

ಪ್ರಶಾಂತ ಭಾಗ್ವತ, ಉಡುಪಿ
ಮಂಗಳೂರಿನಿಂದ ಗೋವಾದವರೆಗೆ ರಾಷ್ಟ್ರೀಯ ಹೆದ್ದಾರಿ ಚತುಷ್ಫಥವಾಗಿ ಅಭಿವೃದ್ಧಿಗೊಂಡ ಬಳಿಕ ಇಲ್ಲಿ ವಾಹನ ಸಂಚಾರ ಸುಗಮಗೊಂಡಿದೆ. ಆದರೆ, ಹೆದ್ದಾರಿಯ ಎಡ-ಬಲಗಳಲ್ಲಿ ವಿವಿಧ ಗ್ರಾಮಗಳಿಗೆ ಸಂಪರ್ಕ ಒದಗಿಸುವ ಕ್ರಾಸ್ಗಳಿಗೆ ಪೂರಕವಾಗಿ ರಸ್ತೆ ಜೋಡಿಸದ್ದರಿಂದ ಸ್ಥಳೀಯರು ಪರದಾಡುವಂತಾಗಿದೆ.
ಚತುಷ್ಪಥ ಕಾಮಗಾರಿಯಿಂದಾಗಿ ಅನೇಕ ಗ್ರಾಮಗಳಿಗೆ ತೆರಳಲು ತೊಡಕಾಗಿದ್ದು, ಅವುಗಳಲ್ಲಿ ಉಡುಪಿ ತಾಲೂಕಿನ ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೆಜಿ ರೋಡ್ ಕ್ರಾಸ್ ದುರವಸ್ಥೆಯಿಂದ ಕೂಡಿದೆ. ಹೆದ್ದಾರಿ ದಾಟಲು ವಾಹನ ಸವಾರರು ನಿತ್ಯ ತೊಂದರೆ ಪಡುವಂತಾಗಿದೆ.
ಕುಂದಾಪುರ ಮಾರ್ಗವಾಗಿ ಉಡುಪಿಯತ್ತ ಬರುವಾಗ ಉಪ್ಪೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆಜಿ ರೋಡ್ ಕ್ರಾಸ್ ಇದೆ. ಈ ಭಾಗದಿಂದ ಬರುವ ವಾಹನ ಸವಾರರಿಗೆ ಉಪ್ಪೂರು ಗ್ರಾಮದತ್ತ ತೆರಳಲು ತೊಂದರೆ ಇಲ್ಲ. ಆದರೆ, ಉಪ್ಪೂರು ಗ್ರಾಮದಿಂದ ಬಂದು, ಕುಂದಾಪುರದ ಕಡೆ ಹೋಗುವ ಸವಾರರಿಗೆ ತೀವ್ರ ತೊಂದರೆ ಆಗುತ್ತಿದೆ. ಕ್ರಾಸ್ನಿಂದ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸುಮಾರು 300 ಮೀಟರ್ ಸಂಚರಿಸಿ, ಅಲ್ಲಿ ತೆರೆದಿರುವ ಡಿವೈಡರ್ ಮೂಲಕ ವಾಹನ ಸಂಚರಿಸಬೇಕಿದೆ.
ಕುಂದಾಪುರ ಮಾರ್ಗದಿಂದ ಚತುಷ್ಪಥ ಹೆದ್ದಾರಿಯಲ್ಲಿ ಭಾರಿ ವೇಗವಾಗಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸಂಚಾರವಿದೆ. ಇದೇ ಮಾರ್ಗದಲ್ಲಿಯೇ ಉಪ್ಪೂರು ಕಡೆಯಿಂದ ಬರುವ ಬೈಕ್, ರಿಕ್ಷಾ, ಕಾರು ಸೇರಿದಂತೆ ಎಲ್ಲ ಬಗೆಯ ವಾಹನಗಳೂ ವಿರುದ್ಧ ದಿಕ್ಕಿನಲ್ಲಿ ಬರುತ್ತವೆ. ಅಲ್ಲದೆ, ಉಡುಪಿ ಕಡೆ (ಸಂತೆಕಟ್ಟೆ)ಯಿಂದ ಉಪ್ಪೂರು ಗ್ರಾಮಕ್ಕೆ ತೆರಳುವ ವಾಹನಗಳೂ ಸಹ ಕೆಜಿ ರೋಡ್ ಕ್ರಾಸ್ಗೆ ಬರಲು ಕುಂದಾಪುರ&ಉಡುಪಿ ಹೆದ್ದಾರಿಯಲ್ಲಿರುವ ಇದೇ ಡಿವೈಡರ್ ಮೂಲಕ ಒಳಬರುತ್ತವೆ. ಇಲ್ಲಿ ಪೊಲೀಸ್ ಬ್ಯಾರಿಕೇಡ್ ಸಹ ಇಲ್ಲದ್ದರಿಂದ ನಿತ್ಯವೂ ಸಣ್ಣಪುಟ್ಟ ಅಪಘಾತ ಮಾಮೂಲು ಎನ್ನುವಂತಾಗಿದೆ.
