

ಪ್ರವೀಣ್‌ರಾಜ್ ಕೈೊಲ ಕಡಬ
ಕಡಬ ತಾಲೂಕು ಕೊಲ ಮತ್ತು ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕ ರಸ್ತೆಯುದ್ದಕ್ಕೂ ಡಾಂಬರಿಗಿಂತಲೂ ಭಾರಿ ಗಾತ್ರದ ಹೊಂಡಗುಂಡಿಗಳೇ ಹೆಚ್ಚು ವಿಜೃಂಭಿಸುತ್ತಿವೆ. ಜತೆಗೆ ಈ ರಸ್ತೆಯ ಅಭಿವೃದ್ಧಿ ಕೇವಲ ತೇಪೆ ಕಾರ್ಯಕ್ಕೆ ಸೀಮಿತವಾಗಿದೆ.
ನಿತ್ಯವೂ ನೂರಾರು ವಾಹನಗಳು ಸಂಚರಿಸುವ ಈ ರಸ್ತೆ ಪ್ರತೀ ವರ್ಷದಂತೆ ದಶಕಗಳಿಂದ ಒಂದಷ್ಟು ತೇಪೆ ಕಾರ್ಯಗಳಿಗೆ ಒಳಪಡುತ್ತಿದೆ. ಪ್ರತಿ ಬಾರಿಯೂ ಮಳೆಗಾಲದ ಆರಂಭದಲ್ಲೇ ತೇಪೆ ಕಿತ್ತುಹೋಗಿ ಮತ್ತದೇ ಹೊಂಡಗಳು ಬಾಯ್ತೆರೆದುಕೊಳ್ಳುತ್ತಿದ್ದು, ವಾಹನ ಸವಾರರ ಗೋಳಿಗೆ ಕೊನೆಯಿಲ್ಲದಾಗಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಎಸ್.ಅಂಗಾರ ಶಿಫಾರಸಿನಂತೆ 4.50 ಲಕ್ಷ ರೂ. ವೆಚ್ಚದಲ್ಲಿ ತೇಪೆ ಕಾರ್ಯ ಕೈಗೊಂಡಿದ್ದು, ಕಳೆದ ವಿಧಾನಸಭಾ ಚುನಾವಣೆ ಮೊದಲು ದುರಸ್ತಿಗೊಳಿಸಲಾಗಿತ್ತು. ಬಳಿಕ ಶಾಸಕಿ ಭಾಗೀರಥಿ ಮುರುಳ್ಯ ಶಿಪಾರಿಸಿನ ಅನ್ವಯ 9.13 ಲಕ್ಷ ರೂ ವೆಚ್ಚದಲ್ಲೂ ತೇಪೆ ಹಾಕಲಾಗಿತ್ತು.
ಎಂಟು ವರ್ಷಗಳ ಹಿಂದೆ ನಬಾರ್ಡ್ ಯೋಜನೆ ಮೂಲಕ ಸುಮಾರು 34 ಲಕ್ಷ ರೂ. ವೆಚ್ಚದಲ್ಲಿ ಗೋಳಿತ್ತಡಿಯಿಂದ ನೆಲ್ಯೊಟ್ಟು ತನಕ ಮರುಡಾಂಬರಿಕರಣಗೊಳಿಸಿದ್ದು, ಕೆಲವು ತಿಂಗಳುಗಳೊಳಗೆ ಮತ್ತೊಮ್ಮೆ ಹೊಂಡಮಯವಾಗಿತ್ತು. ಕಳಪೆ ಕಾಮಗಾರಿ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಮರುಡಾಂಬರೀಕರಣ ಮಾಡಿದ್ದರೂ ಮುಂದಿನ ವರ್ಷವೇ ಭಾರಿ ಹೊಂಡಗಳು ಬಾಯ್ತೆರೆದುಕೊಂಡವು. ಶೀಘ್ರವೇ ರಸ್ತೆಯನ್ನು ಸಂಪೂರ್ಣ ಡಾಂಬರೀಕರಣ ಅಥವಾ ಕಾಂಕ್ರೀಟಿಕರಣಗೊಳಿಸದೇ ಇದ್ದಲ್ಲಿ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಗೋಳಿತ್ತಡಿಯಿಂದ ಏಣಿತ್ತಡ್ಕ, ಕುದುಲೂರು, ಕಕ್ವೆ, ಬುಡಲೂರು, ಕೊಲ್ಯ, ಸಬಳೂರು, ಪರಂಗಾಜೆ ಮೊದಲಾದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಹಲವೆಡೆ ಮರಣಬಾವಿಯಂತಿರುವ ಹೊಂಡಗಳಿದ್ದು, ಹಲವು ಬಾರಿ ಅಪಘಾತಗಳು ನಡೆದಿವೆ. ಮಳೆಗಾಲದಲ್ಲಿ ಹೊಂಡಗಳಲ್ಲಿ ನೀರು ತುಂಬಿ ಅವಘಡಗಳಿಗೆ ದಾರಿಯಾಗುತ್ತಿವೆ.
ಮಳೆಗಾಲದಲ್ಲಿ ಬಾಯ್ತೆರೆಯುವ ಗುಂಡಿಗಳು ಅನುದಾನ ಪೋಲು, ಕಳಪೆ ಕಾಮಗಾರಿ ಶಾಶ್ವತ ಪರಿಹಾರಕ್ಕೆ ಸ್ಥಳೀಯರ ಪಟ್ಟು https://www.vijayavani.net/two-arrested-for-prostitution-in-mangalore https://www.vijayavani.net/h-w-center