

-ನರೇಂದ್ರ ಎಸ್.ಮರಸಣಿಗೆ ಹೆಬ್ರಿ
ಹೆಬ್ರಿ ತಾಲೂಕು ಮಂಡಾಡಿ ಜೆಡ್ಡಿನಿಂದ ಹಂದಿಕಲ್ಲು ಹೋಗುವ ಕಾಂಕ್ರಿಟ್ ರಸ್ತೆ ಕಾಮಗಾರಿ ತೀರಾ ಕಳಪೆಯಾಗಿದ್ದು, ಕಾಮಗಾರಿಗೆ ಬಳಸಿದ ವಸ್ತುಗಳು ಪುಡಿ ಪುಡಿಯಾಗಿ ರಸ್ತೆಯ ಬದಿಯಲ್ಲಿ ಕಾಣ ಸಿಗುತ್ತಿದೆ. ಉದ್ಘಾಟನೆಗೊಂಡ ಮೂರೇ ತಿಂಗಳಲ್ಲಿ ಕಾಮಗಾರಿಯ ಬಣ್ಣ ಬಯಲಾಗಿದೆ.
ಲೋಕೋಪಯೋಗಿ ಇಲಾಖೆಯಿಂದ 25 ಲಕ್ಷ ರೂ.ವೆಚ್ಚದಲ್ಲಿ 330 ಮೀಟರ್ ರಸ್ತೆಯನ್ನು ನಿರ್ಮಿಸಿ ಮಾರ್ಚ್ ಅಂತ್ಯಕ್ಕೆ ಉದ್ಘಾಟನೆ ಮಾಡಲಾಗಿತ್ತು. ರಸ್ತೆ ಕಳಪೆ ಮಟ್ಟದಾಗಿದ್ದು. ಅಧಿಕಾರಿಗಳು ಹಾಗೂ ಕಂಟ್ರಾಕ್ಟರ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲಸ ಕಳಪೆ ಕಾಮಗಾರಿಯಿಂದ ಕೂಡಿದ್ದು, ಆ ನಿಟ್ಟಿನಲ್ಲಿ ಕಾರ್ಕಳ ತಾಲೂಕು ಜೆಡಿಎಸ್ ವತಿಯಿಂದ ಉಡುಪಿ ಜಿಲ್ಲಾಧಿಕಾರಿಗೆ ಅನುದಾನ ತಡೆಯುವ ಬಗ್ಗೆ ಮನವಿ ಮಾಡಿದ್ದಾರೆ. ರಸ್ತೆ ಸಮರ್ಪಕವಾಗಿ ನಿರ್ಮಾಣ ಆಗೋತನಕ ಅನುದಾನದ ತಡೆಹಿಡಿಯಲು ಒತ್ತಾಯಿಸಿದೆ. ಕಾಮಗಾರಿ ಎಷ್ಟು ಕಳಪೆ ಎಂದರೆ ಕಾಲಿನಿಂದ ಕೆರೆದರೆ ಪುಡಿ ಮೇಲೆ ಎದ್ದು ಬರುತ್ತದೆ. ಸಮರ್ಪಕವಾಗಿ ಕಾಂಕ್ರಿಟ್ ರಸ್ತೆಯ ನಿರ್ಮಾಣಕ್ಕೆ ಅಗತ್ಯ ಸಾಮಗ್ರಿ ಬಳಸದೆ ಇರುವುದರಿಂದ ಈ ಸಮಸ್ಯೆ ಎದುರಾಗಿದೆ.