ಬೈಂದೂರಿನಿಂದ ಮಂಗಳೂರುವರೆಗಿನ ಹೆದ್ದಾರಿ ಅಕ್ಕಪಕ್ಕದಲ್ಲಿ ಗ್ರಾಮ ಸಂಪರ್ಕಿಸುವ ಅನೇಕ ಕ್ರಾಸ್ಗಳು ಇಂಥಹುದೇ ತೊಂದರೆ ಅನುಭವಿಸುತ್ತಿವೆ. ಸ್ಥಳೀಯ ಆಡಳಿತ ಅಥವಾ ಜಿಲ್ಲಾಡಳಿತ ಕ್ರಾಸ್ಗಳಿಗೆ ಪೂರಕವಾಗಿ ಹೆದ್ದಾರಿ ಸಂಪರ್ಕಿಸುವ ವ್ಯವಸ್ಥೆ ಮಾಡಬೇಕೆಂಬ ಆಗ್ರಹ ಕೇಳಿ ಬಂದಿದೆ.
ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚು ಅಪಘಾತವಾಗುವ 20 ಬ್ಲ್ಯಾಕ್ ಸ್ಪಾಟ್ ಗುರುತಿಸಲಾಗಿದೆ. ಯಾವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹೆಚ್ಚು ಅಪಘಾತ ಆಗುತ್ತದೆಯೋ ಅಂತಹ ಸ್ಥಳಗಳಲ್ಲಿ ಅಗತ್ಯವಿರುವ ಸುರಕ್ಷತಾ ಕ್ರಮ ಕೈಗೊಳ್ಳಲು, ಪೂರಕ ರಸ್ತೆ ನಿರ್ಮಿಸಬೇಕಿದೆ. ಅದಕ್ಕಾಗಿ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಕ್ರಿಯಾ ಯೋಜನೆಯಡಿ ನೀಡಿದ ಅನುದಾನ ಬಳಸಲು ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಗೆ ಉಡುಪಿ ಜಿಲ್ಲಾಡಳಿತ ಈಗಾಗಲೇ ತಿಳಿಸಿದೆ. ಆದರೆ, ಸಮಸ್ಯೆ ಎದುರಿಸುತ್ತಿರುವ ಕೆಜಿ ರೋಡ್ ಕ್ರಾಸ್ನಂತಹ ಅನೇಕ ಸಂಪರ್ಕ ರಸ್ತೆಗಳನ್ನು ಸರಿಪಡಿಸುವವರು ಚತುಷ್ಪಥ ನಿರ್ಮಾಣ ಮಾಡಿದ ಗುತ್ತಿಗೆ ಕಂಪನಿವರೇ ಅಥವಾ ಜಿಲ್ಲಾಡಳಿತವೇ ಎಂಬ ಪ್ರಶ್ನೆ ಉದ್ಭವಿಸಿದೆ.
ರಾಷ್ಟ್ರೀಯ ಹೆದ್ದಾರಿ ಮೂಲಕ ಕೆಜಿ ರೋಡ್ ಕ್ರಾಸ್ನಿಂದ ಉಪ್ಪೂರಿಗೆ ತೆರಳಲು ಅನೇಕ ವರ್ಷದಿಂದ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಈ ಕ್ರಾಸ್ ಬಿಟ್ಟರೆ ಸಂತೆಕಟ್ಟೆಯಿಂದ ಸುತ್ತುಬಳಸಿ ಉಪ್ಪೂರಿಗೆ ಬರಬೇಕಾಗುತ್ತದೆ. ಹೀಗಾಗಿ ಈ ಭಾಗದ ಜನರ ಹಾಗೂ ವಾಹನಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಸರ್ವೀಸ್ ರೋಡ್ ನಿರ್ಮಿಸಬೇಕು. | ಸತೀಶ್ ಪೂಜಾರಿ. ಉಪಾಧ್ಯಕ್ಷ, ಉಪ್ಪೂರು ಗ್ರಾಪಂ ಹೆದ್ದಾರಿಯಲ್ಲಿ ಎಲ್ಲೆಲ್ಲಿ ಸಮಸ್ಯೆ ಇದೆಯೋ ಅಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲು ಹೆದ್ದಾರಿ ಪ್ರಾಧಿಕಾರಕ್ಕೆ ಈಗಾಗಲೇ ಸೂಚನೆ ನೀಡಿದ್ದೇನೆ. ಅಗತ್ಯ ಇರುವೆಡೆ ಪಾದಚಾರಿಗಳ ಕ್ರಾಸಿಂಗ್, ಜೀಬ್ರಾ ಕ್ರಾಸಿಂಗ್, ಸೂಚನಾ ಫಲಕ, ಹೈಮಾಸ್ಟ್ ದೀಪ, ಬ್ಲಿಂಕರ್ಸ್, ರಸ್ತೆಗಳಿಗೆ ಹಂಪ್ಸ್, ಎಂಎಸ್ ರೈಲಿಂಗ್ಸ್ ಸೇರಿದಂತೆ ಅಗತ್ಯ ಸುರಕ್ಷತಾ ಕಾಮಗಾರಿ ಕೈಗೊಳ್ಳಬೇಕು. | ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ, ಉಡುಪಿ