ತಗ್ಗು-ಗುಂಡಿಗಳ ಹಾದಿ-ಅನಾರೋಗ್ಯಕ್ಕೆ ರಹದಾರಿ

ROAD
Published on

ಸಂತೋಷ ಮುರಡಿ ಮುಂಡರಗಿ

ಪಟ್ಟಣವು ನಾಗಾಲೋಟದಲ್ಲಿ ಬೆಳೆಯುತ್ತಿದ್ದು ಜನಸಂಖ್ಯೆಯ ಜತೆಗೆ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ, ಹಲವೆಡೆ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಹಾಳಾದ ರಸ್ತೆಗಳಲ್ಲಿ ಸಂಚಾರ ಮಾಡುತ್ತಿರುವುದರಿಂದ ಗಾಡಿಗಳು ರಿಪೇರಿಗೆ ಬರುತ್ತಿವೆ. ಜತೆಗೆ ಸವಾರರ ಆರೋಗ್ಯವೂ ಹದಗೆಡುತ್ತಿದೆ.

ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು, ಕೆಲ ವಾರ್ಡ್‌ಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗಳು ಸುಸ್ಥಿತಿಯಲ್ಲಿದ್ದರೆ, ಒಳರಸ್ತೆಗಳು ತೀರ ಹದಗೆಟ್ಟಿವೆ. ಹಲವು ದಶಕಗಳು ಕಳೆದರೂ ಉತ್ತಮ ರಸ್ತೆಗಳ ನಿರ್ಮಾಣ ಕಾರ್ಯ ನಡೆದಿಲ್ಲ. ಕೆಲವೊಂದು ಕಡೆಗಳಲ್ಲಿ ಸಿಸಿ, ಡಾಂಬರ್ ರಸ್ತೆಗಳಿದ್ದರೆ, ಇನ್ನೂ ಅನೇಕ ಕಡೆ ಮಣ್ಣಿನ ರಸ್ತೆಗಳೇ ಕಾಣುತ್ತವೆ. ಅದರಲ್ಲಿ ಅಲ್ಲಲ್ಲಿ ತಗ್ಗು-ಗುಂಡಿಗಳು ಬಿದ್ದಿದ್ದು ಪಾದಚಾರಿಗಳು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

ಇಲ್ಲಿನ ಬಸವೇಶ್ವರ ನಗರ, ಎ.ಡಿ. ನಗರ, ಹುಡ್ಕೋ ಭಾಗ, ವಿವೇಕಾನಂದ ನಗರ, ಹೇಮರಡ್ಡಿ ಮಲ್ಲಮ್ಮ ನಗರ ಹೀಗೆ... ಇನ್ನಿತರ ಕಡೆಗಳಲ್ಲಿ ಒಳ ರಸ್ತೆಗಳು ಹದಗೆಟ್ಟು ಸಂಚಾರಕ್ಕೆ ತಲೆಬಿಸಿಯಾಗುತ್ತಿದೆ. ಕೆಲ ಕಡೆ ಸಿಸಿ, ಡಾಂಬರ್ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಸಹ ಬಿದ್ದಿವೆ. ಇನ್ನೂ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪಿಡಬ್ಲುೃಡಿಯ ಕೊಪ್ಪಳ ರಸ್ತೆ, ಘಟ್ಟಿರಡ್ಡಿಹಾಳ ರಸ್ತೆ, ರಾಮೇನಹಳ್ಳಿ ಭಾಗದ ರಸ್ತೆ ಇನ್ನಿತರ ಕಡೆ ತಗ್ಗು-ಗುಂಡಿಗಳಿಂದ ಕೂಡಿದೆ.

