ಕೆಸರು ರಸ್ತೆಯಲ್ಲಿ ವಾಹನಗಳ ಡೊಂಬರಾಟ ROAD

ಪಾಟ್ರಕೋಡಿಯಿಂದ ಕೆದಿಲ ಸಂಪರ್ಕ ರಸ್ತೆ ೫೦೦ ಮೀ. ಕೆಸರುಗದ್ದೆಯಂತಾಗಿರುವುದು.
ಪಾಟ್ರಕೋಡಿಯಿಂದ ಕೆದಿಲ ಸಂಪರ್ಕ ರಸ್ತೆ ೫೦೦ ಮೀ. ಕೆಸರುಗದ್ದೆಯಂತಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಸಂಪೂರ್ಣ ಹದಗೆಟ್ಟ ಪಾಟ್ರಕೋಡಿಯಿಂದ ಕೆದಿಲ ಸಂಪರ್ಕ ಮಾರ್ಗ
ಪುತ್ತೂರು : ಮಳೆ ನೀರು ಹರಿಯಲು ಸಮರ್ಪಕ ವ್ಯವಸ್ಥೆಯಿಲ್ಲದೆ ಗ್ರಾಮೀಣ ಭಾಗದ ರಸ್ತೆಗಳು ಕೆಸರುಮಯವಾಗಿ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿದೆ. ಜನಸಾಮಾನ್ಯರಿಗೆ ನಿತ್ಯ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದರೂ, ತುರ್ತು ಕ್ರಮ ತೆಗೆದುಕೊಳ್ಳಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ರಸ್ತೆ ದುರಸ್ತಿ ಹೆಸರಿನಲ್ಲಿ ಕಳಪೆ ಕಾಮಗಾರಿ ನಡೆಸಿ, ನೀರಿನ ಪೈಪ್ ಅಳವಡಿಕೆಗೆ ಅಡ್ಡಾದಿಡ್ಡಿ ಅಗೆದು ಹಾಕಿ ಈಗ ಪ್ರಕೃತಿ ವಿಕೋಪದ ಕಾರಣ ನೀಡಲಾಗುತ್ತಿದೆ.
ಮಾಣಿ-ಮೈಸೂರು ಹೆದ್ದಾರಿಯ ಪಾಟ್ರಕೋಡಿಯಿಂದ ಕೆದಿಲ ಸಂಪರ್ಕ ರಸ್ತೆ ೫೦೦ ಮೀ. ಅಭಿವೃದ್ಧಿಯಾಗದೆ ಉಳಿದಿದೆ. ರಾಜಕೀಯ ನಾಯಕರ ನಿರ್ಲಕ್ಷ್ಯದಿಂದ ಹಲವು ವರ್ಷಗಳಿಂದ ರಸ್ತೆ ದುರಸ್ತಿ ಕಂಡಿಲ್ಲ. ಬೇಸಿಗೆಯಲ್ಲಿ ಮಣ್ಣು ತುಂಬಿದ್ದರಿಂದ ಮಳೆಗೆ ರಸ್ತೆ ರಾಡಿಯೆದ್ದು ಸಂಚಾರ ದುಸ್ತರವಾಗಿದೆ. ರಸ್ತೆಗೆ ಅನುದಾನ ತಂದು ದುರಸ್ತಿ ಮಾಡಲು ಕ್ರಮ ಕೈಗೊಳ್ಳದಿದ್ದರೆ ಮುಂಬರುವ ಚುನಾವಣೆಗಳಲ್ಲಿ ಜನರಲ್ಲಿ ಮತ ಯಾಚಿಸುವುದು ಕಷ್ಟವಾಗಲಿದೆ ಎಂದು ಸಂಸದರು ಹಾಗೂ ಪಕ್ಷದ ಪ್ರಮುಖರೊಂದಿಗೆ ಬಿಜೆಪಿ ಗ್ರಾಮ ಸಮಿತಿ ಪದಾಧಿಕಾರಿಗಳು ನಡೆಸಿರುವ ಸಂಭಾಷಣೆ ಈಗ ವೈರಲ್ ಆಗಿದೆ.
ದುರಸ್ತಿ ಹೆಸರಿನಲ್ಲಿ ಕಳಪೆ ಕಾಮಗಾರಿ ನಡೆಸಿದರೂ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿಲ್ಲ. ಕೆಲಸ ಮಾಡಿಸಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗುತ್ತಿದ್ದಾರೆ. ಕೆಲಸದ ಅವಧಿ ಮುಗಿಯುವಾಗ ಗುತ್ತಿಗೆದಾರರು ಅಲ್ಲಲ್ಲಿ ತೇಪೆ ಹಾಕಿ ಜಾರಿಕೊಳ್ಳುತ್ತಿದ್ದಾರೆ. ಜನಪ್ರತಿನಿಧಿಗಳೂ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಬೇಕಾದ ಕ್ರಮ ತೆಗೆದುಕೊಳ್ಳುತ್ತಿಲ್ಲ.

