ಕೂಳೂರಲ್ಲಿ ಮತ್ತೆ ಸಂಚಾರ ಬ್ಲಾಕ್: ಸೇತುವೆ ಮೇಲೆ ಕುಳಿಗಳೆದ್ದು ವಾಹನ ಓಡಾಟ ಸ್ಲೋ

block
Published on

ಮಂಗಳೂರು: ಕೂಳೂರಿನ ಎರಡೂ ಸೇತುವೆಗಳಲ್ಲೂ ಹೊಂಡಗಳು ಉಂಟಾಗಿದ್ದು ಸಂಚಾರ ಹೆಚ್ಚಿರುವ ಅವಧಿಗಳಲ್ಲಿ ನಿರಂತರ ಬ್ಲಾಕ್ ಮುಂದುವರಿದಿದೆ.

ಕೆಲವು ದಿನಗಳ ಹಿಂದೆಯೇ ಮುಖ್ಯವಾಗಿ ಹೊಸ ಸೇತುವೆಯ(ಉಡುಪಿ ಕಡೆಗೆ ಹೋಗುವುದು) ಉದ್ದಕ್ಕೂ ಅಲ್ಲಲ್ಲಿ ಕುಳಿಗಳು ಉಂಟಾಗಿದ್ದು ಅದರಿಂದ ಅಲ್ಲಿ ಹೋಗುವಾಗ ವಾಹನಗಳು ಸಹಜವಾಗಿಯೇ ವೇಗ ಕಡಿಮೆಗೊಳಿಸುತ್ತವೆ. ಇದರಿಂದ ಸಂಚಾರ ದಟ್ಟಣೆಯ ಅವಧಿಯಲ್ಲಿ ವಾಹನಗಳು ಬಹುತೇಕ ಬಂಗ್ರಕೂಳೂರು, ಕರಾವಳಿ ಕಾಲೇಜುವರೆಗೂ ವಾಹನಗಳು ಅಡ್ಡಾದಿಡ್ಡಿ ನಿಂತು ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ.

ಕಳೆದ ತಿಂಗಳು ಒಮ್ಮೆ ಮಳೆ ಕಡಿಮೆಯಾದ ಬಳಿಕ ಹೆದ್ದಾರಿ ಪ್ರಾಧಿಕಾರ ವತಿಯಿಂದ ತೇಪೆ ಹಾಕುವ ಕಾರ್ಯ ನಡೆದಿತ್ತು. ಆದರೆ ಈಗ ಮತ್ತೆ ಮಳೆ ಹೆಚ್ಚಾಗಿರುವುದರಿಂದ ಹೊಂಡಗಳು ಸೃಷ್ಟಿಯಾಗಿವೆ. ಹಳೇ ಕಮಾನು ಸೇತುವೆಯಲ್ಲೂ ಮತ್ತೆ ಹೊಂಡಗಳು ಸೃಷ್ಟಿಯಾಗುವ ಸಂಭವ ಇದೆ. ಅದರಲ್ಲೂ ಒಮ್ಮೆ ಹಾಕಿರುವ ಡಾಂಬರು ಕಿತ್ತು ಹೋಗುವ ಲಕ್ಷಣಗಳು ಕಂಡುಬಂದಿದೆ.

ಎಲ್ಲೆಂದರಲ್ಲಿ ಸಂಚಾರ: ಬೆಳಗ್ಗೆ, ಸಾಯಂಕಾಲ ವೇಳೆ ಸಾಲು ಸಾಲು ವಾಹನಗಳು ರಸ್ತೆ ಮೇಲಿದ್ದು ಎಲ್ಲರೂ ಗಮ್ಯ ಸ್ಥಾನ ತಲುಪಲು ತರಾತುರಿಯಲ್ಲಿರುತ್ತಾರೆ. ಈ ಸಂದರ್ಭ ಸಿಕ್ಕಸಿಕ್ಕ ಸಂಧುಗಳಲ್ಲಿ, ಎಡೆಗಳಲ್ಲಿ ವಾಹನ ಚಲಾಯಿಸುತ್ತಾರೆ. ಇದರಿಂದ ರಸ್ತೆ ಬದಿ ನಡೆದುಕೊಂಡು ಹೋಗುವವರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಬಂಗ್ರಕೂಳೂರು ರಸ್ತೆ ಬದಿ ಹೀಗೆ ವಾಹನ ಚಲಾಯಿಸಿದರೆ ಪಾದಚಾರಿಗಳಿಗೆ ನಡೆದಾಡಲೂ ಜಾಗವಿಲ್ಲದಂತಾಗಿದೆ.

ಮಳೆ ಬಂದು ಕೆಟ್ಟೆವು: ಒಂದು ವಾರದಿಂದ ಹೊಂಡಕ್ಕೆ ನಿರಂತರ ಜಲ್ಲಿಪುಡಿ ಮಿಶ್ರಿತ ಕಲ್ಲು ಹಾಕಲಾಗುತ್ತಿದೆ, ಆದರೆ ರಾತ್ರಿ ತೀವ್ರ ಮಳೆಯಾಗುತ್ತಿರುವುದರಿಂದ ಅದು ಎದ್ದು ಹೋಗುತ್ತಿದೆ. ಸೆ.20ರವರೆಗೂ ಮಳೆಯಾಗುವ ಲಕ್ಷಣಗಳಿವೆ. ಅಲ್ಲಿವರೆಗೆ ಜಲ್ಲಿ ಪುಡಿ ಹಾಕಬೇಕಷ್ಟೆ. ಆ ಬಳಿಕವೇ ಡಾಂಬರು ಹಾಕಿ ಸರಿಪಡಿಸಬೇಕಾಗಿದೆ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಶಿಶುಮೋಹನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net