ಮಂಡಾಡಿಜೆಡ್ಡು ಹಾಗೂ ಹಂದಿಕಲ್ಲು ಮಾರ್ಗದ 330 ಮೀಟರ್ ರಸ್ತೆ ಆದ ನಂತರ ಇನ್ನೊಂದು ರಸ್ತೆಯನ್ನು ಬೇರೆ ಕಾಂಟ್ರಾಕ್ಟರ್ ನಿರ್ಮಾಣ ಮಾಡಿದ್ದಾರೆ. ಈ ರಸ್ತೆ ಉತ್ತಮ ಗುಣಮಟ್ಟದ್ದಾಗಿದೆ. ಸಾರ್ವಜನಿಕರು ಎರಡು ರಸ್ತೆಯನ್ನು ಹೋಲಿಕೆ ಮಾಡಿ 330 ಮೀಟರ್ ರಸ್ತೆ ಅತ್ಯಂತ ಕಳಪೆ ಮಟ್ಟದ್ದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಇಷ್ಟು ಕಳಪೆ ಮಟ್ಟದ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಲೆದಂಡವಾಗಬೇಕು. ಉದ್ಘಾಟನೆಯಾಗಿ ಕೆಲವೇ ತಿಂಗಳಲ್ಲಿ ರಸ್ತೆಯ ಅಧೋೀಗತಿ ನೋಡಲು ಸಾಧ್ಯವಾಗುತ್ತಿಲ್ಲ. ಇಲಾಖಾಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲು ಜನ ಒತ್ತಾಯಿಸುತ್ತಿದ್ದಾರೆ. ಅದಲ್ಲದೆ ಕಳಪೆ ಕಾಮಗಾರಿ ಜವಾಬ್ದಾರಿ ಕೂಡ ಹೊರಬೇಕು ಎನ್ನುತ್ತಾರೆ. ರಸ್ತೆಯ ಕಳಪೆ ಕಾಮಗಾರಿಯ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಲೋಕಾಯುಕ್ತಕ್ಕೆ ಕಾರ್ಕಳ ಜೆಡಿಎಸ್ ಅಧ್ಯಕ್ಷ ಶ್ರೀಕಾಂತ ಪೂಜಾರಿ ದೂರು ನೀಡಿ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ರಸ್ತೆಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುವ ಕುರಿತು ಉಲ್ಲೇಖಿಸಿದ್ದಾರೆ.
ಆದರೆ ಕಾರ್ಕಳದ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರಸ್ತೆಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ ಎನ್ನುತ್ತಾರೆ. ಮತ್ತೆ ಏನಾದರೂ ಸಮಸ್ಯೆ ಇದ್ದಲ್ಲಿ ಸರಿ ಮಾಡಿ ಕೊಡುತ್ತೇನೆ ಅನ್ನುತ್ತಾರೆ.ಯಾರಾದರೂ ಆ ರಸ್ತೆಯ ಅವ್ಯವಸ್ಥೆ ನೋಡಿದರೆ ಇಂಜಿನಿಯರ್ ಯೋಗ್ಯತೆಯನ್ನು ಪ್ರಶ್ನಿಸುವುದು ಗ್ಯಾರಂಟಿ. ಸಾಮಾಜಿಕ ಜಾಲತಾಣದಲ್ಲಿ ಕಳಪೆ ಕಾಮಗಾರಿ ಬಗ್ಗೆ ವಿಡಿಯೋ ವೈರಲ್ ಆಗುತ್ತಿದೆ. ವಾಟ್ಸಾಪ್‌ನಲ್ಲಿ ಬಹಳ ಚರ್ಚೆ ನಡೆಯುತ್ತಿದೆ.
ಅಧಿಕಾರಿಗಳು ರಸ್ತೆಯ ಗುಣಮಟ್ಟ ಪರಿಶೀಲಿಸಿ ಹಣ ಬಿಡುಗಡೆಗೊಳಿಸಬೇಕು. ಆದರೆ ಅಧಿಕಾರಿಗಳ ಬೇಜವಾಬ್ದಾರಿ ಈ ರಸ್ತೆ ನೋಡಿದರೆ ತಿಳಿಯುತ್ತದೆ. ಸಾರ್ವಜನಿಕರ ಹಣ ದೂರು ಉಪಯೋಗಪಡಿಸಿ ಇವರ ಲಾಭಕ್ಕೆ ಕಳಪೆ ಮಟ್ಟದ ರಸ್ತೆ ಮಾಡಿದ್ದಾರೆ. ಕೂಡಲೆ ಸಂಬಂಧ ಪಟ್ಟ ಅಧಿಕಾರಿಗಳು ಇದನ್ನು ಸರಿಪಡಿಸದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. -ಕುಚ್ಚೂರು ಶ್ರೀಕಾಂತ್ ಪೂಜಾರಿ, ಅಧ್ಯಕ್ಷರು ಜೆಡಿಎಸ್ ಕಾರ್ಕಳ
ಮಂಡಾಡಿ ಜೆಡ್ಡಿನಿಂದ ಹಂದಿಕಲ್ಲಿಗೆ ಹೋಗುವ 330 ಮೀಟರ್ ರಸ್ತೆಯ ಬಗ್ಗೆ ಈಗಾಗಲೇ ನಮ್ಮ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. -ದಿನೇಶ್, ಎಇಇ, ಲೋಕೋಪಯೋಗಿ ಇಲಾಖೆ ಉಡುಪಿ