

ಪ್ರವೀಣ್‌ರಾಜ್ ಕಡಬ
ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಡ್ಯಡ್ಕ, ಬೊಳ್ಳೆಕುಕ್ಕು, ಚಾಕೋಟೆ ರಸ್ತೆ ಅಭಿವೃದ್ಧಿಪಡಿಸುವಂತೆ ಹಲವು ವರ್ಷಗಳಿಂದ ಸ್ಥಳೀಯರು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ನೀಡುತ್ತಾ ಬಂದಿದ್ದರೂ ಪ್ರಯೋಜನ ಮಾತ್ರ ಶೂನ್ಯ..!
ದಿನಂಪ್ರತಿ ನೂರಾರು ವಾಹನ ಸಂಚರಿಸುವ ಈ ರಸ್ತೆಯನ್ನು ಕೃಷಿಕರು, ವಿದ್ಯಾರ್ಥಿಗಳು ಸೇರಿ ಸಾರ್ವಜನಿಕರು ಬಳಸುತ್ತಿದ್ದಾರೆ. ಮಳೆಗಾಲದಲ್ಲಿ ಈ ರಸ್ತೆ ಪರಿಸ್ಥಿತಿ ಸಂಪೂರ್ಣ ಹದಗೆಟ್ಟು, ವಾಹನ ಸಂಚಾರ ಬಿಡಿ ಜನರು ನಡೆದು ಹೋಗಲೂ ದುಸ್ತರವಾಗುತ್ತದೆ. 40 ವರ್ಷಗಳಿಂದ ಈ ರಸ್ತೆಯನ್ನು ಅಭಿವೃದ್ಧಿಪಡಿಸದ ಹಿನ್ನೆಲೆಯಲ್ಲಿ ಸ್ಥಳೀಯರು ಸೇರಿ ‘ರಸ್ತೆ ಇಲ್ಲ, ಮತ ಇಲ್ಲ’ ಎಂಬ ಅಭಿಯಾನ ನಡೆಸಿದ್ದ ವೇಳೆ ರಾಜಕೀಯ ಪ್ರಮುಖರು ಭರವಸೆ ನೀಡಿದ್ದು ಬಿಟ್ಟರೆ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ದ.ಕ. ಜಿಲ್ಲಾಧಿಕಾರಿಗಳಿಗೆ, ಪುತ್ತೂರಿನ ಉಪ ಆಯುಕ್ತರಿಗೆ, ಕಡಬ ತಹಸೀಲ್ದಾರ್‌ಗೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಚುನಾವಣೆಗಳ ಸಂದರ್ಭ ಚುನಾವಣಾಧಿಕಾರಿಗಳಿಗೂ ದೂರು ನೀಡಲಾಗಿತ್ತು. ಆದರೆ ದೂರನ್ನು ಯಾರೊಬ್ಬರೂ ಗಂಭೀರವಾಗಿ ಪರಿಗಣಿಸಿಲ್ಲ. ಅಧಿಕಾರಿಗಳು ಸೇರಿದಂತೆ ಜಿಲ್ಲಾಧಿಕಾರಿಯವರು ರಸ್ತೆ ಸರಿಪಡಿಸುವ ಭರವಸೆ ನೀಡಿದರೂ ಅನುದಾನ ಇಲ್ಲ ಎಂಬ ಕಾರಣ ಹೇಳಿಕೊಂಡು ರಸ್ತೆ ಅಭಿವೃದ್ಧಿ ಕಾಮಗಾರಿ ಇನ್ನೂ ನಡೆದಿಲ್ಲ.
ತೆರವಾಗದ ಒತ್ತುವರಿ
ಸ್ಥಳೀಯರ ಮನವಿ ಮೇರೆಗೆ ಕಳೆದ ವರ್ಷ ಖುದ್ದು ಪುತ್ತೂರು ಸಹಾಯಕ ಆಯುಕ್ತರು ಕಡಬ ತಹಸೀಲ್ದಾರ್, ಕಂದಾಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ, ಮೆಸ್ಕಾಂ ಅಧಿಕಾರಿಗಳ ಜತೆ ಭೇಟಿ ನೀಡಿ ರಸ್ತೆ ದುರವಸ್ಥೆಯನ್ನು ಪರಿಶೀಲಿಸಿದ್ದರು. ರಸ್ತೆಯ ಪಕ್ಕದಲ್ಲಿ ಚರಂಡಿ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿ, ರಸ್ತೆ ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಕೈಗೊಂಡು ಒತ್ತುವರಿ ತೆರವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು. ಆದರೆ ಅದು ಈ ತನಕ ಜಾರಿಯಾಗಿಲ್ಲ.
ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಕಳೆದ ತಿಂಗಳು ನಡೆದ ಕಡಬ ಪಟ್ಟಣ ಪಂಚಾಯಿತಿ ಚುನಾವಣೆ ಬಹಿಷ್ಕರಿಸುವ ಚಿಂತನೆ ಮಾಡಿದಾಗ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತೆ ಸ್ಥಳಕ್ಕೆ ಭೇಟಿ ಮಾಡಿ ರಸ್ತೆ ಸರಿಪಡಿಸುವ ಭರವಸೆ ನೀಡಿದ್ದರು. ಆದರೆ ಈಗ ಅನುದಾನ ಇಲ್ಲ ಎನ್ನುತ್ತಾರೆ. ರಸ್ತೆ ದುರವಸ್ಥೆಯಿಂದಾಗಿ ಈ ಪ್ರದೇಶಗಳಿಗೆ ಆಟೋದವರೂ ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಸಂಬಂಧಪಟ್ಟವರು ನಮ್ಮ ರಸ್ತೆಯ ಅಭಿವೃದ್ಧಿಗೆ ಮುಂದಾಗದಿದ್ದರೆ ಪ್ರತಿಭಟನೆ ಅನಿವಾರ್ಯ. ಪ್ರಕಾಶ್ ಜಿ., ಸ್ಥಳೀಯ ನಿವಾಸಿ