ನೀರಿನ ಪೈಪ್ ಅಳವಡಿಕೆಗೆ ಅಗೆತ

ಬಲ್ನಾಡು-ಕುರುಡಕಟ್ಟೆ-ದೇರಾಜೆ ರಸ್ತೆಯನ್ನು ಮುದಲೆಗುಂಡಿ ಭಾಗದಲ್ಲಿ ವರ್ಷದ ಹಿಂದೆ ದುರಸ್ತಿ ಮಾಡಿದ್ದು, ಕೆಲವು ತಿಂಗಳಲ್ಲೇ ಡಾಂಬರು ಕಿತ್ತು ಹೋಗಿತ್ತು. ಇದರ ಜತೆಗೆ ಪೈಪ್‌ಲೈನ್ ಅಳವಡಿಸಲು ರಸ್ತೆಯನ್ನು ಅಡ್ಡಲಾಗಿ ಅಗೆದು ಮಣ್ಣು ತುಂಬಿ ಬಿಟ್ಟಿದ್ದು ಡಾಂಬರೀಕರಣ ಮಾಡಿಲ್ಲ. ಇದರ ಪರಿಣಾಮ ರಸ್ತೆಯಲ್ಲೇ ನೀರು ನಿಂತು ಕೆಸರುಮಯವಾಗಿದೆ. ಮಳೆಗಾಲ ಮುಗಿಯುವ ವೇಳೆ ರಸ್ತೆ ಕೆರೆಯಂತಾಗಿ ಸಂಪರ್ಕ ಕಡಿತವಾಗುವ ಆತಂಕ ಎದುರಾಗಿದೆ.

ಇಂಟರ್‌ಲಾಕ್ ಮಾರ್ಗದಲ್ಲೂ ನೀರು

ಪುತ್ತೂರು ನಗರಸಭೆಯಿಂದ ಉಜ್ರುಪಾದೆಯಲ್ಲಿ ರಸ್ತೆಯಲ್ಲಿ ನೀರು ನಿಲ್ಲುವ ಕಾರಣಕ್ಕೆ ರಸ್ತೆ ಸಂಚಾರ ತಡೆದು ಇಂಟರ್‌ಲಾಕ್ ಅಳವಡಿಸಲಾಗಿತ್ತು. ಈ ಸಂದರ್ಭ ಸೂಕ್ತ ಚರಂಡಿ ನಿರ್ಮಿಸಿಲ್ಲ ಎಂದು ಇಂಜಿನಿಯರ್‌ಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಲಾಗಿತ್ತು. ಸದ್ಯ ನೀರು ಇಂಟರ್‌ಲಾಕ್‌ನಲ್ಲೇ ನಿಂತು ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಅಕ್ಕಪಕ್ಕದವರೂ ತ್ಯಾಜ್ಯ ನೀರನ್ನು ರಸ್ತೆಗೆ ಬಿಡುತ್ತಿದ್ದಾರೆ.

ಲಕ್ಷಾಂತರ ರೂ. ಅನುದಾನ ಪೋಲು!

ರಸ್ತೆಯ ಬದಿಯಲ್ಲಿ ಸೂಕ್ತ ಚರಂಡಿಗಳನ್ನು ನೀಡದೆ, ರಸ್ತೆಯಲ್ಲಿ ಹರಿಯುವ ನೀರಿಗೂ ಸರಿಯಾದ ವ್ಯವಸ್ಥೆ ಮಾಡದೆ ಅವೈಜ್ಞಾನಿಕವಾಗಿ ಅಗೆಯಲಾಗುತ್ತಿದೆ. ಸೂಕ್ತ ತಡೆಗೋಡೆಗಳ ನಿರ್ಮಾಣ ಮಾಡದೆ, ಭಾರಿ ಹಾನಿಗೆ ಕಾರಣವಾಗುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯ ಮುಚ್ಚಿಟ್ಟು ಪ್ರಕೃತಿ ವಿಕೋಪದ ಕಾರಣವನ್ನು ನೀಡಿ ಲಕ್ಷಾಂತರ ರೂ. ಅನುದಾನ ಪೋಲು ಮಾಡಲಾಗುತ್ತಿದೆ.
"

ಮಳೆಗಾಲದ ಮೊದಲು ರಸ್ತೆ ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚಲಾಗುತ್ತದೆ. ಮಳೆಗೆ ಇದು ಕೆಸರುರಸ್ತೆಯಾಗಿ ವಾಹನಗಳು, ಪಾದಚಾರಿಗಳು ಸಂಚರಿಸಲಾಗದಂತಹ ಸ್ಥಿತಿ ಉಂಟಾಗುತ್ತದೆ. ತುರ್ತು ಕ್ರಮಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಜನರೇ ಪರ್ಯಾಯ ಮಾರ್ಗವನ್ನು ಹುಡುಕಿಕೊಳ್ಳುವಂತಾಗಿದೆ.

— ಶರತ್, ವಾಹನ ಸವಾರ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net