

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಹಾಗೂ ಗ್ರಾಮೀಣ ಭಾಗದ ಜನರಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಸಂಪರ್ಕ ಕಲ್ಪಸುವ ಜಿಲ್ಲಾ ಪಂಚಾಯಿತಿ ರಸ್ತೆ ಮೂಲಸೌಲಭ್ಯ ವಂಚಿತವಾಗಿದೆ. ಹೊಂಡಗಳಿಂದ ಕೂಡಿದ ಈ ರಸ್ತೆ ಸಂಚಾರ ತ್ರಾಸದಾಯಕವಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರಿಂದ ಮುಳ್ಳಿಕಟ್ಟೆ ಮೂಲಕ ಆಲೂರು ಕಳಿ ಚಿತ್ತೂರು ಸೇರಿ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುತ್ತಿದ್ದರೆ, ಗ್ರಾಮೀಣ ಭಾಗದ ಪಡುಕೋಣೆ, ನಾಡಾ, ಹಕ್ಲಾಡಿ, ಆಲೂರು ಜನರಿಗೆ ಕೊಲ್ಲೂರು ಸೇರುವ ಪ್ರಮುಖ ರಸ್ತೆಯಾಗಿದೆ. ಕಂಚಿನಕೊಡ್ಲ ಆಲೂರು ಕ್ರಾಸ್‌ನಿಂದ ಕಳಿಯ ತನಕ ಚಿತ್ತೂರು, ವಂಡ್ಸೆ ಮತ್ತು ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ರಸ್ತೆ ಸಾಗಿದ್ದು, ಹತ್ತಾರು ಕುಟುಂಬ ರಸ್ತೆಯ ಆಸುಪಾಸಿನಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿಯ ತನಕ ಈ ರಸ್ತೆಗೆ ದಾರಿದೀಪ, ಒಳಚರಂಡಿ, ಸೂಚನಾ ಫಲಕ, ರಸ್ತೆತಡೆ ಮಾಹಿತಿ ಮುಂತಾದ ಯಾವುದೇ ವ್ಯವಸ್ಥೆ ಇಲ್ಲ.
ದಿನಂಪ್ರತಿ ಸಾವಿರಾರು ವಾಹನಗಳು ಈ ಮಾರ್ಗದಲ್ಲ್ಲಿ ಸಂಚರಿಸುತ್ತಿದ್ದು ಅಪಘಾತಗಳು ಸಹ ಸಂಭವಿಸುತ್ತಲೇ ಇದೆ. ಕೆಲವೊಂದು ಕಡೆ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಯ ನೀರು ರಸ್ತೆಯ ಮೇಲೆ ಹರಿದು ಹೋಗುತ್ತಿದೆ. ಇದೇ ರಸ್ತೆಯಲ್ಲಿ ಸರ್ಕಾರಿ ಶಾಲೆಯಿದ್ದು, ಇಲ್ಲಿಯೂ ಸುರಕ್ಷತೆ ಬಗ್ಗೆ ರಸ್ತೆತಡೆ ಅಥವಾ ವೇಗಮಿತಿಗೆ ಸೂಚನಾ ಫಲಕದ ವ್ಯವಸ್ಥೆಯೂ ಇಲ್ಲ.
ಅರಣ್ಯ ನಡುವೆ ಸಾಗುವ ಆಲೂರು ಚಿತ್ತೂರು ಪ್ರಮುಖ ರಸ್ತೆಯಲ್ಲಿ ರಾತ್ರಿ ವೇಳೆ ಸಂಚರಿಸುವುದು ಅಪಾಯಕಾರಿ. ಈ ಬಗ್ಗೆ ಹಲವಾರು ಬಾರಿ ಸ್ಥಳೀಯ ನಾಗರಿಕರು ಜನಪ್ರತಿನಿಧಿಗಳಲ್ಲಿ ಅಧಿಕಾರಿಗಳಲ್ಲಿ ತಮ್ಮ ಅಳಲನ್ನು ತೋರಿಕೊಂಡರೂ ಪ್ರಯೋಜನವಾಗಲಿಲ್ಲ. ರಸ್ತೆಗೆ ಮೂಲಸೌಕರ್ಯ ನಿಟ್ಟಿನಲ್ಲಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಕಾರ್ಯ ಪ್ರವೃತ್ತರಾಗಬೇಕು. ಎಚ್.ಆನಂದ ಮಡಿವಾಳ ವಕೀಲ ಆಲೂರು - ಚಿತ್ತೂರು ರಸ್ತೆ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿಗೆ ಅರಿವಿದೆ. ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಗಮನಕ್ಕೆ ತರಲಾಗುವುದು. ಶಾಸಕರ ಅನುದಾನ ಅಥವಾ ಇನ್ಯಾವುದಾದರೂ ಅನುದಾನ ನೀಡುವಂತೆ ಗಮನ ಸೆಳೆಯಲಾಗುವುದು. ಸುಬ್ಬಣ್ಣ ಶೆಟ್ಟಿ ಅಧ್ಯಕ್ಷರು, ಆಲೂರು ಗ್ರಾಮ ಪಂಚಾಯಿತಿ