ಮಳೆ ಬಂದರೆ ಸಾಕು ರಸ್ತೆಗಳಲ್ಲಿ ತಗ್ಗು-ಗುಂಡಿಗಳಲ್ಲಿ ಮಳೆ ನೀರು ನಿಲ್ಲುತ್ತದೆ. ಅದನ್ನು ದಾಟಿ ಮುಂದೆ ಸಾಗಲು ಪೇಚಾಡಬೇಕಾಗಿದೆ. ಇನ್ನು ಹದಗೆಟ್ಟ ರಸ್ತೆ ಮೇಲೆ ಕೆಲ ಕಡೆ ಚರಂಡಿ ನೀರು ಬಂದು ನಿಲ್ಲುತ್ತಿದೆ. ಗಲೀಜು ಮೇಲೆಯೇ ನಡೆಯುವಂತಾಗಿದೆ. ಸರ್ಕಾರದಿಂದ ಪುರಸಭೆಗೆ ಬರುವಂತ ಅನುದಾನದಲ್ಲಿ ಎಲ್ಲ ವಾರ್ಡಿಗೆ ರಸ್ತೆ ದುರಸ್ತಿಗೆ ಹಂಚಿಕೊಂಡರೆ ಅಲ್ಲಲ್ಲಿ ಅಲ್ಪಸ್ವಲ್ಪ ಎಂಬಂತೆ ಕೆಲವೊಂದು ಭಾಗದ ರಸ್ತೆಗಳು ದುರಸ್ತಿಯಾಗುತ್ತಿವೆ ಹೊರತು ಪೂರ್ಣ ಪ್ರಮಾಣದಲ್ಲಿ ರಸ್ತೆಗಳು ಅಭಿವೃದ್ಧಿ ಕಾಣುತ್ತಿಲ್ಲ.

ಕಳೆದ ವರ್ಷ ನಗರೋತ್ಥಾನ ಯೋಜನೆಯಡಿ ಕೈಗೊಂಡ ರಸ್ತೆ ಅಭಿವೃದ್ಧಿ ಕೆಲಸದಲ್ಲಿ ಕೆಲವೊಂದು ಕಡೆ ಇನ್ನೂ ಕೆಲಸ ನಡೆದಿಲ್ಲ. ಸರ್ಕಾರ ಪುರಸಭೆಗೆ ಹೆಚ್ಚು ಪ್ರಮಾಣದಲ್ಲಿ ಅನುದಾನ ನೀಡಿ ಪೂರ್ಣಪ್ರಮಾಣದಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

ಬಸವೇಶ್ವರ ನಗರ ಸೇರಿ ಹಲವು ಕಡೆಗಳಲ್ಲಿ ಮುಖ್ಯರಸ್ತೆಯಿಂದ ಒಳ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿವೆ. ಕೆಲವೊಂದು ಕಡೆ ದಶಕಗಳಿಂದಲೂ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಕೆಲಸ ಆಗುತ್ತಿಲ್ಲ. ಚರಂಡಿ ನೀರು ಸಹ ರಸ್ತೆ ಮಳೆ ನಿಲ್ಲುತ್ತಿದೆ. ಮಳೆ ಬಂದರೆ ರಸ್ತೆಯ ತಗ್ಗು-ಗುಂಡಿಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಂತ ನಿಟ್ಟಿನಲ್ಲಿ ಕಾಳಜಿ ವಹಿಸುವುದು ಅತ್ಯವಶ್ಯವಿದೆ. ಮಂಜುನಾಥ ಕಟ್ಟಿಮನಿ, 6ನೇ ವಾರ್ಡಿನ ನಿವಾಸಿ ಮುಂಡರಗಿ ಪುರಸಭೆಯ ಎಸ್.ಎಫ್.ಸಿ., 15ನೇ ಹಣಕಾಸು ಯೋಜನೆ, ನಗರೋತ್ಥಾನ ಯೋಜನೆಯಡಿ ರಸ್ತೆಗಳ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಸುಮಾರು 20 ವರ್ಷಗಳ ಹಿಂದಿನ ಹಳೇ ಲೇಔಟ್‌ನಲ್ಲಿ ಹಂತ-ಹಂತವಾಗಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಹೊಸ ಲೇಔಟ್‌ನಲ್ಲಿ ಆ ಲೇಔಟ್ ಮಾಲೀಕರೇ ರಸ್ತೆ ಅಭಿವೃದ್ಧಿ ಪಡಿಸಿಕೊಡಬೇಕು. ಈ ಬಗ್ಗೆ ಸೂಕ್ತ ಕ್ರಮ ವಹಿಸಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಶಂಕರ ಹುಲ್ಲಮ್ಮನವರ, ಮುಖ್ಯಾಧಿಕಾರಿ ಮುಂಡರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net