೊಲಗಳಿಗೆ ಹೋಗುವ ರೈತರು ಹಾಗೂ ಹೈನುಗಾರಿಕೆ ಅವಲಂಬಿತರಿಗೆ ರಸ್ತೆಯಲ್ಲಿ ಹೋಗುವುದಕ್ಕೂ ಹರಸಾಹಸ ಪಡಬೇಕಿದೆ. ತರಕಾರಿ ತುಂಬಿದ ವಾಹನಗಳು, ಹಾಲಿನ ಡೇರಿ ಹಾಗೂ ಪಡಿತರ ತುಂಬಿದ ವಾಹನಗಳು ಬರುವುದಕ್ಕೂ ತೊಡಕಾಗಿದೆ. ಪ್ರಮುಖವಾಗಿ ಅಕ್ಕಪಕ್ಕದ ರೈತರು ತಾವು ಬೆಳೆದ ತರಕಾರಿಗಳನ್ನು ಪ್ರಮುಖ ಮಾರುಕಟ್ಟೆಗೆ ತರುವುದಕ್ಕೆ ಅನಾನುಕೂಲವಾಗಿದೆ. ದ್ವಿಚಕ್ರ ವಾಹನ ಸವಾರರು ಹಲವು ಬಾರಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ ಎಂದು ದೂರಿದರು.

ತೂಬಿನಕೆರೆ, ಜಕ್ಕನಹಳ್ಳಿ, ಚೆನ್ನನಕೆರೆ, ಉರಮಾರಕಸಲಗೆರೆ, ಆಲಗೂಡು, ಕೋಡಿಶೆಟ್ಟಡಿಪುರ, ರಾಂಪುರ, ಗಣಂಗೂರು ಸೇರಿದಂತೆ ವಿವಿಧ ಗ್ರಾಮದ ರೈತರು ಬೆಳೆದ ತರಕಾರಿಗಳನ್ನು ಜಿಲ್ಲಾ ಕೇಂದ್ರದ ಮಾರುಕಟ್ಟೆಗೆ ಸಾಗಿಸಲು ಅನಾನುಕೂಲವಾಗಿದೆ. ಹೃದಯಭಾಗದಂತಿರುವ ರಾಗಿಮುದ್ದನಹಳ್ಳಿ ಗ್ರಾಮದ ರಸ್ತೆಯ ಮೂಲಕ ಹಾದುಹೋಗಲು ಹರಸಾಹಸ ಪಡಬೇಕಿದೆ. ಹಲವು ವರ್ಷಗಳಿಂದಲೂ ದುರಸ್ತಿ ಮಾಡಿಸುವುದಕ್ಕಾಗಲಿ ಅಥವಾ ಡಾಂಬರೀಕರಣಕ್ಕಾಗಲೀ ಮುಂದಾಗದಿರುವುದು ದುರಂತ. ಆದ್ದರಿಂದ ಸಮಸ್ಯೆಗಳನ್ನು ಬಗೆಹರಿಸಿಕೊಟ್ಟು ಜಕ್ಕನಹಳ್ಳಿ ಸಂಪರ್ಕಿಸುವ ರಸ್ತೆ ದುರಸ್ತಿ ಹಾಗೂ ಪೂರ್ಣ ಡಾಂಬರೀಕರಣಕ್ಕೆ ನೆರವಾಗಬೇಕೆಂದು ಎಂದು ಒತ್ತಾಯಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಟಿ.ವರಪ್ರಸಾದ್, ಕನ್ನಡ ಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಮಂಜುನಾಥ್, ಎಎಪಿ ಪಕ್ಷದ ಬೂದನೂರು ಬೊಮ್ಮಯ್ಯ, ಗ್ರಾಮಸ್ಥರಾದ ಸಿದ್ದರಾಜು, ಮೋಹನ್‌ಕುಮಾರ್, ವಿದ್ಯಾರ್ಥಿಗಳಾದ ಕಿರಣ್, ಬಿ.ಎನ್.ಸುನೀಲ್, ಬಿ.ಎಸ್.ರಕ್ಷಿತಾ, ಎಂ.ಮಹದೇವಸ್ವಾಮಿ, ಜಿ.ಆರ್.ಮಂಜುನಾಥ್, ಚಂದನ್, ಬಿ.ಟಿ.ನಿಖಿಲ್, ಎಂ.ಸುಮನ್, ಮಮತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net